ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಚೈತ್ರಾಳ ಉನ್ನತ ಸಾಧನೆ

Rashmi Kasaragodu
Updated On : 23 May 2013, 12:06 pm

 ನಿಂಗರಾಜ ಬೇವಿನಕಟ್ಟಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಮೇ 22
ಸಾಧನೆಗೆ ಬಡತನ ಎಂದೂ ಅಡ್ಡ ಬರುವುದಿಲ್ಲ ಎಂಬ ಮಾತು ಅಕ್ಷರಶಃ ನಿಜ. ರೋಣ ತಾಲೂಕಿನ ನರೇಗಲ್ಲ ಸರ್ಕಾರಿ ಪಪೂ ಕಾಲೇಜಿನಲ್ಲಿ 2012-13ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಸ್ಥಳೀಯ ವಿದ್ಯಾರ್ಥಿನಿ ಚೈತ್ರಾ ಗಾಣಿಗೇರಗೆ ದೊರೆತ ಫಲಿತಾಂಶವೇ ಇದಕ್ಕೆ ಸಾಕ್ಷಿ.
ಸರ್ಕಾರಿ ಕಾಲೇಜಿನಲ್ಲಿ ಕಲಿತರೂ ಯಾರಿಗೂ ಕಡಿಮೆ ಇಲ್ಲವೆಂಬಂತೆ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 533 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವಲ್ಲದೇ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಾಳೆ. ಬಡತನದಲ್ಲಿಯೇ ಉತ್ತಮ ಫಲಿತಾಂಶ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಇಂದು ಶಿಕ್ಷಣ ಕಲಿಯುವುದು ಸುಲಭದ ಕೆಲಸವಲ್ಲ. ದುಬಾರಿ ಶಿಕ್ಷಣ ವ್ಯವಸ್ಥೆಯ ಇಂದಿನ ದಿನಗಳಲ್ಲಿ ಕಾಲೇಜಿನ ಶುಲ್ಕ ಪಾವತಿಸಲಾಗದಂತಹ ಸ್ಥಿತಿಯಲ್ಲಿ ಸ್ಥಳೀಯ ಸರ್ಕಾರಿ ಪಪೂ ಮಹಾವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದ ಚೈತ್ರಾಗೆ ಶೈಕ್ಷಣಿಕ ಖರ್ಚು ವೆಚ್ಚ ಭರಿಸಲಿಕ್ಕೂ ಹಣದ ಸಮಸ್ಯೆಯಿತ್ತು. ಇವಳ ತಾಯಿ ಅಲ್ಪಸ್ವಲ್ಪ ಬಟ್ಟೆ ಹೊಲಿದು ಮನೆತನದ ಖರ್ಚು, ವೆಚ್ಚ ನಿಭಾಯಿಸುತ್ತಿದ್ದಾರೆ.
ಬಡತನದಲ್ಲಿಯೇ ಜೀವನ ಸಾಗಿಸುತ್ತಿರುವ ಈ ಕುಟುಂಬದಲ್ಲಿ ಚೈತ್ರಾ ಓದಲು ಪುಸ್ತಕಗಳನ್ನೂ ಶಿಕ್ಷಕರಲ್ಲಿ ಕೇಳಿ ಪಡೆಯುತ್ತಿದ್ದಳು. ಹಲವಾರು ಸಮಸ್ಯೆಗಳ ಮಧ್ಯೆಯೂ ಕಠಿಣ ಪರಿಶ್ರಮದಿಂದ ಅಭ್ಯಾಸಗೈಯುವ ಮೂಲಕ ಉತ್ತಮ ಫಲಿತಾಂಶ ಗಳಿಸಿ ತನ್ನ ಪ್ರತಿಭೆ ಮೆರೆದಿದ್ದಾಳೆ. ಚೈತ್ರಾ ತನ್ನ ಸಾಧನೆಗೆ ಶಿಕ್ಷಕರ ಸಹಕಾರವನ್ನು ನೆನೆಯುತ್ತಾಳೆ. ಶಿಕ್ಷಕರು ಓದಿಗೆ ಅವಶ್ಯಕ ಪುಸ್ತಕಗಳನ್ನು, ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಪಾತ್ರ ಪ್ರಮುಖ ಎನ್ನುತ್ತಾಳೆ.
ಕ್ರಿಯಾಶೀಲ ವ್ಯಕ್ತಿತ್ವ: ಕೇವಲ ಶಿಕ್ಷಣದಲ್ಲಿಯೇ ಮಾತ್ರವಲ್ಲ, ಏಕಪಾತ್ರಾಭಿನಯದಲ್ಲಿ ಪ್ರಥಮ ಪಿಯುಸಿ ಓದುತ್ತಿರುವಾಗಲೇ 2012-13ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ಏಕಪಾತ್ರಾಭಿನಯದಲ್ಲಿ ವರದಕ್ಷಿಣೆ ಪಿಡುಗು ವಿಷಯ ಕುರಿತು ಮಂಡಿಸಿದ ಪ್ರಭಂದಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.


6 ವರ್ಷಗಳ ಹಿಂದೆಯೇ ನನ್ನ ತಂದೆ ನಿಧನರಾಗಿದ್ದಾರೆ. ಕಳೆದ ವರ್ಷ ಅಕ್ಕನಿಗೆ ಮದುವೆಯಾಗಿದ್ದು, ಈಗ ಮನೆಯಲ್ಲಿ ನಾನು ಮತ್ತು ತಾಯಿ ಶಾಂತಾ. ನನ್ನ ಶಿಕ್ಷಣದ ಖರ್ಚು ವೆಚ್ಚವನ್ನು ತಾಯಿಯೇ ನಿಭಾಯಿಸುತ್ತಿದ್ದಾರೆ. ಇತ್ತೀಚಿಗೆ ಶಾಲಾ ವೆಚ್ಚ ಹೆಚ್ಚಾಗಿದ್ದು, ಮುಂದಿನ ಶಿಕ್ಷಣ ದುಸ್ತರವಾಗಿದೆ. ಹತ್ತಾರು ಸಮಸ್ಯೆಗಳಿದ್ದರೂ ನಿರಂತರ ಅಧ್ಯಯನದ ಫಲವೇ ಈ ಫಲಿತಾಂಶಕ್ಕೆ ಕಾರಣವಾಗಿದೆ. ಬಿಕಾಂ ಶಿಕ್ಷಣವನ್ನು ಸರ್ಕಾರಿ ಪಪೂ ಕಾಲೇಜಿನಲ್ಲಿಯೇ ಮುಂದುವರೆಸಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣಳಾಗಿ ಉನ್ನತ ಹುದ್ದೆ ಅಲಂಕರಿಸಬೇಕೆಂಬ ಗುರಿ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ನನ್ನಂತಹ ನೂರಾರು ಬಡ ವಿದ್ಯಾರ್ಥಿಗಳಿಗೆ ಆಸರೆಯಾಗುವ ಮಹಾದಾಸೆ ಹೊತ್ತಿದ್ದೇನೆ.
ಣ ಚೈತ್ರಾ, ಸಾಧನೆಗೈದ ವಿದ್ಯಾರ್ಥಿನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement