ಆಕಸ್ಮಿಕ ಬೆಂಕಿ: ಅಪಾರ ಆಸ್ತಿ ಹಾನಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 15
ಕಣದಲ್ಲಿ ಸಂಗ್ರಹಿಸಲಾಗಿದ್ದ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಮೇವಿನ ಬಣವೆ ಸುಟ್ಟು ಕರಕಲಾಗಿದ್ದು, ಬಣವೆ ಪಕ್ಕದಲ್ಲಿರುವ ವಾಸದ ಮನೆಯ ಗೋಡೆ ಬಿರುಕುಬಿಟ್ಟ ಘಟನೆ ತಾಲೂಕಿನ ಕಮದೋಡ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಆಕಸ್ಮಿಕ ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾಗಿರುವ ಮೇವಿನ ಬಣವಿ ಹಾಗೂ ಬೆಂಕಿಯ ಝಳಕ್ಕೆ ಬಿರುಕು ಬಿಟ್ಟಿರುವ ಮನೆ ಕಮದೋಡ ಗ್ರಾಮದ ರೈತ ರಾಮಪ್ಪ ಹನುಮಂತಪ್ಪ ಕುಂಟೇರ ಎಂಬುವವರಿಗೆ ಸೇರಿದ್ದಾಗಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ವಾಹನ ಸಮೇತ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಸಫಲವಾಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯಲ್ಲಿ ರು. 20 ಸಾವಿರ ಬೆಲೆ ಬಾಳುವ 8 ಟ್ರ್ಯಾಕ್ಟರ್ ಗೋವಿನ ಜೊಳದ ಸೊಪ್ಪು, 2 ಟ್ರ್ಯಾಕ್ಟರ್ ಬಿಳಿಜೊಳದ ಮೇವಿನ ಬಣವೆ ಸುಟ್ಟು ಕರಕಲಾಗಿದ್ದು, ಬಣವೆಯ ಪಕ್ಕದಲ್ಲಿರುವ ವಾಸದ ಮನೆ ಬಿರುಕು ಬಿಟ್ಟಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿರುವ ತಾಲೂಕು ಸಹಾಯಕ ಅಗ್ನಿ ಶಾಮಕ ಅಧಿಕಾರಿ ಜೆ.ಎಸ್. ಹಿರೇಮಠ ತಿಳಿಸಿದ್ದಾರೆ.