ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರೈತರಿಗೆ ಸಮರ್ಪಕ ಬೀಜ, ಗೊಬ್ಬರ ಪೂರೈಸಿ

Rashmi Kasaragodu
Updated On : 22 May 2013, 11:52 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮೇ 21
ತಾಲೂಕಾದ್ಯಂತ ಸಹಕಾರಿ ಸಂಘದ ಮೂಲಕ ವಿತರಣೆ ಮಾಡಲು ಕರ್ನಾಟಕ ರಾಜ್ಯ ಮಾರಾಟ ಮಂಡಳಿಗೆ ಹಣ ಪಾವತಿಸಿ ರಸಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಿ ಪ್ರಸಕ್ತ ವರ್ಷ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನಿಗೆ ಪೂರಕವಾದ ಕ್ರಮಕೈಗೊಳ್ಳಿ ಎಂದು ಶಾಸಕ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಲಹೆ ನೀಡಿದರು.
ಮಂಗಳವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸಲಹೆ ನೀಡಿದರು.
ಪೂರ್ವಭಾವಿ ಕ್ರಮವಿರಲಿ: ತಾಲೂಕಿನ ರೈತರಿಗೆ ಬೇಡಿಕೆಯಂತೆ ಕೊಂಚ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಪೂರೈಸಿ ಇದಕ್ಕೆ ಪೂರ್ವಭಾವಿಯಾಗಿ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ಬಿತ್ತನೆಗೆ ಸಿದ್ಧತೆ: ತಾಲೂಕಿನಾದ್ಯಂತ ಸಾಗುವಳಿ ಮಾಡುವ ಪ್ರದೇಶ, ಬಿತ್ತನೆ ಮಾಡುತ್ತಿರುವ ಬೀಜಗಳ ಅಗತ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಹಾಯಕ ನಿರ್ದೇಶಕ ಶಿವಕುಮಾರ ಮಲ್ಲಾಡದ, ಬಿತ್ತನೆ ಮಾಡಲಾಗುತ್ತಿರುವ 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 12 ಸಾವಿರ ಮೆಕ್ಕೆ ಜೋಳ, 6 ಸಾವಿರ ಹೆಕ್ಟೇರ್ ಭತ್ತ, 3 ಸಾವಿರ ಹೆಕ್ಟೇರ್ ಸೋಯಾಬಿನ್ ಸೇರಿದಂತೆ ಶೇಂಗಾ, ತೊಗರಿ, ಹತ್ತಿ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ.
ದಾಸ್ತಾನು: 115 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಇಲ್ಲಿಯತನಕ 76 ಮಿ.ಮೀ. ಅಷ್ಟೇ ಆಗಿದೆ. ಕಳೆದ ವರ್ಷ ಈ ದಿನದಲ್ಲಿ 12 ಮಿ.ಮೀ. ಮಳೆಯಾಗಿತ್ತು ಎಂದು ಎಂದು ವಿವರಣೆ ನೀಡಿದ ಶಿವುಕುಮಾರ, ರೈತರ ಬಿತ್ತನೆಗೆ ಈಗಾಗಲೇ 6 ಹೆಕ್ಟೇರ್ ಮೆಕ್ಕೆಜೋಳ, 250 ಕ್ವಿಂಟಲ್ ಭತ್ತ, 50 ಕ್ವಿಂಟಲ್ ಜೋಳ, ಸಾವಿರ ಕ್ವಿಂಟಲ್ ಸೋಯಾಬಿನ್ ದಾಸ್ತಾನು ಮಾಡಿದ್ದಾಗಿ ತಿಳಿಸಿದರು.
ಗೊಬ್ಬರ: ಪ್ರಸಕ್ತ ವರ್ಷ 3.5 ಸಾವಿರ ಟನ್ ಡಿಎಪಿ ರಸಗೊಬ್ಬರ ಬೇಕಾಗಿದೆ. ಈಗಾಗಲೇ 1200 ಟನ್ ಡಿಎಪಿ, 1200 ಯೂರಿಯಾ, 50ಟನ್ ಎಂಓಪಿ, 12ಟನ್ ಕಾಂಪ್ಲೆಕ್ಸ್ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜಗಳ ವಿತರಣೆಗೆ ಬಂಕಾಪುರ, ಕೋಣನಕೇರಿ, ಧುಂಡಿಶಿ, ಶಿಗ್ಗಾಂವಿ, ಹುಲಗೂರು, ತಡಸಗಳಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ವ್ಯವಸ್ಥೆ ಮಾಡಿದ್ದಾಗಿ ಸಭೆಗೆ ತಿಳಿಸಿದರು.
ಸಮರ್ಪಕ ನೀರು ಕೊಡಿ: ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಕುಡಿಯವ ನೀರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಜಿಪಂ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಬೊಮ್ಮಾಯಿ, ನೀರಿನ ಸಮಸ್ಯೆ ಹೊಂದಿರುವ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು. ಕುಡಿಯಲು ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಿ ಎಂದರು.
ದುರಸ್ತಿ ಕೈಗೊಳ್ಳಿ: ಕೆಟ್ಟು ಹೋಗಿರುವ ಸಣ್ಣಪುಟ್ಟ ಖರ್ಚಿನಲ್ಲಿ ಪೈಪ್‌ಲೈನ್ ದುರಸ್ತಿ ಮಾಡಿ ಜನರಿಗೆ ಸಮರ್ಪಕವಾಗಿ ಕುಡಿಯವ ನೀರು ಪೂರೈಸಲು ಕ್ರಮಕೈಗೊಳ್ಳಿ. ದೊಡ್ಡ ಖರ್ಚು ಎದುರಾದಲ್ಲಿ ಅನುದಾನ ಕಲ್ಪಿಸಲಾಗುತ್ತದೆ. ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಬಂಕಾಪುರ, ಶಿಗ್ಗಾಂವಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಒಟ್ಟಾರೆ ಕಳೆದ ವರ್ಷ ನಡೆದ ಅಭಿವೃದ್ಧಿಗಿಂತ ಹೆಚ್ಚು ಕೆಲಸ ಮಾಡಬೇಕು. ಅಧಿಕಾರಿಗಳ ಪ್ರಾಮಾಣಿಕ ಕಾರ್ಯ, ಎಲ್ಲರೂ ಒಗ್ಗಟ್ಟಿನಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತೆ ಶಾಸಕ ಬೊಮ್ಮಾಯಿ ಕರೆ ನೀಡಿದರು.
ವಿಪ ಸದಸ್ಯ ಸೋಮಣ್ಣ ಬೇವಿನಮರದ, ಜಿಪಂ. ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜವ್ವ ಆಡೀನ, ಸದಸ್ಯರಾದ ಸಿ.ಎಸ್. ಪಾಟೀಲ, ಬಿ.ಟಿ. ಇನಾಮತಿ, ಶಶಿಧರ ಹೊನ್ನಣ್ಣನವರ, ತಾಪಂ ಅಧ್ಯಕ್ಷೆ ಉಷಾ ಬಿಳಿಕುದರಿ, ಸದಸ್ಯೆ ಶಾಂತಮ್ಮ ಬೊಮ್ಮನಹಳ್ಳಿ, ತಹಸೀಲ್ದಾರ್ ಕೆ.ಕೆ. ಕುಲಕರ್ಣಿ, ಡಿವೈಎಸ್‌ಪಿ ಎ.ಕೆ. ಬೆಳ್ಳುಬ್ಬಿ, ತಾಪಂ ಅಧಿಕಾರಿ ಬಿರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement