ಕೋಳಿವಾಡಗೆ ಸಚಿವ ಸ್ಥಾನಕ್ಕಾಗಿ ಪೂಜೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 15
ರಾಣಿಬೆನ್ನೂರು ಶಾಸಕ, ಮಾಜಿ ಸಚಿವ ಕೆ.ಬಿ. ಕೋಳಿವಾಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ದೊರೆಯಲೆಂದು ಪ್ರಾರ್ಥಿಸಿ ನಗರದ ಗ್ರಾಮದೇವತೆ ಚೌಡೇಶ್ವರಿ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಂ. ಜಯದೇವ ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಪೂಜೆ ಮುಗಿಸಿದ ಬಳಿಕ ಬಿ.ಎಂ. ಜಯದೇವ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್.ಎಂ. ಕೃಷ್ಣ ರಾಜ್ಯದ ಮುಖ್ಯಮಂತ್ರಿಗಯಾಗಿದ್ದ ಸಮಯ ರಾಜ್ಯದ ಗ್ರಾಮೀಣ ನೀರು ಸರಬರಾಜು ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಮಂತ್ರಿಗಳಾಗಿದ್ದ ಕೆ.ಬಿ. ಕೋಳಿವಾಡರು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ತಲೆ ದೊರಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶ್ರಮಿಸಿದ್ದರ ಫಲವಾಗಿ ಗ್ರಾಮೀಣ ಜನತೆ ಇಂದಿಗೂ ಕೋಳಿವಾಡ ಅವರನ್ನು ಸ್ಮರಿಸುವಂತಾಗಿದೆ.
ನೀರಾವರಿಯಿಂದ ವಂಚಿತವಾಗಿದ್ದ ಹಾವೇರಿ ಹಾಗೂ ಗದಗ ಜಿಲ್ಲೆ ರೈತರ ಜಮೀನುಗಳಿಗೆ ನೀರುಣಿಸುವುದಕ್ಕಾಗಿ ಕೋಳಿವಾಡರು ಹಗಲಿರುಳ್ಳೆನ್ನದೆ ಹೋರಾಟ ನಡೆಸಿ ರು. 20 ಅನುದಾನವನ್ನು ತುಂಗಾ ಮೇಲ್ದಂಡೆ ಯೋಜನೆಗಾಗಿ ಮೀಸಲಿರಿಸಿ ಯೋಜನೆ ಜಾರಿಗೊಳಿಸಿದ್ದರ ಫಲವಾಗಿ ಇಂದು ರೈತರ ಹೊಲಗಳಿಗೆ ತುಂಗೆಯ ನೀರನ್ನು ಹರಿಸಲು ಸಾಧ್ಯವಾಗಿದೆ ಎಂದರು.
ತಾಲೂಕಿನ ಮುದೇನೂರು ಗ್ರಾಮದ ಹತ್ತಿರ ಹರಿದಿರುವ ತುಂಗಭದ್ರಾ ನದಿಯಿಂದ ರಾಣಿಬೆನ್ನೂರು ಹಾಗೂ ಬ್ಯಾಡಗಿ ನಗರಗಳ ಜತೆಗೆ ಕುಡಿಯುವ ನೀರನ್ನು ಒದಗಿಸುವುದಕ್ಕಾಗಿ ರು. 50 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದರ ಪರಿಣಾಮ ಇಂದು ರಾಣಿಬೆನ್ನೂರು ಹಾಗೂ ಬ್ಯಾಡಗಿ ಜನತೆ ಶುದ್ಧ ನದಿ ನೀರನ್ನು ಕುಡಿಯಲು ಸಾಧ್ಯವಾಗಿದೆ.
ಸರ್ಕಾರ ನೀಡಿದ ಜವಾಬ್ದಾರಿಯುತ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಶಕ್ತಿ ಸಾಮರ್ಥ್ಯ ಹೊಂದಿರುವ ಕೆ.ಬಿ. ಕೋಳಿವಾಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟದಲ್ಲಿ ಮುಂತ್ರಿ ಸ್ಥಾನ ನೀಡಬೇಕೆಂದು ಜಯದೇವ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಉಮೇಶ ಕುಂದಾಪುರ, ಬಸವರಾಜ ತಾವರಗೊಂದಿ, ಪ್ರಕಾಶ ಟಿಕಾರೆ, ಶಂಕರ್ ಹರಿಹರ, ಕಲ್ಲಪ್ಪ ಪಾಟೀಲ, ಮಂಜುನಾಥ ಉಪ್ಪಾರ, ಚಂದ್ರು ಕಮದೋಡ ಸೇರಿದಂತೆ ನೂರಾರು ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.