ಮತದಾರರ ಗೆಲವು: ತಹಸೀಲ್ದಾರ್
ಹಾನಗಲ: ಇದು ಜನಸಾಮಾನ್ಯ, ಅಭಿಮಾನಿ ಮತದಾರರ ಗೆಲುವು. ಸ್ವಯಂಪ್ರೇರಣೆಯಿಂದ ಕಾರ್ಯಕರ್ತರು ಶ್ರಮಿಸಿ ಭ್ರಷ್ಟ ಬಿಜೆಪಿ ಸರಕಾರದ ಹಗರಣಕ್ಕೆ ಬೇಸತ್ತು ತಮ್ಮನ್ನು ಗೆಲ್ಲಿಸಿದ್ದಾರೆ ಎಂದು ವಿಧಾನಸಭೆ ಮಾಜಿ ಉಪಸಭಾಪತಿ, ವಿಜೇತ ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್ ಹೇಳಿದರು.
ಹಾನಗಲ್ಲ ತಾಲೂಕಿನ ತಮ್ಮ ಹುಟ್ಟೂರು ಅಕ್ಕಿವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸ್ವಜನ ಪಕ್ಷಪಾತ, ತಾರತಮ್ಯ ನೀತಿ ಮೂಲಕ ಬಡವರನ್ನು ಸೌಲಭ್ಯಗಳಿಂದ ವಂಚಿಸಿದೆ. ಹಣ ಅಥವಾ ಆಮಿಷಗಳಿಂದ ಮತದಾರರನ್ನು ಸೆಳೆಯಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ.
ಈ ಚುನಾವಣೆಯಲ್ಲಿ ಯುವಕರು ಮಹತ್ವದ ಪಾತ್ರ ವಹಿಸಿ ಕಾಂಗ್ರೆಸ್ ಪರ ಗೆಲವಿಗೆ ಶ್ರಮಿಸಿದ್ದಾರೆ. ಕೆಲ ನಾಯಕರು ಹಣದ ಆಮಿಷಕ್ಕೆ ಒಳಗಾದರೂ ಪ್ರಾಮಾಣಿಕ ಮತದಾರರು ತಮ್ಮನ್ನು ಬೆಂಬಲಿಸಿದ್ದಾರೆ. ಬಿಜೆಪಿ ಸರಕಾರದಲ್ಲಿ ಪಡಿತರ, ಉದ್ಯೋಗ ಖಾತ್ರಿ, ವಿದ್ಯುತ್, ಸಾಲಮನ್ನಾ, ಬೆಳೆವಿಮೆ ಸೌಲಭ್ಯಗಳು ಮತದಾರರನ್ನು ಕಂಗೆಡಿಸಿವೆ.
ಕಾಂಗ್ರೆಸ್ ಜವಾಬ್ದಾರಿಯುತ ಪಕ್ಷ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಪಕ್ಷದ ಪ್ರಣಾಳಿಕೆ ಯಥಾವತ್ತಾಗಿ ಜಾರಿಗೆ ತರುತ್ತೇವೆ. ಕುಡಿಯುವ ನೀರಿಗೆ ಆದ್ಯತೆ ನೀಡುತ್ತೇವೆ ಎಂದ ಮನೋಹರ ತಹಸೀಲ್ದಾರ್ ಅವರು ಮಂತ್ರಿಯಾಗುವ ಆಶಾಭಾವವಿದೆ. ಪಕ್ಷದಲ್ಲಿ ಹಿರಿತನ ಆಧರಿಸಿ ತಮಗೆ ಮಂತ್ರಿ ಸ್ಥಾನ ಸಾಧ್ಯ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿ.ಎಸ್. ಬಡಿಗೇರ, ಕೆ.ಎಲ್. ದೇಶಪಾಂಡೆ, ಎನ್.ಎಸ್. ಪಡೆಪ್ಪನವರ, ಘನಶ್ಯಾಮ ದೇಶಪಾಂಡೆ, ಪ್ರಶಾಂತ ನಾಡಿಗೇರ, ವಿದ್ಯಾಶಂಕರ ದೇಶಪಾಂಡೆ, ಸಿದ್ದಲಿಂಗೇಶ್ವರ ಅರಳಲಿಮಠ, ಶೇಕಣ್ಣ ಗೂಳಿ ಈ ಸಂದರ್ಭದಲ್ಲಿದ್ದರು.