ಬಸ್-ಲಾರಿ ಡಿಕ್ಕಿ: ಮೂವರ ಸಾವು
ಶಿಗ್ಗಾಂವಿ: ಲಾರಿಗೆ ಸಾರಿಗೆ ಬಸ್ಸೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 25 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡು ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸಂಭವಿಸಿದೆ. ತಾಲೂಕಿನ ಬಂಕಾಪುರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಿನ ಜಾವ ವೇಗವಾಗಿ ಹೋಗುತ್ತಿದ್ದ ಬಸ್ನ ಟೈರ್ ಒಡೆದು ಉಸುಕು ತುಂಬಿಕೊಂಡು ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ. ಬಸ್ ಚಾಲಕ ಮಹಮ್ಮದ್ ಇಬ್ರಾಹಿಂ (47) ಸ್ಥಳದಲ್ಲೇ ಮೃತಪಟ್ಟಿದ್ದು, ಪ್ರಯಾಣಿಕರಾದ ಕೊಲ್ಲಾಪುರದ ಕೃಷ್ಣಾ (47) ಹಾಗೂ ಪ್ರಜ್ವಲ್ (7) ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮೃತಪಟ್ಟಿದ್ದಾರೆ. ಸುಮಾರು 25 ಪ್ರಯಾಣಿಕರು ಗಾಯಗೊಂಡಿದ್ದು, ಶಿಗ್ಗಾಂವಿ ಹಾಗೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.