ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಮರ್ಪಕ ಬಿತ್ತನೆ ಬೀಜ, ರಸಗೊಬ್ಬರ ಲಭ್ಯ

Mainashree
Updated On : 17 May 2013, 10:25 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮೇ 16
ಮಳೆ ಬಂದು ಭೂಮಿ ಹದವಾದರೆ ಸಾಕು, ಕೃಷಿ ಇಲಾಖೆ ಎಲ್ಲ ರೀತಿಯ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಪಕ್ಕಾ ವ್ಯವಸ್ಥೆ ಮಾಡಿದೆ. ಯಾವುದೇ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆ ಇಲ್ಲ. ರೈತರು ಆತಂಕ ಪಡಬೇಕಾಗಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ. ಅಮೃತೇಶ್ವರ ತಿಳಿಸಿದ್ದಾರೆ.
ಹಾನಗಲ್ಲ ತಾಲೂಕಿನಲ್ಲಿ ಈಗ ಕೃಷಿಕ ಭೂಮಿ ಹದಗೊಳಿಸಿ ಬಿತ್ತನೆಗಾಗಿ ಕಾಯುತ್ತಿದ್ದಾನೆ. ಅಂದಾಜು 49 ಸಾವಿರ ಹೆಕ್ಟೇರ್ ಭೂಮಿ ಬಿತ್ತನೆಗಾಗಿ ಕಾದು ನಿಂತಿದೆ.
ಬರ ಮರುಕಳಿಸದಿರಲಿ: ಭತ್ತದ ಕಣಜ ಎಂಬ ಹಾನಗಲ್ಲ ತಾಲೂಕಿನ ಬಿರುದು ಹಲವು ವರ್ಷಗಳ ಮಳೆ ವೈಫಲ್ಯದಿಂದಾಗಿ ಗೋವಿನ ಜೋಳ ಹಾಗೂ ಹತ್ತಿ ಬಿತ್ತನೆಗೆ ಮುಂದಾಗಿದೆ. ಭತ್ತವಿಲ್ಲದೆ ಹಾನಗಲ್ಲ ತಾಲೂಕಿನ ಬಹುತೇಕ ಭತ್ತದ ಗಿರಣಿಗಳು ಬಂದ್ ಆಗಿವೆ. ಗೋವಿನ ಜೋಳದ ವ್ಯಾಪಾರಕ್ಕೆ ಮಹತ್ವ ಬಂದಿದೆ. ಆದಾಗ್ಯೂ ರೈತ ಭತ್ತ ಕೈಬಿಡಲು ಮನಸ್ಸಿಲ್ಲದಿದ್ದರೂ ಮಳೆ ಪರಿಸ್ಥಿತಿ ಆಧರಿಸಿ ಯಾವ ಬೆಳೆ ಬೆಳೆಯಬೇಕೆಂದು ಚಿಂತನೆಯಲ್ಲಿದ್ದಾನೆ.
ಹಲವು ಬೆಳೆ ನಿರೀಕ್ಷೆ: 49 ಸಾವಿರ ಹೆಕ್ಟೇರ್ ಬಿತ್ತನೆ ಭೂಮಿಯಲ್ಲಿ ಅಂದಾಜು 25 ಸಾವಿರ ಹೆಕ್ಟೇರ್ ಭತ್ತ, 12 ಸಾವಿರ ಹೆಕ್ಟೇರ್ ಗೋವಿನ ಜೋಳ, 75 ಹೆಕ್ಟೇರ್ ಜೋಳ, 145 ಹೆಕ್ಟೇರ್ ದ್ವಿದಳ ದಾನ್ಯ, 1,145 ಹೆಕ್ಟೇರ್ ಎಣ್ಣೆ ಕಾಳು ಬೆಳೆ, 10,550 ಹೆಕ್ಟೇರ್ ಹತ್ತಿ ಹಾಗೂ ಕಬ್ಬು ಬೆಳೆಯುವ ತವಕದಲ್ಲಿ ರೈತನಿದ್ದಾನೆ.
ರೈತನ ಕೈ ಹಿಡಿಯಲಿ: ಮುಂಗಾರು ಮಳೆ ಬರುವ, ಬಾರದಿರುವ ಸ್ಥಿತಿ ಅನುಸರಿಸಿ ರೈತ ಭೂಮಿ ಬೆತ್ತನೆಗೆ ನಿರ್ಣಯಿಸಬೇಕಾಗಿದೆ. ಕಳೆದ ವರ್ಷ ಭತ್ತ ಬಿತ್ತಿದ ರೈತ ಹಣೆ ಮುಟ್ಟಿಕೊಂಡು ಗೊಳಿಟ್ಟ ಸ್ಥಿತಿ ಈ ಬಾರಿ ಬಾರದಿರಲಿ. ಸರಿಯಾದ ಮಳೆಯಾಗಿ ರೈತನ ಕೈ ಹಿಡಿಯಲಿ ಎಂಬ ಆಶಯ ರೈತನದ್ದಾಗಿದೆ.
ವಿವಿಧ ತಳಿ ಬೀಜ: ಕೃಷಿ ಇಲಾಖೆ ಮಾಹಿತಿಯಂತೆ ಈ ಬಾರಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಸಾಕಷ್ಟಿದೆ. ಹತ್ತಿ ಬೀಜದ ಕೊರತೆಯೂ ಪ್ರಸಕ್ತ ಮುಂಗಾರು ಹಂಗಾಮಿಗೂ ಆಗುವುದಿಲ್ಲ. ಕೃಷಿ ಇಲಾಖೆಯಿಂದ ಸೋಯಾ ಅವರೆ, ಗೋವಿನಜೋಳ, ಜೋಳ, ಅಲಸಂದಿ ಹಾಗೂ ಮುಖ್ಯ ಬೆಳೆಯಾದ ಭತ್ತ, ವಿವಿಧ ತಳಿಗಳಾದ ಎಮ್‌ಟಿಯು 1001 ಹಾಗೂ 1010,  ಅಭಿಲಾಷ್, ಜಯಾ ಐಆರ್-64 ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.
ಶೇ. 50ರ ಸಹಾಯಧನ: ಕೃಷಿ ಇಲಾಖೆಯಿಂದ ಶೇ. 50ರ ಸಹಾಯಧನದಲ್ಲಿ ಈ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತದೆ. ಖಾಸಗಿ ಅಂಗಡಿಗಳು ಹಾಗೂ ಸೊಸೈಟಿಗಳಿಂದ ರಸಗೊಬ್ಬರ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಮಾರಾಟ ಮಳಿಗೆಗಳಿಂದ ಬಿತ್ತನೆ ಬೀಜಗಳ ಮಾರಾಟವೂ ನಡೆಯಲಿದೆ. ಇಲಾಖೆಯಿಂದ ಲಭ್ಯವಿರುವ ಬಿತ್ತನೆ ಬೀಜಗಳನ್ನು ಹಾನಗಲ್ಲ, ಬೊಮ್ಮನಹಳ್ಳಿ, ಅಕ್ಕಿಆಲೂರು, ಬೆಳಗಾಲ ಪೇಟೆಗಳಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾರಾಟ ಮಾಡಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.
ನಂಬರ್, ವಿಳಾಸ ಕಡ್ಡಾಯ: ಖಾಸಗಿ ಮಾರಾಟ ಮಳಿಗೆಗಳಲ್ಲಿ ಕಡ್ಡಾಯವಾಗಿ ಮಾರಾಟಕ್ಕೆ ಪಾವತಿ ನೀಡುವುದು ಹಾಗೂ ಅದರಲ್ಲಿ ರೈತನ ಮೊಬೈಲ್ ಸಂಖ್ಯೆ ಹಾಗೂ ರೈತನ ವಿಳಾಸ ಬರೆಯುವುದು ಕಡ್ಡಾಯ. ಅಂಗಡಿಗಳಲ್ಲಿ ಸ್ಟಾಕ್ ರಜಿಸ್ಟರ ಹಾಗೂ ಬೆಲೆ ಪಟ್ಟಿಯನ್ನು ಪ್ರಕಟಿಸುವುದು ಕಡ್ಡಾಯವಾಗಿದೆ. ಅಲ್ಲದೆ ತಾಲೂಕಿನ ಎಲ್ಲ ಖಾಸಗಿ ಮಾರಾಟ ಅಂಗಡಿಗಳಿಗೆ ರವಾನೆ ಆಗುವ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಮಾಹಿತಿ ಪ್ರತಿದಿನ ಕೃಷಿ ಇಲಾಖೆಯಲ್ಲಿ ಲಭ್ಯವಿರುತ್ತದೆ. ಮೈಕೋ ಕಂಪನಿಯ ಹತ್ತಿ ಬೀಜಗಳು ಅಗತ್ಯವಿರುವಷ್ಟು ದಾಸ್ತಾನಿದೆ ಎಂದು ಇಲಾಖೆ ತಿಳಿಸಿದೆ.
43 ಮಿ.ಮೀ ಮಳೆ: ಹಾನಗಲ್ಲ ತಾಲೂಕಿನಲ್ಲಿ ಪ್ರತಿವರ್ಷ 934 ಮಿ.ಮೀ. ವಾಡಿಕೆ ಮಳೆ ಎಂದು ಗುರುತಿಸಲಾಗಿದೆ. ಪ್ರಸ್ತುತ ಮೇ ತಿಂಗಳಿನಲ್ಲಿ 70 ಮಿ.ಮೀ. ವಾಡಿಕೆ ಮಳೆ ಬೀಳಬೇಕಾಗಿದ್ದು, ಪ್ರಸಕ್ತ 43 ಮಿ.ಮಿ ಮಳೆಯಾಗಿದೆ. ಇದುವರೆಗೆ ಎಲ್ಲಿಯೂ ಬಿತ್ತನೆ ಕಾರ್ಯ ನಡೆದಿಲ್ಲ. ಅಂದಾಜು 50 ಸಾವಿರ ಹೆಕ್ಟೇರ್ ಕೃಷಿಭೂಮಿ ಬಿತ್ತನೆ ನಡೆಯಬೇಕಾಗಿದೆ.
ಲಘು ಪೋಷಕಾಂಶಗಳಾದ ಝಿಂಕ್ ಸಲ್ಪೇಟ್, ಜಿಪ್ಸಂ, ಬೋರಾನ್, ಸಸ್ಯ ಸಂಸರಕ್ಷಣಾ ಔಷಧಿಗಳು ಶೇ. 50ರ ಸಹಾಯಧನದಲ್ಲಿ ಕೃಷಿ ಇಲಾಖೆಯಲ್ಲಿ ಲಭ್ಯ ಇವೆ. ಖಾಸಗಿ ಮಾರಾಟ ಮಳಿಗೆಗಳಲ್ಲಿ ಕೂಡ ರಸಗೊಬ್ಬರ ಮಾರಾಟಕ್ಕೆ ಬೆಲೆ ನಿಗದಿಪಡಿಸಲಾಗಿದೆ.
ರಸಗೊಬ್ಬರ ಬೆಲೆ: ಯುರಿಯಾ ರು. 278ದಿಂದ ರು. 285, ಪೊಟ್ಯಾಷ್ ರು. 884ದಿಂದ ರು. 828, ಡಿಎಪಿ ರು. 1,187ದಿಂದ ರು. 1,210, 20-20-13 ರಸಗೊಬ್ಬರ ರು. 937ದಿಂದ ರು. 999ಗಳವರೆಗೆ, 10-26- 26 ರಸಗೊಬ್ಬರ ರು. 1,102, 12-32-16 ಗೊಬ್ಬರ ರು. 1,107, 19-19-19 ರಸಗೊಬ್ಬರ ರು. 884ದಂತೆ ಆಯಾ ರಸಗೊಬ್ಬರ ಬೆಲೆ ಆಧಾರಿತವಾಗಿ ಮಾರಲು ಇಲಾಖೆ ನಿರ್ದೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement