ವೇಬ್ರೀಜ್ ಪುನಾರಂಭಕ್ಕೆ ಒತ್ತಾಯ
ಶಿಗ್ಗಾಂವಿ: ಪಟ್ಟಣದಲ್ಲಿ ಒಕ್ಕುಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿಯಿಂದ ಪ್ರಾರಂಭಿಸಲಾದ ಭಾರಿ ಗಾತ್ರದ 40 ಮೆಟ್ರಿಕ್ ಟನ್ ತೂಕದ ಯಂತ್ರವು (ವೇಬ್ರೀಜ್) ಕಳೆದ ಮೂರು ತಿಂಗಳಿಂದ ಬಂದಾಗಿದ್ದು, ಯಂತ್ರ ತಕ್ಷಣ ಚಾಲನೆ ಮಾಡುವಂತೆ ಸಾರ್ವಜನಿಕರು ಜಿಲ್ಲಾ ಡೈರೆಕ್ಟರ್ ಅವರಿಗೆ ಆಗ್ರಹಿಸಿದ್ದಾರೆ.
ತೊಂದರೆ: ಶಿಗ್ಗಾಂವಿ ಒಕ್ಕುಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿಯಿಂದ ಭಾರಿ ಗಾತ್ರದ ಯಂತ್ರ ಪ್ರಾರಂಭಿಸಿದ್ದಕ್ಕೆ ಸಾರ್ವಜನಿಕರು ಹಾಗೂ ರೈತರು, ವ್ಯಾಪಾರಸ್ಥರು, ಲಾರಿ ಮಾಲಕರು ಹರ್ಷ ವ್ಯಕ್ತಪಡಿಸಿದ್ದರು. ಆದರೆ, ಕೆಲ ದಿನಗಳ ನಂತರ ಯಂತ್ರ ಬಂದ್ ಆಗಿದ್ದರಿಂದ ತೀವ್ರ ತೊಂದರೆ ಅನುಭವಿಸುವಂತಾಯಿತು.
ಹಾವೇರಿ, ಹುಬ್ಬಳ್ಳಿಯಲ್ಲಿ ಮಾತ್ರ: ಹಾವೇರಿಯನ್ನು ಬಿಟ್ಟರೆ ಹುಬ್ಬಳ್ಳಿವರೆಗೂ ಯಾವುದೇ ಭಾರಿ ಗಾತ್ರದ ತೂಕದ ಯಂತ್ರವು (ವೇಬ್ರೀಜ್) ಇರುವದಿಲ್ಲ. ಆದು ಅಲ್ಲದೆ ಯಂತ್ರವು ರಾಷ್ಟ್ರೀಯ ಹೆದ್ದಾರಿ- 4ಕ್ಕೆ ಹೊಂದಿಕೊಂಡಿರುವುದರಿಂದ ಲಾರಿ ಹಾಗೂ ಇತರೆ ವಾಹನಗಳು ತೂಕಕ್ಕಾಗಿ ಹಾವೇರಿ, ಹುಬ್ಬಳ್ಳಿಗೆ ಹೋಗುವಂತಾದ ಪರಿಸ್ಥಿತಿ ಒದಗಿ ಬಂದಿದೆ.
ಎಪಿಎಂಸಿಯಿಂದ ಸ್ಥಾಪನೆ: ಶಿಗ್ಗಾಂವಿ ಒಕ್ಕುಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ ಆಗಿನ ಅಧ್ಯಕ್ಷ ಭರಮಗೌಡ್ರ ಮ. ಪಾಟೀಲ ಹಾಗೂ ಆಡಳಿತ ಸಮಿತಿಯವರು 2009-10ರ ಕ್ರೀಯಾ ಯೋಜನೆಯಲ್ಲಿ ಸುಮಾರು ರು. 15 ಲಕ್ಷ ವೆಚ್ಚದಲ್ಲಿ ವೇಬ್ರೀಜ್ ಸ್ಥಾಪಿಸಲು ತಿರ್ಮಾನಿಸಲಾಗಿ 2011 ಜನವರಿಯಲ್ಲಿ ಸ್ಥಾಪನೆಗೊಂಡು ಪ್ರಾರಂಭಿಸಲಾಯಿತು ಎನ್ನಲಾಗಿದ್ದು, ಕೆಲ ದಿನಗಳವರೆಗೆ ಎಪಿಎಂಸಿಯಿಂದ ಕಾರ್ಯನಿರ್ವಹಿಸಿತು. ಆದರೆ, ಎಪಿಎಂಸಿ ನಡೆಸಿದ ವೇಳೆಯಲ್ಲಿ ಎಷ್ಟು ಪ್ರಮಾಣದಲ್ಲಿ ಲಾಭವಾಯಿತು ಎನ್ನುವುದು ತಿಳಿದು ಬಂದಿಲ್ಲ.ಸರಕಾರವು ಲೀಜ್ ಕಂ ಸೇಲ್ ಅಂತ ಸ್ಥಳಿಯ ಶಿಗ್ಗಾಂವಿ ಎಪಿಎಂಸಿ ಆಡಳಿತ ಮಂಡಳಿಗೆ ನೀಡಲಾಯಿತು. ಆದರೆ, ಇದರಲ್ಲಿ ಅನುಭವ ಹೊಂದಿದವರಿಗೆ ಟೆಂಡರ್ ನೀಡಬೇಕು ಎಂದಿದ್ದರೂ ಅಲ್ಲದೆ ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆದಿರುವುದಿಲ್ಲ. ಕಡಿಮೆ ದರದಲ್ಲಿ ಆಗಿದೆ ಎನ್ನುವುದು ಕೇಳಿ ಬಂದಿತು.
ದಿನ ಕಳೆದಂತೆ ಸರಕಾರವೇ ಅದನ್ನು ತನಿಖೆಯನ್ನು ಮಾಡಲು ಎಪಿಎಂಸಿ ಅಧಿಕಾರಿಗಳನ್ನು ನಿಯೋಜಿಸಿ ತನಿಖೆ ಮಾಡಿ ತನಿಖಾ ವರದಿ ಆಧಾರದ ಮೇಲೆ ಟೆಂಡರ್ನ್ನು ರದ್ದುಪಡಿಲಾಗಿದೆ ಎಂದು ಸ್ಥಳೀಯ ಎಪಿಎಂಸಿ ಕಾರ್ಯದರ್ಶಿ ಪಿ.ಸಿ. ನವಲಗುಂದ ತಿಳಿಸಿದರು.
ಶೀಘ್ರ ಟೆಂಡರ್ ಪ್ರಕ್ರೀಯೆ ನಡೆಸಿ, ಉತ್ತಮ ಸೇವೆ ನೀಡುವವರಿಗೆ ಟೆಂಡರ್ ನೀಡಬೇಕೆಂದು ಸಾರ್ವಜನಿಕರು ಹಾಗೂ ರೈತರು, ವ್ಯಾಪಾರಸ್ಥರು, ಲಾರಿ ಮಾಲೀಕರು ಆಗ್ರಹಿಸಿದ್ದಾರೆ.
-ಬಸವರಾಜ ಎಸ್. ಹಿರೇಮಠ