ದೇವೇಗೌಡ ರೈತಪರ ನಾಯಕ: ಬಿನ್ನಾಳ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 18
ದೇಶದ ರೈತರ ಹಿತ ಚಿಂತನೆ ನಡೆಸಿದ ಮೊದಲ ಪ್ರಧಾನಿ ಎಚ್.ಡಿ. ದೇವೇಗೌಡ ರೈತ ಹೋರಾಟ ನಡೆಸುವ ಮೂಲಕ ಜನಪರ ನಾಯಕರಾಗಿದ್ದಾರೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಮೋಹನ ಬಿನ್ನಾಳ ಬಣ್ಣಿಸಿದರು.
ಜೆಡಿಎಸ್ ಅಧಿನಾಯಕ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 81ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು, ಹಾಲು ವಿತರಿಸಿ ಅವರು ಮಾತನಾಡಿದರು.
ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ಸಾರ್ವಜನಿಕ ಸೇವೆಯಲ್ಲಿ ತೊಡಗುವ ಮೂಲಕ ದೇಶದ ಪ್ರಧಾನಿ ಪಟ್ಟ ಅಲಂಕರಿಸಿದ ಮಣ್ಣಿನ ಮಗ ದೇವೆಗೌಡರು ರೈತರ ಸಮಸ್ಯೆಗಳನ್ನು ಬಹು ಹತ್ತಿರದಿಂದ ಅವಲೋಕಿಸಿ ಪರಿಹಾರ ಕಂಡು ಹಿಡಿದಿದ್ದಾರೆ ಎಂದರು.
ಜೀವನದುದ್ದಕ್ಕೂ ಬಡ ಜನರ ಪರವಾಗಿ ನಿಂತಿರುವ ಅವರು, ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿ ವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ರೈತಪರ ಯೋಜನೆಗಳನ್ನು ಘೋಷಿಸುವ ಮೂಲಕ ಜನ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು. ಜೆಡಿಎಸ್ ಸೇವಾದಳದ ಅಧ್ಯಕ್ಷ ಆರ್.ವಿ. ಕುಂಠೆ, ಮುಖಂಡ ಚನ್ನಬಸಪ್ಪ ಶೆಟ್ಟರ, ಕುರವತ್ತೆಪ್ಪ ಬಾಳಿಕಾಯಿ, ಹನುಮಂತಪ್ಪ ಕಾಟೇನಹಳ್ಳಿ, ಹಜರತ್ ಅಲಿ ನೀರಲಗಿ ಉಪಸ್ಥಿತರಿದ್ದರು.