ಡೆಂಘೀ: ಗ್ರಾಪಂ, ಆರೋಗ್ಯ ಇಲಾಖೆಯಿಂದ ಜಾಗೃತಿ
ಬ್ಯಾಡಗಿ: ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಕಾಣಿಸಿಕೊಂಡ ಡೆಂಘೀ ಜ್ವರದ ಹಿನ್ನೆಲೆಯಲ್ಲಿ ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಫಾಗಿಂಗ್, ಬ್ಲೀಚಿಂಗ್ ಪೌಡರ್, ಫಿನಾಯಿಲ್ ಸಿಂಪರಣೆ, ಚರಂಡಿ ಸ್ವಚ್ಛತೆ ಹಾಗೂ ಮನೆಗಳಿಗೆ ತೆರಳಿ ಜಾಗೃತಿ ಕಾರ್ಯಕ್ಕೆ ಮುಂದಾಗಿವೆ. ಕಳೆದೆರಡು ದಿನಗಳ ಹಿಂದೆ ಗ್ರಾಮದ ನಾಲ್ವರು ಮಕ್ಕಳಿಗೆ ಶಂಕಿತ ಡೆಂಘೀ ಜ್ವರ ಪತ್ತೆಯಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಇದರಿಂದಾಗಿ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳ ತಂಡ ಜಾಗೃತಿಯೊಂದಿಗೆ ಸ್ವಚ್ಛತೆ ಕಾರ್ಯಕ್ಕೆ ಆದ್ಯತೆ ನೀಡುವ ಮೂಲಕ ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸುತ್ತಿದ್ದಾರೆ.
ಜಾಗೃತಿ: ಡೆಂಘೀ ಜ್ವರ ಈಡೀಸ್ ಎಂಬ ಸೊಳ್ಳೆ ಕಚ್ಚುವುದರಿಂದ ಬರುತ್ತದೆ, ಮನೆ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಛತೆ ಕೈಗೊಳ್ಳಬೇಕು. ಶುದ್ಧ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಈ ಸೊಳ್ಳೆ ಹಗಲು ಸಮಯದಲ್ಲಿ ಮಾತ್ರ ಕಚ್ಚುತ್ತದೆ, ಮುಂಜಾಗ್ರತಾ ಕ್ರಮವಾಗಿ ಜ್ವರ ಬಂದಾಕ್ಷಣ ಹತ್ತಿರದ ಆರೋಗ್ಯ ಸಹಾಯಕರನ್ನು ಭೇಟಿಯಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆಗಳಲ್ಲಿ ನೀರನ್ನು ಎರಡು ದಿನಗಳಿಗಿಂತ ಹೆಚ್ಚು ಸಮಯ ಸಂಗ್ರಹಿಸದಿಡದೇ ಆಗಾಗ ಖಾಲಿ ಮಾಡಲು ಸೂಚಿಸಲಾಯಿತು. ಹಗಲು ವೇಳೆಯಲ್ಲಿ ಸೊಳ್ಳೆ ಪರದೆಯಿಲ್ಲದೇ ಮಲಗಬಾರದು, ಒಡೆದ ಬಾಟಲಿ, ಬಲ್ಬು, ಚಿಪ್ಪು, ಟೈರ್ಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ನೀರು ತುಂಬಿರುವ ಪಾತ್ರೆಗಳನ್ನು ಕಡ್ಡಾಯವಾಗಿ ಮುಚ್ಚಿಡುವಂತೆ ಸೂಚಿಸಲಾಯಿತು.
ಬೀಡುಬಿಟ್ಟ ವೈದ್ಯರ ತಂಡ: ತಾಲೂಕು ವೈದ್ಯಾಧಿಕಾರಿ ಬಿ.ಆರ್. ಲಮಾಣಿ ಮಾರ್ಗದರ್ಶನದಲ್ಲಿ ಆರೋಗ್ಯ ತಂಡವು ಗ್ರಾಮದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಬೀಡುಬಿಟ್ಟಿದ್ದು, ಲಾರ್ವಾ ಸರ್ವೇ ಕಾರ್ಯ ನಡೆಸುತ್ತಿದೆ. ಗ್ರಾಮದ ಕೆಲ ಮನೆಗಳಲ್ಲಿ ನೀರಿನಲ್ಲಿ ಲಾರ್ವಾ ಹುಳು ಪತ್ತೆಯಾಗಿದ್ದು, ಅಂತಹ ಮನೆಗಳಲ್ಲಿ ಖುದ್ದಾಗಿ ಭೇಟಿ ನೀಡುವ ಮೂಲಕ ಹೆಚ್ಚು ಕಾಳಜಿ ವಹಿಸಿದೆ.
ಗ್ರಾಮದ ನಾಲ್ವರು ಮಕ್ಕಳಿಗೆ ಶಂಕಿತ ಜ್ವರ ಕಾಣಿಸಿಕೊಂಡಿದ್ದು, ಈ ಕುಟುಂಬಗಳ ಸದಸ್ಯರ ಬಗ್ಗೆ ತೀವ್ರ ನಿಗಾವಹಿಸಿದಲ್ಲದೇ, ಆರೋಗ್ಯ ಮಾಹಿತಿ ಒದಗಿಸಲಾಗುತ್ತಿದೆ. ಡೆಂಘೀ ಆವರಿಸಿಕೊಂಡಿರುವ ನಿಮಿತ್ತ ಗ್ರಾಮಸ್ಥರ ಸಭೆ ಕರೆದು, ರೋಗ ಬಾರದಂತೆ ಎಲ್ಲೆಡೆ ಮುಂಜಾಗ್ರತೆ ಕ್ರಮ ಜರುಗಿಸಿದೆ.
ಗ್ರಾಪಂ ಅಧ್ಯಕ್ಷೆ ನಿರ್ಮಲ ತಳಮನಿ, ಉಪಾಧ್ಯಕ್ಷ ಎಂ.ಕೆ. ಬಿಳಿಯಣ್ಣನವರ, ಸಾದೇವಪ್ಪ ಬನ್ನಿಹಟ್ಟಿ, ರವಿ ಜಿಂಗಾಡೆ, ಹಿರಿಯ ಆರೋಗ್ಯ ಸಹಾಯಕ ವೈ.ಎಂ. ಹಿರಿಯಕ್ಕನವರ, ಅನಿತಾ ಪೂಜಾರ, ಎಂ.ಎನ್. ಕಂಬಳಿ, ಎಸ್.ಎಸ್. ಮಾಸೂರ, ಆಶಾ ಕಾರ್ಯಕರ್ತೆಯರಾದ ಶ್ರೀದೇವಿ ಕುಲಕರ್ಣಿ, ಶಾರದಾ ಹವಳಾನಾಯ್ಕ, ಕಸ್ತೂರೆವ್ವ ಮೂಲಿಮನಿ ಮುಂತಾದವರು ಪಾಲ್ಗೊಂಡಿದ್ದರು.
ಹೆಡಿಗ್ಗೊಂಡದಲ್ಲಿ ಶಂಕಿತ ಡೆಂಘೀ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಚರಂಡಿ ಸ್ವಚ್ಛತೆಗೆ ಹೆಚ್ಚು ಗಮನಹರಿಸಿದ್ದು, ಕುಡಿಯುವ ನೀರಿನ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಿದೆ. ಕೆಲವೆಡೆ ಒಡೆದಿದ್ದ ನೀರಿನ ಪೈಪ್ಲೈನ್ ಸರಿಪಡಿಸಿದೆ. ಕರಪತ್ರಗಳ ಮೂಲಕ ಮನೆಗಳಲ್ಲಿ ಡೆಂಘೀ ಜ್ವರ ಮುನ್ಸೂಚನೆ, ಮುಂಜಾಗ್ರತೆ ಕ್ರಮಗಳ ಬಗ್ಗೆ ತಿಳಿಸಿದೆ. ಗ್ರಾಮಸ್ಥರೊಂದಿಗೆ ಈ ಕುರಿತು ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ.
- ಜಗದೀಶ್ ಮಣ್ಣಮ್ಮನವರ,
ಪಿಡಿಓ, ಹೆಡಿಗ್ಗೊಂಡ ಗ್ರಾಪಂ
ಗ್ರಾಮದಲ್ಲಿ ಡೆಂಘೀ ಜ್ವರದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದೆ. ಭಯಪಡುವ ಅಗತ್ಯವಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಮಾರ್ಗದರ್ಶನ ಕೈಗೊಂಡಿದ್ದು, ತುರ್ತು ಸೇವೆಗೆ ಆರೋಗ್ಯ ತಂಡ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೊಳ್ಳೆಗಳನ್ನು ನಾಶಗೊಳಿಸಲು ನಿಗಾ ವಹಿಸಿದೆ. ಮುಂಜಾಗ್ರತೆ ವಹಿಸಲು ಕಾಗಿನೆಲೆ ವ್ಯಾಪ್ತಿ ಎಲ್ಲ ಪಿಡಿಓಗಳಿಗೆ ಆಯಾ ಗ್ರಾಮಗಳಲ್ಲಿ ಸ್ವಚ್ಛತೆ ಕೈಗೊಳ್ಳಲು ಸೂಚಿಸಿದೆ.
- ಸೋಯಲ್ ಹರವಿ, ವೈದ್ಯಾಧಿಕಾರಿ, ಸಮುದಾಯ ಕೇಂದ್ರ, ಕಾಗಿನೆಲೆ