ಸರ್ವ ಭಕ್ತರ ಇಷ್ಟಾರ್ಥ ಸಿದ್ಧಿಯ ಅರಳೆಲೆ ಹಿರೇಮಠ
ಶಿಗ್ಗಾಂವಿ: ತಾಲೂಕಿನ ಬಂಕಾಪುರದ ಬಂಕಾಪುರ ಭಾವೀಸ್ಮಹಲ್ ಕಟ್ಟಿಮನಿ ಅರಳೆಲೆ ಹಿರೇಮಠವು ಶ್ರೀ ಜಗದ್ಗುರು ರಂಭಾಪುರಿ ಪೀಠದ ರೇವಣಸಿದ್ಧೇಶ್ವರ ಜಗದ್ಗುರುಗಳ ಸ್ಪರ್ಶದಿಂದ ಸ್ಥಾಪಿಸಲ್ಪಟ್ಟ ಶಾಖಾ ಮಠಗಳಲ್ಲಿಯೇ ಪ್ರಭಾವಶಾಲಿಯಾದ ಮಠವಾಗಿದೆ.
ವೀರಶೈವ ಧರ್ಮವನ್ನು ಪ್ರಸಾರ ಮಾಡುತ್ತಾ ಮಾನವ ಕುಲಕೋಟಿಯ ಶ್ರೇಯಸ್ಸು ಬಯಸುತ್ತಿರುವ ಶ್ರೀಮಠಕ್ಕೆ ತನ್ನದೇ ಆದ ಭವ್ಯ ಪರಂಪರೆ ಇದ್ದು, ಅದು ನೂರಾರು ವರ್ಷಗಳ ಇತಿಹಾಸ ಹೊಂದಿದೆ.
ಜ. ರೇವಣಸಿದ್ಧ ಭಗವತ್ಪಾದರು ಒಮ್ಮೆ ಈಗಿನ ಬಂಕಾಪುರ ಬಳಿಯ ಚನ್ನಾಪುರ ಗ್ರಾಮ ವ್ಯಾಪ್ತಿಯ ಬೆಟ್ಟದ ಸಮೀಪದ ಆಗಮಿಸುತ್ತಾರೆ. ಅವರ ಕಣ್ಣಿಗೆ ಇಡೀ ಬೆಟ್ಟ ಶಿವಲಿಂಗದಂತೆ ಗೋಚರವಾಗುವುದರ ಜೊತೆಗೆ ಸುಂದರವಾಗಿ ಕಾಣುತ್ತದೆ. ಆಗ ಜ. ರೇವಣಸಿದ್ಧ ಭಗವತ್ಪಾದರು ಆ ಬೆಟ್ಟಕ್ಕೆ ಬಂದಾಕ್ಷಣ ಅವರ ಪ್ರಯಾಣದ ಆಯಾಸ ಕಡಿಮೆಯಾಗುತ್ತದೆ. ಆಗ ಶ್ರೀಗಳವರು ಮುಂದಿನ ಪ್ರವಾಸ ಮೊಟಕುಗೊಳಿಸಿ ಅಲ್ಲಿಯೇ ವಿಶ್ರಾಂತಿ ಪಡೆಯಲು ಅಣಿಯಾಗುತ್ತಾರೆ.
ಮಠ ಸ್ಥಾಪನೆಗೆ ನಿರ್ಧಾರ: ಚನ್ನಾಪುರ ಬೆಟ್ಟದಲ್ಲಿಯೇ ಘೋರ ತಪಸ್ಸು ಆಚರಿಸುತ್ತಾರೆ. ನಂತರದ ದಿನಗಳಲ್ಲಿ ಆಕಾಶವಾಣಿಯೊಂದು ಕೇಳಿ ಬಂದು ಇಲ್ಲಿ ಒಂದು ವೀರಶೈವ ಮಠ ಸ್ಥಾಪಿಸುವಂತೆ ರೇವಣಸಿದ್ಧ ಭಗವತ್ಪಾದರಿಗೆ ಆದೇಶ ನೀಡುತ್ತದೆ. ಅದರ ಪ್ರಕಾರ ಬಂಕರಸರ ನಾಡಿನ ಬಂಕಾಪುರದಲ್ಲಿ ವೀರಶೈವಮಠ ಸ್ಥಾಪಿಸಲು ಜ. ರೇವಣಸಿದ್ದ ಭಗವತ್ಪಾದರು ನಿರ್ಧರಿಸುತ್ತಾರೆ.
ಮಠ ಸ್ಥಾಪನೆಗೆ ನಾಂದಿ: ಬಂಕಾಪುರದ ಅಶ್ವತ್ಥ(ಅರಳೆ) ಮರವಿರುವ ಸ್ಥಳವನ್ನು ಭಕ್ತರಿಂದ ದಾನ ಪಡೆದು ಅಲ್ಲಿ ಶ್ರೀಮಠ ಸ್ಥಾಪಿಸುತ್ತಾರೆ. ನಂತರ ಬಂಕಾಪುರದಲ್ಲಿಯೇ ಓರ್ವ ವಟುವನ್ನು ಆಯ್ಕೆ ಮಾಡಿ ಆ ವಟುವಿಗೆ ಕ್ರಿ.ಪೂ 934ರಲ್ಲಿ ಪಟ್ಟಾಭಿಷೇಕ ಮಾಡಿ ವಟುವಿಗೆ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಎಂದು ನಾಮಕರಣ ಮಾಡುತ್ತಾರೆ. ಅಂದಿನಿಂದ ಬಂಕಾಪುರದ ಈ ಮಠವು ಅರಳೆಲೆ ಹಿರೇಮಠ ಎಂದು ಖ್ಯಾತವಾಗುತ್ತದೆ. ಬಳಿಕ ಜ. ರೇವಣಸಿದ್ಧ ಭಗವತ್ಪಾದರು ಅಲ್ಲಿಂದ ವಿಜಯಯಾತ್ರೆ ಕೈಗೊಳ್ಳುತ್ತಾರೆ.
ಶಿಷ್ಯರಾಗಿ ಸೇವೆ: ರಾಷ್ಟ್ರಕೂಟರು, ಹೊಯಳ್ಸರು, ವಿಜಯನಗರ ಅರಸರು, ಬಹಮನಿ ಸುಲ್ತಾನರು ನಂತರ ಕೆಳದಿ ಅರಸರು, ಹಂಡೆ ಮನೆತನದವರು ಹಾಗೂ ಬಂಕರಸರು ಈ ಬಂಕಾಪುರ ನಾಡನ್ನು ಆಳಿದರು ಎಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಇಲ್ಲಿ ಆಡಳಿತ ನಡೆಸಿದ ಎಲ್ಲ ಅರಸರು ಅರಳೆಲೆ ಹಿರೇಮಠದ ಶಿಷ್ಯರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಬಂಕರಸರು ಶ್ರೀಮಠದ ಮೇಲೆ ಅಪಾರ ಭಕ್ತಿ-ಶ್ರದ್ಧೆಗಳನ್ನು ಇಟ್ಟುಕೊಂಡಿದ್ದರು.
ಭಕ್ತಿಯ ದ್ಯೋತಕವಾಗಿ ಅರಸರು ಮಠಕ್ಕೆ ಗೌರವ ಕಾಣಿಕೆ ರೂಪದಲ್ಲಿ ಸುವರ್ಣ, ರಜತ, ಪೂಜಾ ಸಾಮಗ್ರಿಗಳು, ನಾಣ್ಯಗಳು ಮತ್ತು ಭೂಮಿಯನ್ನು ದಾನ ನೀಡಿದರೆಂಬ ಕುರಿತು ಉಲ್ಲೇಖಗಳಿವೆ. ಈವರೆಗೆ 100 ಶಿವಾಚಾರ್ಯ ಸ್ವಾಮಿಗಳು ಬಂಕಾಪುರ ಅರಳೆಲೆ ಹಿರೇಮಠದ ಪಟ್ಟಾಧ್ಯಕ್ಷರಾಗಿದ್ದಾರೆ.
ಯಶಸ್ವಿ ಮುನ್ನಡೆ: ಶ್ರೀಮಠದ 99ನೇ ಪಟ್ಟಾಧ್ಯಕ್ಷರಾಗಿದ್ದ ಲಿಂ. ರುದ್ರಮುನಿ ಶಿವಾಚಾರ್ಯರು ಕಾಯಕಯೋಗಿಗಳಾಗಿದ್ದವರು. ಕೃಷಿಯೇ ಶ್ರೀಮಠದ ಮೂಲ ಉದ್ಯೋಗವಾಗಿದ್ದು, ಮಠದ ಭೂಮಿಯಲ್ಲಿ ಬೆಳೆದ ದವಸ-ಧಾನ್ಯಗಳಿಂದ ಶ್ರೀಮಠಕ್ಕೆ ಬರುವ ಭಕ್ತರಿಗೆ ಅನ್ನ ಪ್ರಸಾದ ಮಾಡುತ್ತಿದ್ದರು. ಮಠವು ಶ್ರೇಯೋಭಿವೃದ್ಧಿ ಹೊಂದಿದ್ದು, ಈಗಿನ ಪಟ್ಟಾಧ್ಯಕ್ಷರಾಗಿರುವ ರೇವಣಸಿದ್ಧೇಶ್ವರ ಶಿವಾಚಾರ್ಯರು ಕೂಡ ತಮ್ಮ ಗುರುಗಳ ಮಾರ್ಗದರ್ಶನದ ಮೆರೆಗೆ ಶ್ರೀಮಠವನ್ನು ಉನ್ನತ ಹಾದಿಯಲ್ಲಿ ಮುನ್ನಡೆಸಿದ್ದಾರೆ.
ಮಠದ ಶ್ರೇಯೋಭಿವೃದ್ಧಿಗೆ ಸೇವೆ: ಬಂಕಾಪುರದ ಡಾ ಸಿದ್ಧಲಿಂಗಯ್ಯನವರ ಪುತ್ರ ಮಠದ ಈಗಿನ ಶ್ರೀಗಳು ತಮ್ಮ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಪೂರೈಸಿದರು. 11 ಮೇ 1987ರಂದು ಬಾಳೆಹೊನ್ನೂರಿನ ಮದ್ರಂಭಾಪುರಿ ವೀರಸಿಂಹಾಸನಾಧೀಶ್ವರದ ಶ್ರೀ 1008 ಜ. ಪ್ರಸನ್ನ ರೇಣುಕ ವೀರದ್ರಮುನಿದೇವ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಇವರನ್ನು ಅರಳೆಲೆ ಹಿರೇಮಠದ 100ನೇ ಪಟ್ಟಾಧ್ಯಕ್ಷರನ್ನಾಗಿ ಮಾಡಿದರು.
ಶ್ರೀಗಳು ಮುಂದೆ ನಿತ್ಯ ಒಂದಿಲ್ಲೊಂದು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಶ್ರೀ ಮಠ ಮತ್ತು ಬಂಕಾಪುರ ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಧರ್ಮ ಜಾಗೃತಿ ಮಾಡಿ ಈವರೆಗೆ ಶ್ರೀಗಳು 25 ಸಾವಿರ ವಟುಗಳಿಗೆ ಶಿವದೀಕ್ಷೆ ನೀಡಿದ್ದಾರೆ. 40 ಸಾವಿರಕ್ಕೂ ಹೆಚ್ಚಿನ ಭಕ್ತರಿಗೆ ಲಿಂಗಧಾರಣೆ ಮಾಡಿದ್ದಾರೆ. ಸದಾ ಭಕ್ತರ ಶ್ರೇಯೋಭಿವೃದ್ಧಿಗೆ ಹಗಲಿರುಳೆನ್ನದೆ ತಪಿಸುತ್ತಿರುವ ಶ್ರೀಗಳ ಬದುಕು ಇಂದು ನಮಗೆಲ್ಲರಿಗೂ ಆದರ್ಶ.
ಶ್ರೀಮಠದ ಪಟ್ಟಾಧ್ಯಕ್ಷರಾಗಿ 11 ಮೇ 2013ಕ್ಕೆ 25 ವರ್ಷ ತುಂಬುತ್ತಿದ್ದು, ಅದರ ಪ್ರಯುಕ್ತ ಶ್ರೀಮಠದಲ್ಲಿ ವಿಧಾಯಕ ಕಾರ್ಯಕ್ರಮಗಳನ್ನು ಆಚರಿಸಲು ಶ್ರೀಗಳು ಹಾಗೂ ಶಿಷ್ಯ ಬಳಗ ನಿರ್ಧರಿಸಿದೆ.
ವಿವಿಧ ಕಾರ್ಯಕ್ರಮ: ಸಮಾರಂಭದ ಸವಿನೆನಪಿಗಾಗಿ 25 ಶಿವಾಚಾರ್ಯರಿಗೆ ಗೌರವ ಸರ್ಮಣೆ, ರಜತ ಬೆಳಗು ನಾಮಾಂಕಿತದ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳ್ಳಲಿದೆ. ಸರ್ವಧರ್ಮ ಸಾಮೂಹಿಕ ವಿವಾಹ ಏರ್ಪಡಿಸಲು ತಿರ್ಮಾನಿಸಲಾಗಿದೆ. ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಲಿಂಗದೀಕ್ಷೆ, ಅಯ್ಯಾಚಾರ ಹಾಗೂ ಭಕ್ತರಿಗೆ ಸಂಸ್ಕಾರ ದೀಕ್ಷೆ ಕೂಡ ನಡೆಯಲಿದೆ. ನಾಡಿನ ಗಣ್ಯರು, ಸಾಹಿತಿಗಳು, ಕಲಾವಿದರಿಗೆ ಸನ್ಮಾನ ಜರುಗಲಿದೆ. ಸರ್ವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು ಮನ ಧನಗಳಿಂದ ಸೇವೆ ಸಲ್ಲಿಸಲು ಕೋರಲಾಗಿದೆ.
- ಬಿ.ಎಸ್. ಹಿರೇಮಠ