ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ
ಹುಕ್ಕೇರಿ: ತಾಲೂಕಿನ ಕಣಗಲಾ ಗ್ರಾಮದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣವೊಂದು ಮೂರು ತಿಂಗಳ ನಂತರ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.6ರಂದು ಗ್ರಾಮದಿಂದ ಸ್ವಲ್ಪ ದೂರದಲ್ಲಿ ಇದ್ದ ಬಾವಿಯಿಂದ ಕುಡಿಯುವ ನೀರು ತರಲು ಹೋಗಿದ್ದ ವೇಳೆ 16 ವರ್ಷದ ಬಾಲಕಿ ಮೇಲೆ ಮೂವರು ಯುವಕರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೇ ಅತ್ಯಾಚಾರವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ವಿಡಿಯೋ ಚಿತ್ರೀಕರಣ ತೋರಿಸಿ ಬಾಲಕಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು. ಇವರ ಕಿರುಕುಳ ತಾಳಲಾರದೇ ಬಾಲಕಿ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ನಂತರ ಪಾಲಕರು ಶನಿವಾರ ಸಂಕೇಶ್ವರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳಾದ ಮಾರುತಿ ಮಾಳೆ(19) ಓಂಕಾರ ಪಾಟೀಲ, (16) ಹಾಗೂ ಓಂಕಾರ ತಪಕೇರಿ (17) ಎಂಬವರನ್ನು ಬಂಧಿಸಿದ್ದಾರೆ.