ಟ್ರ್ಯಾಕ್ಟರ್ ಪಲ್ಟಿ: ನಾಲ್ವರ ಸಾವು
ಕ.ಪ್ರ. ವಾರ್ತೆ , ರಾಣಿಬೆನ್ನೂರು , ಮೇ 15
ಜಮೀನು ಕೆಲಸಕ್ಕೆಂದು ತೆರಳಿದ್ದ ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಐವರು ಗಾಯಗೊಂಡ ಘಟನೆ ತಾಲೂಕಿನ ಖಂಡೆರಾಯನಹಳ್ಳಿ-ಐರಣಿ ರಸ್ತೆಯಲ್ಲಿ ಬುಧವಾರ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ತಾಲೂಕಿನ ಹಿರೇಬಿದರಿ ಗ್ರಾಮದ ನಿಂಗಪ್ಪ ಮಲ್ಲಪ್ಪ ಬಿರಾಳ(48), ರೇಣುಕಾ ನಿಂಗಪ್ಪ ಬಿರಾಳ(35), ಬಸವರಾಜ ಬೇಲೂರು(34) ಹಾಗೂ ರಾಹುತನಕಟ್ಟಿ ಗ್ರಾಮದ ಶಾಂತವ್ವ ದಿಳ್ಳೆಪ್ಪ ಕಂಬಳಿ (13) ಎಂದು ಗುರುತಿಸಲಾಗಿದೆ.
ಕಳೆದ 6 ದಿನಗಳಿಂದ ಈಚೆಗೆ ತಾಲೂಕಿನಾದ್ಯಂತ ಉತ್ತಮ ಮುಂಗಾರು ಮಳೆ ಸುರಿದ ಕಾರಣ ಬಿತ್ತನೆಗಾಗಿ ಭೂಮಿ ಸಿದ್ಧಪಡಿಸುವುದಕ್ಕಾಗಿ ಈ ಕೂಲಿ ಕಾರ್ಮಿಕರು ಹೊಲಕ್ಕೆ ತೆರಳಿದ್ದರು. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಗಾಯಗೊಂಡಿರುವ ಐವರನ್ನು ರಾಣಿಬೆನ್ನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದಿದ್ದರಿಂದ ಹೆಚ್ಚಿನ ಚಿಕೆತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿರುವ ಸಿಪಿಐ ನಾಗರಾಜ ತಿಳಿಸಿದ್ದಾರೆ.