ಸಚಿವ ಸ್ಥಾನ ವಂಚಿತ ಬ್ಯಾಡಗಿ ಕ್ಷೇತ್ರ
ಬ್ಯಾಡಗಿ: ಬ್ಯಾಡಗಿ ಕ್ಷೇತ್ರದ ಮತದಾರರು ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದ್ದರೂ ಸ್ಥಳೀಯ ಶಾಸಕ ಬಸವರಾಜ ಶಿವಣ್ಣನವರಗೆ ಸಚಿವ ಸ್ಥಾನ ನೀಡದೆ ಕಾಂಗ್ರೆಸ್ ಹೈಕಮಾಂಡ್ ಕ್ಷೇತ್ರದ ಮತದಾರರಿಗೆ ಕೈಕೊಟ್ಟಿದೆ.
ಕಾರ್ಯಕರ್ತರಿಗೆ ನಿರಾಸೆ: ಶಿವಣ್ಣನವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಸ್ಥಳೀಯ ಕಾರ್ಯಕರ್ತರ ಕೂಗಾಗಿತ್ತಾದರೂ ಕಾಂಗ್ರೆಸ್ ಹೈಕಮಾಂಡ್ಗೆ ಅವರ ಧ್ವನಿ ಮಾತ್ರ ಕೇಳಿದಂತಿಲ್ಲ. ಬೆಂಗಳೂರಿನಲ್ಲಿ ಶನಿವಾರ ಸಚಿವ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದು, ಶಿವಣ್ಣನವರ ಅವರಿಗೆ ಅವಕಾಶ ಲಭಿಸದೇ ಇರುವುದು ಬಹುತೇಕ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.
ವಿಪರ್ಯಾಸದ ಸಂಗತಿ: ರಾಜಕೀಯವಾಗಿ ಅಷ್ಟೇನೂ ಪ್ರಾಬಲ್ಯ ಹೊಂದಿರದ ಈ ಕ್ಷೇತ್ರದಲ್ಲಿ ಪ್ರಾತಿನಿದ್ಯಗಳ ವಿಷಯದಲ್ಲಿಯೂ ಕೂಡ ಹಿನ್ನಡೆಯಾಗಿದೆ ಎಂದರೆ ತಪ್ಪಾಗಲಾರದು, 1997ರಲ್ಲಿ ಹೊಸ ಜಿಲ್ಲೆಯಾದ ಬಳಿಕ ಮೂವರು ಶಾಸಕರಾದರೂ ಬ್ಯಾಡಗಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಮಾತ್ರ ಕ್ಷೇತ್ರಕ್ಕೆ ಲಭಿಸದಿರುವುದು ಇದಕ್ಕೆ ಸಾಕ್ಷಿ. ಅಲ್ಲದೇ ಆಯ್ಕೆಯಾದ ಎಲ್ಲ ಶಾಸಕರು ಸರ್ಕಾರದ ಪರವಾಗಿದ್ದರೂ (ಕಾಂಗ್ರೆಸ್ ಮತ್ತು ಜೆಡಿಎಸ್ 20 ತಿಂಗಳ ಸಮ್ಮಿಶ್ರ ಸರ್ಕಾರ ಹೊರತುಪಡಿಸಿ) ಸಚಿವ ಸ್ಥಾನ ಮಾತ್ರ ದೊರೆಯದಿರುವುದು ವಿಪರ್ಯಾಸ.
ಕೆಲವರಿಗೆ ಆದ್ಯತೆ: ದೇವರಾಜ ಅರಸು ಸಂಪುಟದಲ್ಲಿ ಅರಣ್ಯ ಖಾತೆ ಸಚಿವರಾಗಿ ಕೆ.ಎಫ್. ಪಾಟೀಲ, ವೀರಪ್ಪ ಮೊಯಿಲಿ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಎಚ್.ಡಿ. ಲಮಾಣಿ, ಎಸ್.ಆರ್. ಬೊಮ್ಮಾಯಿ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕೆ.ಎಸ್. ಬೀಳಗಿ ಕಾರ್ಯನಿರ್ವಹಿಸಿದ್ದನ್ನು ಹೊರತುಪಡಿಸಿ ಕ್ಷೇತ್ರದ ಯಾವೊಬ್ಬ ಶಾಸಕರಿಗೂ ಸಚಿವರಾಗುವ ಅವಕಾಶ ಒದಗಿ ಬಂದಿಲ್ಲ.
ಸಮುದಾಯ ನಿರ್ಲಕ್ಷ್ಯ: ಕುರುಬ ಸಮುದಾಯದ ಆರಾದ್ಯದೈವ ಕನಕದಾಸರ ಕರ್ಮಭೂಮಿ ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹೊಂದಿರುವ ಬ್ಯಾಡಗಿ ಮತಕ್ಷೇತ್ರಕ್ಕೆ ಅದೇ ಸಮುದಾಯಕ್ಕೆ ಸೇರಿದ ಬಸವರಾಜ ಶಿವಣ್ಣನವರ ಶಾಸಕರಾಗಿ ಆಯ್ಕೆಯಾಗಿದ್ದು ಕಾಕತಾಳೀಯ. ಸಮುದಾಯಕ್ಕೆ ಪ್ರಾತಿನಿಧ್ಯ ದೊರೆತಲ್ಲಿ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ಗ್ಯಾರಂಟಿ ಎನ್ನುವ ಮಾತುಗಳು ಅವರ ಆಪ್ತ ವಲಯದಲ್ಲಿದ್ದವು, ಲೋಕಸಭಾ ಕ್ಷೇತ್ರವನ್ನಾಧರಿಸಿ ಸಾಮಾಜಿಕ ನ್ಯಾಯದಡಿ ಪ್ರಾತಿನಿದ್ಯ ನೀಡುವ ಕಾಂಗ್ರೆಸ್ ಕುರುಬ ಸಮುದಾಯಕ್ಕೆ ಸೇರಿದ ಶಾಸಕ ಬಸವರಾಜ ಶಿವಣ್ಣನವರ ಅವರ ಹೆಸರನ್ನು ಕೈಬಿಟ್ಟಿರುವುದು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.
ಪರಿಹಾರ ದೊರೆಯುವುದೇ?: ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಎಪಿಎಂಸಿಯಲ್ಲಿ ರೈತರು, ಕೂಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು, ತಳಿ ಅಭಿವೃದ್ಧಿ ಸಂಶೋಧನಾ ಕೇಂದ್ರ ಪ್ರಯೋಗಾಲಯ ಸ್ಥಾಪನೆ, ಕುಂಟುತ್ತಾ ಸಾಗಿರುವ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದು, ಪಟ್ಟಣದ ಮುಖ್ಯರಸ್ತೆ ಅಗಲೀಕರಣ, ಅವೈಜ್ಞಾನಿಕವಾಗಿ ನಿರ್ಮಿಸಿರುವ ತಾಲೂಕು ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು, ಬಹುಗ್ರಾಮ ನೀರಿನ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು, ತಾಲೂಕಿನಲ್ಲಿರುವ ಕೆರೆಗಳಿಗೆ ನದಿಗಳಿಂದ ನೀರು ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸುವುದು, ತಾಂತ್ರಿಕ ಮಹಾವಿದ್ಯಾಲಯ ಆರಂಭಿಸುವುದು ಸೇರಿದಂತೆ ಈಗಿರುವ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿ ಶೈಕ್ಷಣಿಕ ಪ್ರಗತಿಯಾಗಬೇಕಿದೆ.
ಶಿವಣ್ಣನವರ ಅವರಿಗೆ ಸಚಿವ ಸ್ಥಾನ ದೊರೆತಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಒದಗುವ ಮೂಲಕ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದ ಮತದಾರರ ಆಸೆ ಮಾತ್ರ ಕೈಗೂಡಲಿಲ್ಲ.
-ಶಿವಾನಂದ ಮಲ್ಲನಗೌಡರ