ಜನಪ್ರತಿನಿಧಿಗಳಿಗೆ ಕುಡಿವ ನೀರು ಪ್ರತಿಷ್ಠೆ
ಹಾನಗಲ್ಲ: ಹಾನಗಲ್ಲ ನಗರಕ್ಕೆ ಕುಡಿಯುವ ನೀರು ಕೊಡುವ-ಬಿಡುವ ವಿಷಯ ಈಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜಿದ್ದಾಜಿದ್ದಿನ ಪ್ರಶ್ನೆಯಾಗಿ ಕಾಡುತ್ತಿದ್ದು, ಸಮಸ್ಯೆ ಪರಿಹರಿಸಿಕೊಂಡು ಕನಿಷ್ಠ 4 ದಿನಕ್ಕೊಮ್ಮೆ ನೀರು ಬಿಡಲೇಬೇಕೆಂಬ ನಾಗರಿಕರ ಒತ್ತಾಸೆ ಈಡೇರಿಸಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.
ಮೇಲೇರಗಿದ ಸಮಸ್ಯೆ: 30 ಸಾವಿರ ಜನಸಂಖ್ಯೆಯನ್ನುಳ್ಳ ಹಾನಗಲ್ಲ ನಗರಕ್ಕೆ ಪ್ರತಿನಿತ್ಯ ಕನಿಷ್ಠ 30 ಲಕ್ಷ ಲೀಟರ್ ನೀರು ಬೇಕು. 5,400 ಮನೆಗಳು, 3,600 ಮನೆಗಳಿಗೆ ನಳಗಳು, 55 ಸಾರ್ವಜನಿಕ ನಳಗಳು ಇವೆ. ಈಗ ನಗರ ಪ್ರದೇಶವನ್ನು ಹಂಚಿಕೆ ಮಾಡಿ 5 ದಿನಕ್ಕೊಮ್ಮೆ ನೀರು ಬಿಡಲು ಹೆಣಗಾಡಿದ ಪುರಸಭೆಗೆ ಈಗ ದಿಢೀರನೆ ಸಮಸ್ಯೆ ಕಾಣಿಸಿಕೊಂಡು 8 ದಿನಕ್ಕೊಮ್ಮೆ ನೀರು ಬಿಡುವುದಾಗಿ ಡಂಗುರ ಸಾರಿಸಿ ಸಮಸ್ಯೆಯನ್ನೇ ಮೈಮೇಲೆ ಎಳೆದುಕೊಂಡಿದೆ.
ಬರಿದಾದ ಆನೆಕೆರೆ: ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ನಗರಕ್ಕೆ ಹೊಂದಿಕೊಂಡ ಬೃಹದಾಕಾರದ ಆನೆಕೆರೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ಇಡೀ ಆನೆಕರೆ ಒಡ್ಡಿಗೆ ಪಿಚ್ಚಿಂಗ್ ಹಾಗೂ ತೂಬುಗಳನ್ನು ಮರು ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಈ ಕಾರಣಕ್ಕಾಗಿ ಸ್ವಲ್ಪ ನೀರನ್ನು ಕೂಡ ಆನೇಕರೆಯಿಂದ ಹೊರಬಿಡಲಾಯಿತು. ಆದ್ದರಿಂದ ಕೆರೆಯಲ್ಲಿ ನೀರು ಸಂಗ್ರಹಿಸಲಾಗಲಿಲ್ಲ. ಒಂದಷ್ಟು ನೀರು ಸಂಗ್ರಹಿಸಲು ಮುಂದಾದರೆ ಆನೆಕರೆಗೆ ನೀರೊದಗಿಸುವ ಧರ್ಮಾ ನದಿ ನೀರಿಲ್ಲದೆ ಒಣಗಿದೆ. ಹೀಗಾಗಿ ಆನೆಕೆರೆಯೂ ಖಾಲಿ, ನಗರದ ನಾಗರಿಕರಿಗೆ ಕುಡಿಯುವ ನೀರಿಗೂ ಬರ ಬಂದಂತಾಗಿದೆ. ಇಂಥ ಸ್ಥಿತಿಯಲ್ಲಿ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದು, ನೀರು ಕೊಡಲು ಕಸರತ್ತು ಆರಂಭಿಸಿದ್ದಾರೆ.
ಕೊಳವೆ ಬಾವಿ ನಿರ್ಲಕ್ಷ್ಯ: ಆನೆಕೆರೆಯನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವುದಕ್ಕಿಂತಲೂ ಮೊದಲು ನಗರಕ್ಕೆ ಕೊಳವೆ ಬಾವಿಗಳಿಂದಲೇ ನೀರು ಒದಗಿಸಲಾಗುತ್ತಿತ್ತು. ಆದರೆ, ನಗರಕ್ಕೆ ಕುಡಿಯುವ ನೀರು ಪೂರೈಸಲು ಹೊಸ ವ್ಯವಸ್ಥೆ ಬಂದಾಗಿನಿಂದ ಕೊಳವೆ ಬಾವಿಗಳನ್ನು ನಿರ್ಲಕ್ಷಿಸಿದ ಫಲವಾಗಿ ಕೊಳವೆ ಬಾವಿಗಳು ದುರಸ್ತಿಯಾದವು. ನಗರಕ್ಕೆ ಕುಡಿಯುವ ನೀರು ಒದಗಿಸುವ ಒಟ್ಟು 57 ಕೊಳವೆ ಬಾವಿಗಳಿವೆ. ಆದರೆ, ಇವುಗಳಲ್ಲಿ 18 ನಿರುಪಯುಕ್ತವಾಗಿವೆ. 16 ಕೊಳವೆ ಬಾವಿಗಳಿಂದ ಮಾತ್ರ ಜಲಾಗಾರಕ್ಕೆ ನೀರು ಸರಬರಾಜು ಆಗುತ್ತಿದೆ. ಅವು ಕೂಡ ವಿದ್ಯುತ್ ಅವಲಂಬಿಸಿವೆ. ಇನ್ನು ಅಚ್ಚರಿ ಸಂಗತಿ ಎಂದರೆ ಇದರಲ್ಲಿ ಹಲವು ಕೊಳವೆ ಭಾವಿಗಳು ಒಂದೆರಡು ಗಂಟೆ ನೀರು ಎತ್ತಿದಾಕ್ಷಣ ಬಂದ ಆಗುತ್ತವೆ. ಇದಕ್ಕೆ ಅಂತರ್ಜಲ ವೈಫಲ್ಯವೇ ಕಾರಣ ಎಂಬುದು ಗಮನಾರ್ಹ ಸಂಗತಿ.
ಕೈಪಂಪು ನಿರರ್ಥಕ: ಮಳೆ ವಿಳಂಬ ಆಧರಿಸಿ 13 ಕೊಳವೆ ಬಾವಿಗಳನ್ನು ಫ್ಲಷಿಂಗ್ (ಪುನರುಜ್ಜೀವನ) ಮಾಡಲಾಗಿದೆ. ಆದರೆ, ಇವುಗಳಿಂದ ನೀರೊದಗಿಸಲು ಬೇಕಾಗುವ ವ್ಯವಸ್ಥೆಗೆ ಪೂರ್ಣ ಪ್ರಮಾಣದ ದುರಸ್ತಿ ಮುಗಿದಿಲ್ಲ. ಮುಗಿದರೂ ಕೂಡ ಕೊಳವೆ ಬಾವಿಗಳಿಂದ ಪೂರ್ಣ ಪ್ರಮಾಣದ ನೀರು ಒದಗುತ್ತದೆ ಎಂಬ ವಿಶ್ವಾಸ ಪುರಸಭೆಗಿಲ್ಲ. ನಗರದಲ್ಲಿ ಈಗ 23 ಕೈಪಂಪುಗಳಿವೆ. ಇವಾವುಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳ ಪೇಚಾಟ: ನಾಗರಿಕರಿಂದ ನೀರಿಗಾಗಿ ಒತ್ತಡ ಆರಂಭವಾಗಿದೆ. ಅಚ್ಚರಿ ಎಂದರೆ ನೂತನವಾಗಿ ಆಯ್ಕೆಯಾದ ಕೆಜೆಪಿ ಪಕ್ಷದ ಪುರಸಭಾ ಸದಸ್ಯರೆ ಮಂಗಳವಾರ ಪುರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿ ಆನೆಕೆರೆ ಕಾಮಗಾರಿ ಶೀಘ್ರ ಪೂರೈಸಿ, ನಗರದ ಕೊಳವೆ ಬಾವಿಗಳನ್ನು ದುರಸ್ತಿಗೊಳಿಸಿ ನಗರಕ್ಕೆ 4 ದಿನಕ್ಕೊಮ್ಮೆ ನೀರು ಕೊಡಿ ಎಂದು ಅಂಗಲಾಚುವಂತಾಗಿದೆ. ಪುರಸಭೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ.
ಪುರಸಭೆ ವಿಫಲ: ನೂತನ ಶಾಸಕ ಮನೋಹರ ತಹಸೀಲ್ದಾರ್ ಸೋಮವಾರವಷ್ಟೇ ಗ್ರಾಮೀಣ ಹಾಗೂ ಪುರಸಭೆ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿಗೆ ಅಡೆತಡೆ ಸಲ್ಲದು. ಸರಕಾರ ಎಷ್ಟೇ ಖರ್ಚಾದರೂ ಅನುದಾನ ಒದಗಿಸುತ್ತದೆ. ಎಷ್ಟೇ ಕಷ್ಟ ಆದರೂ ನೀರಿನ ತೊಂದರೆ ತಕ್ಕುದಲ್ಲ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಈಗ ಪುರಸಭೆಗೆ ಒಂದೇ ಧ್ಯಾನ. ಅದು ನೀರು ಬಿಡುವುದು. 4 ಅಥವಾ 5 ದಿನಕ್ಕೊಮ್ಮೆ ನೀರು ಬಿಡುತ್ತಿದ್ದರೂ ಹೇಳಿಕೊಳ್ಳುವಂತಹ ನೀರಿನ ಸಮಸ್ಯೆ ಕಾಣಲಿಲ್ಲ. ಆದರೆ, ಸಮಸ್ಯೆಗೆ ಆರೇಳು ತಿಂಗಳು ಮೊದಲೇ ಯೋಜನೆ ರೂಪಿಸಿಕೊಳ್ಳುವಲ್ಲಿ ಪುರಸಭೆ ವಿಫಲವಾಗಿದೆ ಎಂಬ ವಾದವಿದೆ.
ಆನೆಕೆರೆ ಕಾಮಗಾರಿ ಬರದಿದ್ದರೆ ನೀರಿನ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂಬ ಮಾತು ಕೇಳಿಬರುತ್ತವೆಯಾದರೂ, ಧರ್ಮಾ ನದಿಯಲ್ಲೇ ನೀರಿಲ್ಲದೆ ಆನೆಕರೆಗೆ ನೀರೆಲ್ಲಿಂದ ಬಂದೀತು. ಕೆರೆಯಲ್ಲಿ ಎಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯ ಎಂಬ ಚರ್ಚೆ ನಡೆಯುತ್ತಿಯೇ ಹೊರತು ಸಮಸ್ಯೆ ಪರಿಹಾರ ಮಾತ್ರ ಸುಲಭ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನೀರಿನ ಸಮಸ್ಯೆ ಉಂಟಾಗಿದೆ.
ಈ ನಡುವೆ ಮುಂಡಗೋಡ ತಾಲೂಕಿನ ಹಾನಗಲ್ಲ ತಾಲೂಕಿಗೆ ಹೊಂದಿಕೊಂಡಿರುವ ಧರ್ಮಾ ಜಲಾಶಯದ ತಳದಲ್ಲಿರುವ ನೀರನ್ನು ಏನಾದರೂ ಮಾಡಿ ಧರ್ಮಾ ನದಿ ಮೂಲಕ ತರುವ ಯತ್ನ ಆರಂಭವಾಗಿದೆ. ಯಾವ ನೀರನ್ನು ಜನತೆ ನಿರೀಕ್ಷಿಸಬಹುದೋ ಎಂಬುದು ಬಿಡಿಸಲಾಗದ ಸಮಸ್ಯೆ. ಮಳೆರಾಯ ಕಣ್ತೆರೆದರೆ ಕೆರೆ, ಕಟ್ಟೆಗೆ ನೀರು ಬಂದು ಪುರಸಭೆ ಸುಲಭವಾಗಿ ಸಮಸ್ಯೆಯಿಂದ ಪಾರಾಗಬಹುದು. ಒಂದೆರಡು ದಿನಗಳಲ್ಲಿ ಎಲ್ಲ ಕಸರತ್ತುಗಳ ಪ್ರತಿಫಲ ಸಿಗಬಹುದಾಗಿದೆ. ನಗರಕ್ಕೆ 4 ದಿನಕ್ಕೊಮ್ಮೆಯೋ, 8 ದಿನಕ್ಕೊಮ್ಮೆ ಅಥವಾ ಬಂದಾಗ ನೀರು ಹಿಡಿದಿಟ್ಟುಕೊಳ್ಳಬೇಕಾಗುತ್ತೊ ಜನತೆ ಕಾದು ನೋಡಬೇಕು.