ಹಾನಗಲ್ಗುಂಟೇ ಮಂತ್ರಿ ಪಟ್ಟ
ಹಾನಗಲ್ಲ: ಸಿದ್ದು ಸಂಪುಟದಲ್ಲಿ ಕಾಂಗ್ರೆಸ್ನ ನಿಷ್ಠಾವಂತ ನಾಯಕ ಮನೋಹರ ಮಂತ್ರಿಯಾಗುವರೇ ಎಂಬ ಕುತೂಹಲ ತಾಲೂಕಿನ ಜನರದ್ದಾಗಿದ್ದು, ಕೆಂಪು ದೀಪದ ಕಾರು ಹಾನಗಲ್ಲಿನಲ್ಲಿ ಮತ್ತೆ ಓಡಾಡಬೇಕೆಂಬ ಬಯಕೆ ಕಾರ್ಯಕರ್ತರಿಂದ ವ್ಯಕ್ತವಾಗುತ್ತಿದೆ.
ಹಾನಗಲ್ಲ ತಾಲೂಕಿನ ರಾಜಕೀಯ ಇತಿಹಾಸದಲ್ಲಿ 9 ಬಾರಿ ಕಾಂಗ್ರೆಸ್ನ ಅಭ್ಯರ್ಥಿಯಾಗಿ ಸೋಲು-ಗೆಲುವುಗಳಲ್ಲಿ ಕಾಂಗ್ರೆಸ್ನ ಕೈಬಿಡದೆ 9ನೇ ಚುನಾವಣೆಯಲ್ಲಿ 4ನೇ ಗೆಲುವು ಸಾಧಿಸಿದ ಮನೋಹರ ತಹಸೀಲ್ದಾರ್ ತಮ್ಮ ಹಿರಿತನ ಆಧರಿಸಿ ಮಂತ್ರಿ ಪದವಿ ದಕ್ಕುತ್ತದೆ ಎಂಬ ಪೂರ್ಣ ವಿಶ್ವಾಸದಲ್ಲಿದ್ದಾರೆ.
ಉಪ ಸಭಾಪತಿ ಸ್ಥಾನಕ್ಕೆ ತೃಪ್ತಿ: ಎಸ್.ಎಂ. ಕೃಷ್ಣ ಸರಕಾರದಲ್ಲಿ ಮಂತ್ರಿ ಪದವಿಗಾಗಿ ಮಾಡಿದ ಹೋರಾಟಗಳು ವಿಫಲವಾಗಿ, ವಿಧಾನಸಭೆ ಉಪ ಸಭಾಪತಿ ಹುದ್ದೆಗೆ ತಹಸೀಲ್ದಾರ್ ತೃಪ್ತಿ ಪಡಬೇಕಾಯಿತು. ಆದರೆ, ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷ ಸಂಘಟಿಸುವುದರ ಜೊತೆಗೆ ತಾವೂ ಗೆದ್ದು ಜಿಲ್ಲೆಗೆ ನಾಲ್ಕು ಸ್ಥಾನಗಳನ್ನು ನೀಡಿರುವ ಹೆಮ್ಮೆ ಮನೋಹರ ತಹಸೀಲ್ದಾರರದ್ದಾಗಿದೆ.
ಕೆಲವರಿಗೆ ಮಣೆ: ತಹಸೀಲ್ದಾರ್ ಈ ಬಾರಿ ಮಂತ್ರಿ ಆಗಿಯೇ ಆಗುತ್ತಾರೆ ಎಂಬ ವಿಶ್ವಾಸ ದೃಢವಾಗಿ ಕಾಣುತ್ತದೆ. ಆದರೆ, ಹಾವೇರಿ ಜಿಲ್ಲೆಯಲ್ಲಿರುವ ಕಾಂಗ್ರೆಸ್ಸಿನಿಂದ ಗೆದ್ದ ನಾಲ್ವರೂ ಶಾಸಕರು ಅತ್ಯಂತ ಪ್ರಭಾವಿಗಳೆ. ಹಾವೇರಿ ಜಿಲ್ಲಾ ಕೇಂದ್ರದ ಶಾಸಕ ರುದ್ರಪ್ಪ ಲಮಾಣಿ ಹಿಂದೆ ಶಾಸಕರಾಗಿದ್ದರು. ಮಂತ್ರಿಯಾಗಿರಲಿಲ್ಲ. ರಾಣೆಬೆನ್ನೂರಿನ ಕೆ.ಬಿ. ಕೋಳಿವಾಡ, ಬ್ಯಾಡಗಿಯ ಬಸವರಾಜ ಶಿವಣ್ಣನವರ ಹಿಂದೆ ಮಂತ್ರಿಯಾಗಿದ್ದರು.
ಮಂತ್ರಿ ಸ್ಥಾನ ಸಾಧ್ಯತೆ: ನಾಲ್ವರ ಪೈಪೋಟಿ ನಡುವೆ ಮನೋಹರ ತಹಸೀಲ್ದಾರ್ ಕೆಪಿಸಿಸಿ ಮೇಲೆ ಹಾಗೂ ದೆಹಲಿ ಹೈಕಮಾಂಡ್ ಮೇಲೆ ಹೇಗೆ ಪ್ರಭಾವ ಬೀರುವರು ಎಂಬುದೂ ಮುಖ್ಯ ಸಂಗತಿಯಾಗಿದೆ. ಅಲ್ಲದೇ ಮನೋಹರ ಈಗ ನಿಯೋಜಿತ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೂ ಎಂಬುದು ಗಮನಾರ್ಹ ಸಂಗತಿ. ಹೀಗಾಗಿ ಮನೋಹರಗೆ ಸುಲಭ ಮಂತ್ರಿ ಸ್ಥಾನ ಸಾಧ್ಯ ಎಂದು ವಿಶ್ಲೇಶಿಸಲಾಗುತ್ತಿದೆ.
ಮಂತ್ರಿ ಪದವಿ ತೀವ್ರ ಚರ್ಚೆ: ಮನೋಹರ ತಹಸೀಲ್ದಾರ್ ಪಕ್ಷ ನಿಷ್ಠೆ, ಹಿರಿತನಕ್ಕೆ ಹೆಸರಾದವರು. ಕಾಂಗ್ರೆಸ್ ಪಕ್ಷ ಇಳಿಮುಖ ಸ್ಥಿತಿಯಲ್ಲಿ ಇದ್ದಾಗ ಅಖಂಡ ಧಾರವಾಡ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿ ಜಯದ ದಾಖಲೆ ಬರೆದಿದ್ದಾರೆ. ಇದನ್ನು ಆಧರಿಸಿ ಮನೋಹರ ತಹಸೀಲ್ದಾರ ಅವರಿಗೆ ಹೈಕಮಾಂಡ್ ಯಾವುದೇ ಪ್ರಭಾವ ನಿರೀಕ್ಷಿಸದೆ ಮಂತ್ರಿ ಪದವಿ ನೀಡಬೇಕು ಎಂಬ ಅಪೇಕ್ಷೆ ಹಾನಗಲ್ಲ ತಾಲೂಕಿನ ಕಾಂಗ್ರೆಸ್ ವಲಯದ ಚರ್ಚೆಯಲ್ಲಿದೆ.
ಕೆಂಪು ದೀಪ ಕಾರು ಸಿಗುವುದೇ?: ಹಾನಗಲ್ಲ ತಾಲೂಕಿನಲ್ಲಿ ಮೊಟ್ಟ ಮೊದಲಿಗೆ ಕೆಂಪು ದೀಪದ ಕಾರು ತಂದವರು ಮಾಜಿ ಸಚಿವ ಸಿ.ಎಂ. ಉದಾಸಿ ನಂತರ ಮನೋಹರ ತಹಸೀಲ್ದಾರ್ ಅಂತಹ ಭಾಗ್ಯ ಪಡೆದರು. ನಂತರ ಮತ್ತೆ ಉದಾಸಿಯವರು ಕೆಂಪು ದೀಪದ ಕಾರಿನ ಮೂಲಕ ಹಾನಗಲ್ಲ ತಾಲೂಕಿನಲ್ಲಿ ಅಭಿವೃದ್ಧಿಯ ಸೆಕೆ ಬರೆದರು. ಮಂತ್ರಿಯಾದರೆ ಮಾತ್ರ ಹೆಚ್ಚು ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ತಾಲೂಕಿನ ಕಾಮಗಾರಿಗಳೇ ಸಾಕ್ಷಿಯಾಗುತ್ತವೆ.
ನೀರಾವರಿಯಲ್ಲಿ ಕ್ಷೇತ್ರ ಹಿನ್ನಡೆ: ಹಾನಗಲ್ಲ ತಾಲೂಕಿನ ಅಭಿವೃದ್ಧಿಗಾಗಿ ಮನೋಹರ ಮಂತ್ರಿಯಾಗುವ ಅನಿವಾರ್ಯ ಇದೆ. ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಯಲ್ಲಿ ಹಾಗೂ ಭಾಗಶಃ ನೀರಾವರಿ ಅಭಿವೃದ್ಧಿಯಲ್ಲಿ ಉದಾಸಿಯವರ ಅವಧಿ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿರುವಂತಹದ್ದು. ಆದರಿನ್ನೂ ನೀರಾವರಿಗಾಗಿ ತಾಲೂಕಿನ ಕೃಷಿಕ ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದು, ನೂತನ ಸರಕಾರದಲ್ಲಿ ಅದು ಯಶಸ್ವಿಯಾಗಬೇಕಾಗಿದೆ. ಅದಕ್ಕಾಗಿ ಇಡೀ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮನೋಹರ ಮಂತ್ರಿಯಾಗುವರೇ ಎಂಬುದು ನಿರೀಕ್ಷೆ ಹಾದಿಯಲ್ಲಿದೆ.
ದಕ್ಕುವುದೇ ಸ್ಥಾನ: ಹಾನಗಲ್ಲ ತಾಲೂಕಿನಿಂದ ಸಿ.ಎಂ. ಉದಾಸಿ ಹಾಗೂ ಮನೋಹರ ತಹಸೀಲ್ದಾರ್ ಹೊರತುಪಡಿಸಿ, ಆಡೂರಿನ ಕೃಷಿ ಕ್ಷೇತ್ರದಲ್ಲಿ ವಿದ್ವಾಂಸರೆಂದೇ ಗುರುತಿಸಲ್ಪಟ್ಟ ಮಹಲಿಂಗಪ್ಪ ಶಂಕ್ರಿಕೊಪ್ಪ ಹಾಗೂ ಭೋಜರಾಜ ಕರೂದಿ ಮಾತ್ರ ರಾಜ್ಯ ಮಟ್ಟದಲ್ಲಿ ಗಮನಿಸಬಹುದಾದ ಸ್ಥಾನ ಪಡೆದಿದ್ದಾರೆ. ತಾಲೂಕಿನ ಕಾಂಗ್ರೆಸ್ ವಲಯದಲ್ಲಿ ಮನೋಹರ ಅಲ್ಲದೇ ಹಲವು ಹಿರಿಯ ಕಾರ್ಯಕರ್ತರು ರಾಜ್ಯ ಸರಕಾರದಲ್ಲಿ ಮಹತ್ವದ ಸ್ಥಾನ ಪಡೆಯುವ ತವಕದಲ್ಲಿದ್ದಾರೆ. ಯಾರು, ಯಾರ ಪಾಲಿಗೆ ಏನೇನು ದಕ್ಕುವದೋ ಕಾದು ನೋಡಬೇಕು.
ಕೃಷಿ ಕುಟುಂಬದ ರಾಜಕಾರಣಿ: ಮನೋಹರ ತಹಸೀಲ್ದಾರ್ ಹಾನಗಲ್ಲ ತಾಲೂಕಿನ ಪುಟ್ಟ ಗ್ರಾಮ ಅಕ್ಕಿವಳ್ಳಿಯವರು. ಕೃಷಿ ಕುಟುಂಬದಿಂದ ಬಂದರೂ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೆ ಕಾಂಗ್ರೆಸ್ ಮೂಲಕ ರಾಜಕಾರಣ ಪ್ರವೇಶಿಸಿ ಅಲ್ಲೇ ಇದ್ದು ಗೆದ್ದಾಗಲೂ-ಸೋತಾಗಲೂ ಕಾಂಗ್ರೆಸ್ನ ಕೈಬಿಡದೆ ನಿಷ್ಠ ರಾಜಕಾರಣಿ ಎಂಬುದೂ ಅಷ್ಟೇ ಸತ್ಯ.