ಈಶ್ವರಪ್ಪರಿಂದ ಹತಾಶೆಯ ಹೇಳಿಕೆ: ಶೆಟ್ಟರ್ ತಿರುಗೇಟು
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮೇ 22
ಕೆಜೆಪಿ ಹುಟ್ಟಿದ ಆರು ತಿಂಗಳಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾನೂರು ಸ್ಥಾನ ಪಡೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಶೇ.10ರಷ್ಟು ಮತ ಪಡೆದಿದೆ. ಆದರೆ, ಬಿಜೆಪಿ ಧುರೀಣ ಕೆ.ಎಸ್. ಈಶ್ವರಪ್ಪ ಕೆಜೆಪಿ ಹಾವೇರಿಯಲ್ಲೆ ಹುಟ್ಟಿ, ಹಾವೇರಿಯಲ್ಲೆ ಅವಸಾನಗೊಂಡಿದೆ ಎಂದು ಟೀಕಿಸುತ್ತಿರುವುದು ಅವರ ಹತಾಶೆ ಭಾವನೆ ವ್ಯಕ್ತಪಡಿಸುತ್ತದೆ ಎಂದು ಕೆಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಲ್ಯಾಣಕುಮಾರ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಕೆಜೆಪಿ ಶಿವಮೊಗ್ಗದಲ್ಲಿ 2ನೇ ಸ್ಥಾನದಲ್ಲಿದೆ. ಕೇವಲ ಆರು ತಿಂಗಳ ಹಿಂದೆ ಹುಟ್ಟಿದ ಪಕ್ಷಕ್ಕೆ ಲೇವಡಿ ಮಾಡಬೇಡಿ. ಆದರೆ, 40 ವರ್ಷಗಳ ಇತಿಹಾಸ ಹೊಂದಿರುವ ಬಿಜೆಪಿಯ ತವರೂರು ಜಿಲ್ಲೆ ಶಿವಮೊಗ್ಗದಲ್ಲಿ ಮೂರನೇ ಸ್ಥಾನಕ್ಕಿಳಿದಿದೆ ಎಂದು ಟೀಕಿಸಿದರು.
ಈಶ್ವರಪ್ಪನವರು ಸೋಲಿನ ಹತಾಶೆ ಭಾವನೆಯಿಂದ ಬೇರೆ ಪಕ್ಷಗಳ ಬಗ್ಗೆ ಟೀಕಿಸುವುದರ ಬದಲು ತಮ್ಮ ಪಕ್ಷ ಸರಿಪಡಿಸಿಕೊಳ್ಳಲಿ ಎಂದು ಸಲಹೆ ನೀಡಿದ ಶೆಟ್ಟರ್, ಕಳಂಕಿತರು ಪಕ್ಷದಿಂದ ಹೊರಹೋಗಿದ್ದಾರೆ.
ಯಡಿಯೂರಪ್ಪನವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಹೇಳಿಕೆಗೆ ಉತ್ತರಿಸಿರುವ ಶೆಟ್ಟರ್, ಯಡಿಯೂರಪ್ಪ ಬಿಜೆಪಿಗೆ ಸೇರಲು ಅರ್ಜಿ ಹಾಕಿಲ್ಲ ಎಂದರು.
ಈಶ್ವರಪ್ಪ ಅವರ ಕುರಿತು ತನಿಖೆಗಳು ನಡೆದಿವೆ. ಇಷ್ಟರಲ್ಲೆ ಬಂಧಿಸುವ ಸಾಧ್ಯತೆಗಳಿವೆ. ತಮ್ಮ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಲಿ. ಜಿಲ್ಲೆಯಲ್ಲಿ ಕೆಜೆಪಿ ಮಾಜಿ ಸಚಿವ ಸಿ.ಎಂ. ಉದಾಸಿ ನೇತೃತ್ವದಲ್ಲಿ ಸದೃಢ ಹಾಗೂ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಜೆಪಿ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಎಸ್.ಕೆ. ಪೀರಜಾದೆ, ಹಾನಗಲ್ಲ ನಗರ ಘಟಕದ ಅಧಕ್ಷ ರಾಜು ಗೌಳಿ, ಕಾರ್ಯದರ್ಶಿ ಭಾಸ್ಕರ ಹುಲಮನಿ, ಮಹೇಶ ಪವಾಡಿ, ಪುರಸಭಾ ಸದಸ್ಯರಾದ ಹಸೀನಾಬಿ ನಾಯ್ಕನವರ, ಶಕುಂತಲಾ ಪವಾಡಿ, ರವಿರಾಜ ಕಲಾಲ, ಯಲ್ಲಮ್ಮ ಕಂಚಿಗೊಲ್ಲರ, ಜಾಫರಸಾಬ ಕೇಣಿ, ಮಾಲತೇಶ ಚಿಕ್ಕಣ್ಣನವರ, ನೇತ್ರಾವತಿ ಬಮ್ಮನಹಳ್ಳಿ, ರಾಜಮ್ಮ ಪಾಂಡುರಂಗಿ, ಶೋಭಾ ಗೌಳಿ, ಫಾರುಕ್ಅಹ್ಮದ ಅಕ್ಕಿವಳ್ಳಿ ಮುಂತಾದವರು ಇದ್ದರು.