ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬ್ಯಾಡಗಿಗೆ ಸಚಿವ ಸ್ಥಾನ?

Vishwanath S
Updated On : 11 May 2013, 11:04 am

ಬ್ಯಾಡಗಿ: ವಿಶ್ವಪ್ರಸಿದ್ಧ ಮೆಣಸಿಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ರಾಜಕೀಯವಾಗಿ ಅಷ್ಟೇನೂ ಪ್ರಾಬಲ್ಯ ಹೊಂದಿರದ ಈ ಕ್ಷೇತ್ರಕ್ಕೆ ಪ್ರಾತಿನಿದ್ಯ ವಿಷಯದಲ್ಲಿ ಹಿನ್ನೆಡೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಸ್ಥಳೀಯ ಕಾರ್ಯಕರ್ತರ ಕೂಗು, ಅವರ ಧ್ವನಿ ಕಾಂಗ್ರೆಸ್ ಹೈಕಮಾಂಡ್ ಕೇಳುವುದೇ.. ಇದು ಕ್ಷೇತ್ರದಲ್ಲಿ ಉದ್ಭವಿಸಿರುವ ಪ್ರಶ್ನೆ.
ಮಂತ್ರಿಗಿರಿ ವಂಚಿತ ಕ್ಷೇತ್ರ: 1997ಕ್ಕಿಂತಲೂ ಮುಂಚೆ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿದ್ದ ಬ್ಯಾಡಗಿ ಮತಕ್ಷೇತ್ರ 1978ರಿಂದ 2008ರ ವರೆಗೆ ಪರಿಶಿಷ್ಟ ಜಾತಿಗೆ ಮೀಸಲು ನಿಗದಿಯಾಗಿತ್ತು. ಹಿಂದುಳಿದ ವರ್ಗದಲ್ಲಿ ಅಂತಹ ಪ್ರಭಾವಿ ನಾಯಕರಿಲ್ಲದ ಕಾರಣ ಜಿಲ್ಲಾ ಕೇಂದ್ರ ಧಾರವಾಡ ಸೇರಿದಂತೆ ಹುಬ್ಬಳ್ಳಿ ಹಾಗೂ ಗದಗ ನಗರಗಳಿಗೆ ಹೆಚ್ಚಿನ ಪ್ರಾತಿನಿದ್ಯಗಳು ಹೆಚ್ಚು ಲಭಿಸಿವೆ ಎನ್ನಬಹುದು. 1997ರಲ್ಲಿ ಹೊಸ ಜಿಲ್ಲೆಯಾದ ಬಳಿಕ ಮೂವರು ಶಾಸಕರಾದರೂ ಸಚಿವ ಸ್ಥಾನ ಬ್ಯಾಡಗಿ ಕ್ಷೇತ್ರಕ್ಕೆ ಲಭಿಸಿಲ್ಲ.
ಈವರೆಗೂ ನಡೆದ 12 ಸಾರ್ವತ್ರಿಕ ಚುನಾವಣೆಗಳಲ್ಲಿ ಹೊರಗಿನವರು 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಣಿಬೆನ್ನೂರು ತಾಲೂಕಿನ ಕಾಕೋಳದ ಕೆ.ಎಫ್. ಪಾಟೀಲ, ಶಿಗ್ಗಾಂವಿ ತಾಲೂಕು ದುಂಡಶಿ ಗ್ರಾಮದ ಡಾ೤ ಎಚ್.ಡಿ. ಲಮಾಣಿ 1983 ಹಾಗೂ 1989ರಲ್ಲಿ, ಹುಬ್ಬಳ್ಳಿಯ ಕೆ.ಎಸ್. ಬೀಳಗಿ 1985 ಮತ್ತು 1994 ತಲಾ 2 ಬಾರಿ ಅಲ್ಲದೇ ರಾಣಿಬೆನ್ನೂರು ತಾಲೂಕಿನ ಖಂಡೇರಾಯನಹಳ್ಳಿ ರುದ್ರಪ್ಪ ಲಮಾಣಿ 1999ರಲ್ಲಿ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಹೀಗಾಗಿ ಸಚಿವ ಸ್ಥಾನಕ್ಕೆ ಅಷ್ಟೊಂದು ಮಹತ್ವ ದೊರೆತಿರಲಿಲ್ಲ.
ಮೂವರು ಸಚಿವರು: ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಎಫ್. ಪಾಟೀಲರು ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅದಾದ ಬಳಿಕ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್.ಡಿ. ಲಮಾಣಿ ಶಿಕ್ಷಣ ಸಚಿವರಾಗಿದ್ದರು. ಬಳಿಕ ಎಸ್.ಆರ್. ಬೊಮ್ಮಾಯಿ ಮುಖ್ಯಮ ಂತ್ರಿಯಾಗಿದ್ದಾಗ ಕೆ.ಎಸ್. ಬೀಳಗಿ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಕ್ಷೇತ್ರದ ಯಾವೊಬ್ಬ ಶಾಸಕರಿಗೂ ಸಚಿವರಾಗುವ ಅವಕಾಶ ಒದಗಿ ಬಂದಿಲ್ಲ.
ಸಾಮಾಜಿಕ ನ್ಯಾಯವೇ ಅಸ್ತ್ರ: ಶಿವಣ್ಣನವರ ಅವರಿಗೆ ಸಚಿವ ಸ್ಥಾನ ದೊರೆಯಲು ಸಾಮಾಜಿಕ ನ್ಯಾಯವೇ ಅಂತಿಮ ಅಸ್ತ್ರವಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಕಾಂಗ್ರೆಸ್ ಪಕ್ಷವು ಪ್ರತಿ ಲೋಕಸಭಾ ಕ್ಷೇತ್ರವನ್ನಾಧರಿಸಿ ಸಾಮಾಜಿಕ ನ್ಯಾಯದಡಿ ಪ್ರಾತಿನಿಧ್ಯವನ್ನು ನೀಡುವುದು ಇದಕ್ಕೆ ಕಾರಣವೆಂದರೂ ತಪ್ಪಾಗಲಿಕ್ಕಿಲ್ಲ.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿರುವ ಗದಗ ಶಾಸಕ ಎಚ್.ಕೆ. ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಇನ್ನುಳಿದಂತೆ ಹಾವೇರಿಯ ರುದ್ರಪ್ಪ ಲಮಾಣಿ ಹಾಗೂ ಶಿರಹಟ್ಟಿ ಶಾಸಕ ದೊಡ್ಮನಿ ಪರಿಶಿಷ್ಟ ವರ್ಗಕ್ಕೆ ಸೇರಿದವರು. ಹಾನಗಲ್ ಕ್ಷೇತ್ರದ ಶಾಸಕ ಮನೋಹರ ತಹಸೀಲ್ದಾರ್ ಬಲಿಜ ಸಮಾಜಕ್ಕೆ ಸೇರಿದವರಾಗಿದ್ದು, ಬಸವರಾಜ ಶಿವಣ್ಣನವರ ಒಬ್ಬರೇ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಕನಕದಾಸರ ಕರ್ಮಭೂಮಿ: ಕುರುಬ ಸಮುದಾಯದ ಆರಾದ್ಯದೈವ ದಾಸಶ್ರೇಷ್ಠ ಕನಕದಾಸರ ಕರ್ಮಭೂಮಿ ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹೊಂದಿರುವ ಬ್ಯಾಡಗಿ ಮತಕ್ಷೇತ್ರಕ್ಕೆ ಅದೇ ಸಮುದಾಯಕ್ಕೆ ಸೇರಿದ ಬಸವರಾಜ ಶಿವಣ್ಣನವರ ಶಾಸಕರಾಗಿ ಆಯ್ಕೆಯಾಗಿದ್ದು ಕಾಕತಾಳೀಯ. ಸಾಮಾಜಿಕ ನ್ಯಾಯದಡಿ ಕುರುಬ ಸಮುದಾಯಕ್ಕೆ ಪ್ರಾತಿನಿದ್ಯ ದೊರೆತಲ್ಲಿ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ಗ್ಯಾರಂಟಿ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.
ಅನುಭವಿ ರಾಜಕಾರಣಿ: ಜಿಪಂ ಸದಸ್ಯರಾಗಿ, 2 ಬಾರಿ ಶಾಸಕರಾಗಿರುವ ಶಿವಣ್ಣನವರ ಬಸವರಾಜ ಶಿವಣ್ಣನವರ ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್. ಪಾಟೀಲ ಅವರಂತಹ ಮೌಲ್ಯಾಧಾರಿತ ರಾಜಕಾರಣಿಗಳ ಗರಡಿಯಲ್ಲಿ ಪಳಗಿ ಜನತಾ ಪರಿವಾರದ ಸರ್ಕಾರದಲ್ಲಿ ಪರಿಸರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವಿ ರಾಜಕಾರಣಿಯಾಗಿದ್ದಾರೆ.
ಈಗಾಗಲೇ ಜಿಲ್ಲಾದ್ಯಂತ ಕಾಂಗ್ರೆಸ್ ಪಕ್ಷ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬಹಳಷ್ಟು ಶ್ರಮಿಸಿದ್ದು, ಸಚಿವ ಸ್ಥಾನ ದೊರೆತಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ದೊರೆಯಬಹುದು ಎಂಬುದು ಮತದಾರರ ಅನಿಸಿಕೆ.
ಕಾಂಗ್ರೆಸ್‌ನಲ್ಲಿರುವ ಹೈಕಮಾಂಡ್ ಸಂಸ್ಕೃತಿಯಿಂದ ಎಲ್ಲವೂ ದೆಹಲಿಯಿಂದಲೇ ನಿರ್ಧಾರವಾಗುವುದರಿಂದ ಬ್ಯಾಡಗಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆಯಲು ಕೈಚಳಕ ಮಾತ್ರ ನಡೆಯಲೇಬೇಕಾಗಿದೆ.

-ಶಿವಾಂದ ಮಲ್ಲಗೌಡರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement