ಸುದ್ದಿ ಸಂಕ್ಷೇಪ
19ರಂದು ಆರೋಗ್ಯ ಮಾಹಿತಿ ಶಿಬಿರ
ಹಾನಗಲ್ಲ: ಇಂಡೋಸಿಸ್ ಲೈಫ್ ಸೈನ್ಸ್ ಸಂಸ್ಥೆ ಬೆಂಗಳೂರು ಇವರ ಆಶ್ರಯದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಮಾರ್ಗದರ್ಶಿ ಮಾಹಿತಿ ಶಿಬಿರ ಮೇ 19ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಶಿಬಿರದಲ್ಲಿ ದಾವಣಗೆರೆಯ ಸರ್ ಹಾಗೂ ಉದ್ಯೋಗರತ್ನ ಪ್ರಶಸ್ತಿ ಪುರಸ್ಕೃತ ತಜ್ಞವೈದ್ಯ ಎಸ್.ಎಚ್. ಕುಲಕರ್ಣಿ 'ಆರೋಗ್ಯವಂತ ಮನುಷ್ಯ ಆರೋಗ್ಯವಾಗಿರಲು ಹಾಗೂ ಅನಾರೊಗ್ಯದ ಮನುಷ್ಯ ಆರೋಗ್ಯವಂತನಾಗಲು' ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಆಸಕ್ತ ನಾಗರಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿ.ಜಿ. ಶಾಂತಪುರಮಠ, ಎಸ್.ಯು. ಕೋತಂಬರಿ ಹಾಗೂ ಆರ್.ಬಿ. ರಾಗಿಕೊಪ್ಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
19ರಂದು ಚಂದನದಲ್ಲಿ ಕುಲಪತಿ ಸಂದರ್ಶನ
ಹಾವೇರಿ: ಮೇ 19ರಂದು ಬೆಳಗ್ಗೆ 8.20ಕ್ಕೆ ದೂರದರ್ಶನದ ಚಂದನ ವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಅವರ ಸಂದರ್ಶನ ಮೂಡಿ ಬರಲಿದೆ. ಚಂದನದ ಸಂವಾದದಲ್ಲಿ ಪ್ರವಾಸರಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಕುಲಪತಿಗಳು ಜಾನಪದ ವಿಶ್ವವಿದ್ಯಾನಿಲಯದ ಧ್ಯೇಯೋದ್ದೇಶ, ಶೈಕ್ಷಣಿಕ ಕಾರ್ಯಕ್ರಮ ಮತ್ತು ಯೋಜನೆಗಳ ಕುರಿತು ಮಾತನಾಡಲಿದ್ದು, ಹೊನ್ನಾವರದ ಕನ್ನಡ ಪ್ರಾಧ್ಯಾಪಕ ಡಾಶ್ರೀಪಾದ ಶೆಟ್ಟಿಯವರು ಕುಲಪತಿಗಳನ್ನು ಸಂದರ್ಶಿಸಲಿದ್ದಾರೆ ಎಂದು ಜಾನಪದ ವಿ.ವಿ. ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ
ರಾಣಿಬೆನ್ನೂರು: ಮನೆಗೆ ಬೀಗ ಹಾಕಿ ಊರಿಗೆ ಹೋಗಿರುವುದನ್ನು ಗಮನಿಸಿದ್ದ ಕಳ್ಳರು, ಬೀಗ ಮುರಿದು ಮನೆಯಲ್ಲಿದ್ದ ರು. 1 ಲಕ್ಷ, 5 ಸಾವಿರ ಬೆಲೆ ಬಾಳುವ 22 ಗ್ರಾಂ ತೂಕದ ಚಿನ್ನದ ಬಳೆ ಹಾಗೂ 20 ಗ್ರಾಂ ತೂಕದ ಒಂದು ರೋಫ್ ಚೈನ್ ದೋಚಿಕೊಂಡು ಪರಾರಿಯಾದ ಘಟನೆ ನಗರದ ಕಂಚಗಾರ ಓಣಿಯಲ್ಲಿ ನಡೆದಿದೆ. ಮನೆ ಬೀಗವನ್ನು ಮುರಿದು ಕಳವು ಮಾಡಿರುವ ಮನೆ ಹಾಗೂ ಬಂಗಾರದ ಒಡವೆಗಳು, ಕಂಚಗಾರ ಓಣಿಯ ಮಳೆಮಠ ಚಾಳದ ನಿವಾಸಿ ಚನ್ನಮ್ಮ ತಂದೆ ಬಸವರಾಜಪ್ಪ ಎಂಬುವವರಿಗೆ ಸೇರಿದ್ದಾಗಿದ್ದು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.