ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೋಳಿವಾಡಗೆ ಸಚಿವ ಸ್ಥಾನ ನೀಡಿ: ಪ್ರತಿಭಟನೆ

Rashmi Kasaragodu
Updated On : 22 May 2013, 11:52 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 21
ಬಿಜೆಪಿ ಹಾಗೂ ಜಿಲ್ಲೆಯಲ್ಲಿ ಜನ್ಮ ತಾಳಿರುವ ಕೆಜೆಪಿಯನ್ನು ಸೋಲಿಸಿರುವ, ಕಾಂಗ್ರೆಸ್ ಶಾಸಕರಲ್ಲಿ ಹಿರಿಯರಾಗಿರುವ ರಾಣಿಬೆನ್ನೂರಿನ ಶಾಸಕ ಕೆ.ಬಿ. ಕೋಳಿವಾಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ತಾಲೂಕು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನಗರದ ಬಸ್ ನಿಲ್ದಾಣದ ಎದುರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಗ್ಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಹಾಗೂ ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಕೆ.ಬಿ. ಕೋಳಿವಾಡರ ಅಭಿಮಾನಿಗಳು ಮತ್ತು ಮುಖಂಡರು ನಗರದ ಕೇಂದ್ರ ಬಸ್ ನಿಲ್ದಾಣ ಎದುರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಮೇ 18ರಂದು ನಡೆದ ಪ್ರಮಾಣ ವಚನ ಸ್ವಿಕಾರ ಸಮಾರಂಭದಲ್ಲಿ ಕೆ.ಬಿ. ಕೋಳಿವಾಡರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿದರು. ಕೋಳಿವಾಡರು ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸುತ್ತಾರೆಂಬ ನಂಬಿಕೆಯಿಂದ ಕಾದು ಕುಳಿತಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಮೋಸ ಮಾಡಿದ್ದಾರೆಂದು ಕೋಳಿವಾಡ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ ಮಾತನಾಡಿ, ಚುನಾಯಿತರಾಗಿರುವ 121 ಕಾಂಗ್ರೆಸ್ ಶಾಸಕರಲ್ಲಿ ಕೆ.ಬಿ. ಕೋಳಿವಾಡರು ಹಿರಿಯರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಈ ಹಿಂದೆ ಚುನಾವಣೆ ಪ್ರಚಾರಾರ್ಥ ರಾಣಿಬೆನ್ನೂರಿಗೆ ಬಂದಿದ್ದಾಗ ತಿಳಿಸಿದಂತೆ ಕೋಳಿವಾಡರಿಗೆ ಸಚಿವ ಸ್ಥಾನ ನೀಡಬೆಕಾಗಿತ್ತು. ಗೆದ್ದ ಮೇಲೆ ಭರವಸೆ ಮರೆತಿರುವ ಕಾರಣ ಅಭಿಮಾನಿಗಳು ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಮುಖಂಡರು ತಿಳಿಸಿದರು.
ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಜನ್ಮ ತಾಳಿರುವ ಕೆಜೆಪಿಯ ಮೊದಲ ತಾಲೂಕು ಕಾರ್ಯಾಲಯವನ್ನು ಹಾಗೂ ಮೊದಲ ಜಿಲ್ಲಾಧ್ಯಕ್ಷರನ್ನು ನೀಡಿದ ವಿಧಾನಸಭಾ ಕ್ಷೇತ್ರವೆಂಬ ಕ್ಯಾತಿಗೆ ಪಾತ್ರವಾಗಿರುವ ರಾಣಿಬೆನ್ನೂರಲ್ಲಿ ಕೋಳಿವಾಡರು ಕೆಜೆಪಿ ಹಾಗೂ ಬಿಜೆಪಿ ಎರಡನ್ನೂ ಸೋರಿಸಿದರು. ಅವರಿಗೆ ಮಂತ್ರಿ ಸ್ಥಾನ ನೀಡುವುದು ನ್ಯಾಯೋಚಿತ ಎಂದರು.
ತಾಲೂಕು ಯುವ ಕಾಂಗ್ರೆಸ್ ಮುಖಂಡ ರವಿಂದ್ರಗೌಡ ಎಫ್. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಜನ್ಮ ತಾಳಿರುವ ಕೆಜೆಪಿಯನ್ನು ಸೋಲಿಸಿದ ಕೋಳಿವಾಡರಿಗೆ ಮಂತ್ರಿ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು. ಹಾವೇರಿ ಶಾಸಕರಾದ ರುದ್ರಪ್ಪ ಲಮಾಣಿ, ಮನೋಹರ ತಹಸೀಲ್ದಾರ್, ಬಸವರಾಜ ಶಿವಣ್ಣನವರಗೆ ವಿವಿಧ ಜವಾಬ್ದಾರಿ ವಹಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೆನಾಯ್ಕರ, ಎಪಿಎಂಸಿ ಅಧ್ಯಕ್ಷ ಸಣ್ಣ ತಮ್ಮಪ್ಪ ಬಾರ್ಕಿ, ಲಕ್ಷ್ಮಣ ಚಿಗರಿ, ನಾಗರಾಜ ಬದಾಮಿ, ಕಿಶೋರ ಸಣ್ಣಮನಿ, ಶ್ರೀನಿವಾಸ ಹುಟ್ಟಿ, ನಾಗರಾಜ ಮರಿಯಮ್ಮನವರ, ಬಸವರಾಜ ಹಚ್ಚಗೊಂಡರ, ರಾಘವೇಂದ್ರ ಚಿನ್ನಿಕಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement