ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಹಿರೇಕೆರೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕಿನಾದ್ಯಂತ ಔಷಧಿ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಚಾವಡಿ ವೃತ್ತದಿಂದ ಮರವಣಿಗೆ ಮೂಲಕ ಮುಖ್ಯ ರಸ್ತೆಯ ಮಾರ್ಗದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಹಸೀಲ್ದಾರ್ ಕಚೇರಿ ಬಳಿ ಜಮಾವಣೆಗೊಂಡರು.
ಔಷಧಿ ವ್ಯಾಪಾರಿಗಳ ತಾಲೂಕು ಅಧ್ಯಕ್ಷ ಗಣಪತಿ ಜೀವಣ್ಣವರ, ಕೇಂದ್ರ ಸರ್ಕಾರದ ನ್ಯಾಯ ಸಮ್ಮತವಲ್ಲದ 2008ರ ಔಷಧ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ತಮಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಈ ಕಾಯ್ದೆಯನ್ನು ವಿರೋಧಿಸುತ್ತಿದೇವೆ, ಔಷಧ ವ್ಯಾಪಾರ ರಂಗದಲ್ಲಿ ಅಂತಾರಾಷ್ಟ್ರೀಯ ನೇರ ಹೂಡಿಕೆ ದೇಶಕ್ಕೆ ಮಾರಕವಾಗಿದೆ. ಎಫ್ಡಿಐಯನ್ನು ಸೇರ್ಪಡೆ ಮಾಡಬಾರದು. ಕೇಂದ್ರ ಸರ್ಕಾರದ ಹೊಸ ಔಷಧ ನಿಯಮಾವಳಿ ಪ್ರಕಾರ ಶೇಕಡಾವಾರು ಕಡಿತಗೊಳಿಸಿದ್ದರ ವಿರೋಧಿಸಿ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಸಂಘದ ಜಿಲ್ಲಾ ಜಂಟಿ ಸಹ ಕಾರ್ಯದರ್ಶಿ ರಾಜಕುಮಾರ ಮಡಿವಾಳರ, ಕೊಟ್ರೇಶ ಕಡಗಿ, ರವಿ ನಾಡಿಗೇರ, ಅಶೋಕ ಸಣ್ಣಕ್ಕಿ, ಉಮೇಶ ಭೀಮಕ್ಕನವರ, ಮಾಲತೇಶ ಜೀವಣ್ಣನವರ ಸೇರಿದಂತೆ ತಾಲೂಕಿನ ಮಾಸೂರು, ರಟ್ಟಿಹಳ್ಳಿ ಹಂಸಬಾವಿ ಹಾಗೂ ಕೋಡ ಗ್ರಾಮಗಳ ಎಲ್ಲ ಔಷಧ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.