ಇಂದು ವಿವಿಧ ಕಾರ್ಯಕ್ರಮ
ಶಿಗ್ಗಾಂವಿ: ತಾಲೂಕಿನ ಹೊಸೂರು ಗ್ರಾಮದಲ್ಲಿ ಮೇ 12ರಂದು ಬಸವಣ್ಣ ದೇವರ ರುದ್ರಾಭಿಷೇಕ ಹಾಗೂ ಪಾದಗಟ್ಟೆಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಚರಮೂರ್ತೆಶ್ವರ ಪ್ರಾಣ ಪ್ರತಿಷ್ಠಾನ ಜರುಗಲಿದೆ. ಅರಳೆಲೆ ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸುವರು. ಇದೇ ವೇಳೆ, ನೂತನ ರಥದ ಕಳಸಾರೋಹಣ ನೆರವೇರಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾಂತೇಶ್ವರ ಪಿಯು ಕಾಲೇಜು ಸಾಧನೆ
ಬ್ಯಾಡಗಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಮಹಾಂತೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಒಟ್ಟು 58ರಲ್ಲಿ 40 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 69 ಫಲಿತಾಂಶ ಪಡೆದಿದೆ. ಶೇ. 88.16 ಅಂಕ ಪಡೆದ ವೀಣಾ ಪೂಜಾರ, ಶೇ. 84.33 ಅಂಕ ಪಡೆದ ಹೀನಾ ಶಿಡೇನೂರ ಹಾಗೂ ಸುನೀತಾ ಮಠದ ಮೊದಲ ಮೂರು ಸ್ಥಾನ ಸಂಪಾದಿಸಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.
ದೂದಿಹಳ್ಳಿ ಶಾಲೆಗೆ ಶೇ. 100
ಹಿರೇಕೆರೂರು: ತಾಲೂಕಿನ ದೂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಬಂದಿದೆ. ಪರೀಕ್ಷೆಗೆ ಕುಳಿತ 54 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉನ್ನತ ಶ್ರೇಣಿ 6, ಪ್ರಥಮ ಶ್ರೇಣಿ 21, ದ್ವಿತೀಯ ಶ್ರೇಣಿ 15, ತೃತೀಯ ಶ್ರೇಣಿಯಲ್ಲಿ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸುಮಾ ಮಾಗನೂರ, ಶೇ. 93, ಯಶೋದಾ ಮಾಗಡಿ ಶೇ. 92, ಮುಕ್ತಾ ಪೂಜಾರ ಶೇ. 91.52, ಯಶೋದಾ ಹುಲ್ಲತ್ತಿ ಶೇ. 91.20, ಕಿರಣ ಬೆಳ್ಳೂಡಿ ಶೇ. 88, ಮೇಘನಾ ಬೆಳ್ಳೂಡಿ ಶೇ. 87 ಅಂಕ ಗಳಿಸಿದ್ದಾರೆ. ಇವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ಹಕ್ಕಬುಕ್ಕ ಕಾಲೇಜಿಗೆ ಶೇ. 94
ಬ್ಯಾಡಗಿ: ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಕಾಗಿನೆಲೆಯ ಶ್ರೀ ಹಕ್ಕಬುಕ್ಕ ಸ್ವತಂತ್ರ ಪದವಿಪೂರ್ವ ಕಾಲೇಜಿನ 41 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ. 94 ಫಲಿತಾಂಶ ಬಂದಿದೆ. ಮಂಜುನಾಥ ಬಿಲ್ಲಳ್ಳಿ 486 (ಶೇ. 81), ಲೀಲಾವತಿ ಬಾರ್ಕಿ 481 (ಶೇ. 80) ಅಂಕ ಪಡೆದಿದ್ದಾರೆ. 27 ವಿದ್ಯಾರ್ಥಿದಳು ಪ್ರಥಮ ಶ್ರೇಣಿ, 8 ದ್ವಿತೀಯ ಶ್ರೇಣಿ, 6 ತೃತೀಯ ಶ್ರೇಣಿಗಳು ಲಭಿಸಿವೆ. ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಶ್ರೀಗಳು ಅಭಿನಂದನೆ ಸಲ್ಲಿಸಿದ್ದಾರೆ.