ನವಜಾತ ಶಿಶು ಬಿಸಾಕಿ ಪರಾರಿ
ಶಿಗ್ಗಾಂವಿ: ಹುಟ್ಟಿದ ಮಗು ಹೆಣ್ಣು ಎಂಬ ಕಾರಣಕ್ಕೊ, ಅನೈತಿಕ ಸಂಬಂಧಕ್ಕೆ ಹುಟ್ಟಿದೆ ಎಂಬ ಕಾರಣಕ್ಕೊ ಪಾಪಿಗಳು ಹುಟ್ಟಿದ ಒಂದು ಗಂಟೆನಲ್ಲಿ ಕುತ್ತಿಗೆಗೆ ರಿಬ್ಬನ್ನಿನಿಂದ ಬಿಗಿದು ಗ್ರಾಮದ ಹೊರವಲಯದಲ್ಲಿ ಚಿಲವೊಂದರಲ್ಲಿ ಹಾಕಿ ಬಿಸಾಡಿ ಹೋದ ಘಟನೆ ತಾಲೂಕಿನ ಬಸನಾಳ ಗ್ರಾಮದಲ್ಲಿ ಜರುಗಿದೆ.
ಘಟನೆ ವಿವರ: ತಾಲೂಕಿನ ಬಸನಾಳ ಗ್ರಾಮದಲ್ಲಿ ಬೆಳಗಿನ 7 ಗಂಟೆಗೆ ಹುಟ್ಟಿದ ಹೆಣ್ಣು ಮಗುವನ್ನು ಗ್ರಾಮದ ಹೊರ ವಲಯದಲ್ಲಿ ಅಪರಿಚಿತರು ಬಿಸಾಕಿ ಹೋಗಿದ್ದಾರೆ ಎನ್ನಲಾಗಿದೆ. ಆದರೆ, ಬೆಳಗಿನ ಜಾವ ರೈತರು, ಗ್ರಾಮಸ್ಥರು ಚಿಲವನ್ನು ನೋಡಿ ತಕ್ಷಣ ಶಿಗ್ಗಾಂವಿಯ ಸಿಡಿಪಿಓ ಪದ್ಮಾವತಿ ಜಿ. ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಬಳಿಕ ಚಿಕೆತ್ಸೆಗಾಗಿ ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಣ್ಣು ಮಗುವಿಗೆ ಪ್ರಥಮ ಚಕಿತ್ಸೆ ನೀಡಿ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಕುತ್ತಿಗೆಗೆ ಆದ ಗಾಯದ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸಿಡಿಪಿಓ ಪದ್ಮಾವತಿ ಜಿ. ತಿಳಿಸಿದ್ದಾರೆ.
ಈ ಹೆಣ್ಣು ಮಗು ಯಾರದು ಎಲ್ಲಿಂದ ಬಂದಿದೆ. ಯಾರು ತಂದು ಬಿಸಾಕಿದ್ದಾರೆ ಎಂಬುವದರ ಕುರಿತು ಶಿಗ್ಗಾಂವಿ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ತಿಳಿಸಲಾಗಿದೆ.