ಭಯೋತ್ಪಾದನಾ ವಿರೋಧಿ ದಿನಾಚರಣೆ
ಹಾವೇರಿ: ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಭಯೋತ್ಪಾದನಾ ವಿರೋಧಿ ದಿನ ಆಚರಿಸಲಾಯಿತು. ಡಿಸಿ ಪಾಂಡುರಂಗ ನಾಯಕ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮುಖ್ಯ ಯೋಜನಾಧಿಕಾರಿ ಬಸನಗೌಡ ಭಯೋತ್ಪಾದನಾ ವಿರೋಧಿ ದಿನದ ಪ್ರಮಾಣ ವಚನ ಬೋಧಿಸಿದರು. ಅಪರ ಜಿಲ್ಲಾಧಿಕಾರಿ ಜಿ. ಜಗದೀಶ, ಜಿಪಂ ಉಪಕಾರ್ಯದರ್ಶಿ ಮಹಾಂತೇಶ ಬೀಳಗಿ, ವಿವಿಧ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಕೌನ್ಸೆಲಿಂಗ್ಗೆ ಆಹ್ವಾನ
ಹಾವೇರಿ: ಸರ್ಕಾರಿ ಪ್ರೌಢಶಾಲೆಗಳಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಅಡಿಯಲ್ಲಿ ಉನ್ನತೀಕರಿಸಲಾದ ಸಹಿಪ್ರಾ ಶಾಲೆಗಳ ಪ್ರೌಢಶಾಲಾ ಸಹಾಯಕ ಶಿಕ್ಷಕರು ಗ್ರೇಡ್-2 ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ವೃಂದದ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಇಲಾಖಾ ವೈಬ್ಸೈಟ್ನಲ್ಲಿ ಮಾ 31ರಂದು ಪ್ರಕಟಿಸಲಾಗಿದೆ. ಆಯ್ಕೆಯಾದವರಿಗೆ ಮೇ 25ರಂದು ಬೆಳಗಾವಿಯ ಚನ್ನಮ್ಮ ವೃತ್ತದ ಬಳಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಹಾಸ್ಟೆಲ್ನಲ್ಲಿ ಕೌನ್ಸೆಲಿಂಗ್ ಆಯೋಜಿಸಲಾಗಿದ್ದು, ಅರ್ಹರು ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ.
ಹಾಸ್ಟೆಲ್ಗೆ ಅರ್ಜಿ ಆಹ್ವಾನ
ಹಾವೇರಿ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾವೇರಿ ನಗರದಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಅರ್ಹ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಜೂನ್ 25ರೊಳಗೆ ಅರ್ಜಿ ಸಲ್ಲಿಸಬಹುದು. ಪಿಯುಸಿಯಿಂದ ಪದವಿವರೆಗೆ ಓದುತ್ತಿರುವ ಪರಿಶಿಷ್ಟ ಜಾತಿ-ಪಂಗಡದ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ಜಾತಿ ಹಾಗೂ ಆದಾಯ ಪ್ರಮಾಣಪತ್ರ, 2012-13ನೇ ಸಾಲಿನ ಅಂಕಪಟ್ಟಿ ಲಗತ್ತಿಸಬೇಕೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ಅರ್ಜಿ ನಮೂನೆಗಳನ್ನು ಹಾವೇರಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ವಸತಿ ನಿಲಯಗಳ ಮೇಲ್ವಿಚಾರಕರಿಂದ ಪಡೆಯಬಹುದು. ಮಾಹಿತಿಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ಡಿಕ್ಕಿ: ಬೈಕ್ ಸವಾರ ಸಾವು
ಹಾನಗಲ್ಲ: ಟಿಪ್ಪರ್ ಲಾರಿ-ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟ ಘಟನೆ ಹಾನಗಲ್ಲ ತಾಲೂಕಿನ ಕೊಂಡೋಜಿ- ಇನಾಂ ಯಲ್ಲಾಪುರ ರಸ್ತೆಯಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ತಾಲೂಕಿನ ಕೊಂಡೋಜಿ-ಇನಾಂ ಯಲ್ಲಾಪುರ ರಸ್ತೆ ಮಧ್ಯದ ಬಸವೇಶ್ವರ ದೇವಸ್ಥಾನ ಸಮೀಪ ಅಪಘಾತ ಸಂಭವಿಸಿದೆ. ಬೈಕ್ ಸವಾರ ಯತ್ನಳ್ಳಿ ಗ್ರಾಮದ ಸುಭಾಷ್ ಗುರುಶಾಂತಪ್ಪ ಗೋಟಗೋಡಿ (35) ಮೃತಪಟ್ಟಿದ್ದಾರೆ. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.