ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 18 May 2013, 10:58 am

ಒಂದು ದಿನದ ತರಬೇತಿ
ಹಾವೇರಿ: ಮಲಹೊರುವ ಮತ್ತು ಸಂಬಂಧಿಸಿದ ಕರ್ತವ್ಯನಿರ್ವಹಿಸುವವರ ಹಾಗೂ ತೆರೆದ ಗುಂಡಿ ಕಕ್ಕಸು ವ್ಯವಸ್ಥೆ ಅಸ್ತಿತ್ವದ ಸಮೀಕ್ಷೆ ಕುರಿತು ಹಾವೇರಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿ, ಪರಿಸರ ಅಭಿಯಂತರ, ಗಣತಿದಾರ, ಮೇಲ್ವಿಚಾರಕ ಹಾಗೂ ಡಾಟಾ ಎಂಟ್ರಿ ಆಪರೇಟರ್ಸ್‌ಗಳಿಗೆ ಒಂದು ದಿನ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಂಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಜಿ. ಜಗದೀಶ ಮಾತನಾಡಿ, ಮಲಹೊರುವ ಕಾರ್ಯ ನಿರ್ವಹಿಸುವವರು ಸ್ವಯಂಘೋಷಣೆ ಮಾಡಿಕೊಳ್ಳಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ಸರ್ಕಾರದ ಪುನರ್ವಸತಿ ಸೌಲಭ್ಯಗಳನ್ನು ಪಡೆಯಬೇಕು ಎಂದು ವಿನಂತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ. ಹನುಮಂತಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಸಿ. ತಿರ್ಲಾಪುರ, ಪರೀಕ್ಷಾರ್ಥ ಉಪ ವಿಭಾಗಾಧಿಕಾರಿ ಸತೀಶಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಾಸ್ಟೇಲ್‌ಗೆ ಅರ್ಜಿ ಆಹ್ವಾನ
ಹಾವೇರಿ: ಸಮಾಜ ಕಲ್ಯಾಣ ಇಲಾಖೆಯಿಂದ ಸವಣೂರು ತಾಲೂಕಿನಲ್ಲಿ ನಡೆಯುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಮೇ 31ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ 5ರಿಂದ 10ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಊಟ, ಉಪಹಾರ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಹಾಸಿಗೆ ಹಾಗೂ ಸಮವಸ್ತ್ರ, ನೀಡಲಾಗುವುದು. ಜಾತಿ, ಆದಾಯ ಪ್ರಮಾಣಪತ್ರ, 2012-13ನೇ ಸಾಲಿನಲ್ಲಿ ತೇರ್ಗಡೆಯಾದ ಅಂಕಪಟ್ಟಿ ಲಗತ್ತಿಸಬೇಕೆಂದು ತಿಳಿಸಿದ್ದಾರೆ. ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿಗದಿತ ಅರ್ಜಿ ನಮೂನೆಗಳನ್ನು ಸವಣೂರು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಸಂಪರ್ಕಿಸಬಹುದು.
ಮಕ್ಕಳ ಪ್ರತಿಭೆಗೆ ಬೇಸಿಗೆ ಶಿಬಿರ ಪೂರಕ: ಹೊಳಿಹೊಸೂರು
ಹಾವೇರಿ: ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳಿಗಾಗಿ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಲು ಬೇಸಿಗೆ ಶಿಬಿರಗಳು ಸೂಕ್ತ ವೇದಿಕೆಗಳಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಚನ್ನಮ್ಮ ಹೊಳಿಹೊಸೂರು ಹೇಳಿದರು. ಬೆಂಗಳೂರಿನ ಬಾಲಭವನ ಸೊಸೈಟಿ ಹಾಗೂ ಹಾವೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾದ ಹಾವೇರಿ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರವನ್ನು ನಗರದ ಜೆ.ಪಿ. ರೋಟರಿ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಪೋಷಕರು ಮಕ್ಕಳನ್ನು ಶಿಬಿರಗಳಿಗೆ ಕಳುಹಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಉಮಾ ಬ. ಹಲಗಣ್ಣವರ, ಮುತ್ತುರಾಜ ಹಿರೇಮಠ, ಪ್ರಶಾಂತ ಬಾಂಗರೆ, ಕಾಂತೇಶ ಎನ್. ಎಂ, ಶ್ರವಣಕುಮಾರ ಕುಲಕರ್ಣಿ, ಎಂ.ಜಿ. ಕಮ್ಮಾರ ಹಾಗೂ ಗಂಗಾಧರ ನಂದಿ ಅವರು ಮಾತನಾಡಿ, ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಬಿರದಲ್ಲಿ ತರಬೇತಿ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆ.ಪಿ. ಪ್ರಾಥಮಿಕ ಶಾಲೆಯ ಶಿಕ್ಷಕಿ ಕುಸುಮಾ ನಾಡಿಗೇರ, ಸಿಬ್ಬಂದಿ, ಪಾಲಕರು ಹಾಗೂ ಮಕ್ಕಳಿ ಭಾಗವಹಿಸಿದ್ದರು. ಮಂಗಳಾ ಅಳಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ರೇಣುಕಾ ಎನ್. ಮತ್ತಿಗಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement