ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಸ್-ಲಾರಿ ಡಿಕ್ಕಿ: ಮೂವರ ದುರ್ಮರಣ

Rashmi Kasaragodu
Updated On : 23 May 2013, 12:05 pm

ಬ್ಯಾಡಗಿ: ವೇಗವಾಗಿ ಚಲಿಸುತ್ತಿದ್ದ ಖಾಸಗಿ ಸಾರಿಗೆ ಸಂಸ್ಥೆಗೆ ಸೇರಿದ ವೋಲ್ವೋ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿಗಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟು, 18 ಜನರು ಗಾಯಗೊಂಡ ಧಾರುಣ ಘಟನೆ ಬುಧವಾರ ಬೆಳಗಿನ ಜಾವ ತಾಲೂಕಿನ ಮೋಟೆಬೆನ್ನೂರು ಕೋಟೆ ಗುಡ್ಡದ ಬಳಿ ರಾಷ್ಟ್ರೀಯ ಹೆದ್ದಾರಿ-4ರ ಮೇಲೆ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಬೆಳಗಾವಿಯ ಸಚಿನ್ ಸುರೇಶ್ ಪಾವಸ್ಕರ್, ಎಂ.ಕೆ. ಹುಬ್ಬಳ್ಳಿಯ ಮುಬಾರಕ್ ಇಸಾಕ್ ಸಾಬ್ ತಹಸೀಲ್ದಾರ್ (23) ಹಾಗೂ ಹಾಸನ ಬೀರನಹಳ್ಳಿಕೆರೆಯ ಮೀರ್ಕಿರ್ದಾರ್ ಹುಸೇನ್ (40) ಎಂದು ಗುರುತಿಸಲಾಗಿದೆ. ಗಾಯಗೊಂಡವರೆಲ್ಲರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಬೆಳ್ಳುಬ್ಬಿ, ಸಿಪಿಐ ಚಿಕ್ಕರೆಡ್ಡಿ, ಪಿಎಸ್ಐ ಮಹಾಂತೇಶ್ ಸಿಬ್ಬಂದಿ ಸಹಕಾರದೊಂದಿಗೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದರಲ್ಲದೇ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬ್ಯಾಡಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟರು.
ಸಂಚಾರ ವ್ಯತ್ಯಯ: ರಾಷ್ಟ್ರೀಯ ಹೆದ್ದಾರಿ ಮದ್ಯದಲ್ಲಿಯೇ ಅಪಘಾತ ಸಂಭವಿಸಿದ್ದರಿಂದ ಸುಮಾರು ಒಂದು ತಾಸಿಗೂ ಅಧಿಕ ಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಪೊಲೀಸ್ ಇಲಾಖೆಯ ಕ್ರೇನ್ ಮೂಲಕ ಅಪಘಾತಕ್ಕೀಡಾದ ಬಸ್ನ್ನು ಪಕ್ಕಕ್ಕೆ ಸರಿಸಲಾಯಿತು. ಅಲ್ಲಿಯವರೆಗೂ ಹೆದ್ದಾರಿ ಮೇಲಿನ ವಾಹನಗಳನ್ನು ಮಾರ್ಗ ಬದಲಿಸಿ ಸಂಚರಿಸುವಂತೆ ನೋಡಿಕೊಳ್ಳಲಾಯಿತು.
ಘಟನೆ ಹಿನ್ನೆಲೆ: ಕೊಂಡಸ್ಕರ್ ಸಂಸ್ಥೆಗೆ ಸೇರಿದ ಬಸ್ (ಎಮ್ಎಚ್-09, ಎಲ್-6525) ಮಂಗಳವಾರ ರಾತ್ರಿ 9 ಗಂಟೆಗೆ ಮಹಾರಾಷ್ಟ್ರದ ಪುಣೆ ಬಿಟ್ಟು ಬೆಳಗ್ಗೆ 11ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದರೆ, ಬೆಳಗಿನ ಜಾವ 5 ಗಂಟೆ ಸುಮಾರಿಗೆ ದುರ್ಘಟನೆ ಜರುಗಿದೆ. ಅಪಘಾತಕ್ಕೀಡಾದ ಬಸ್ಸಿನ ಮುಂಭಾಗ ಸಂಪೂರ್ಣ ಕಿತ್ತು ಹೋಗಿದ್ದು ಕೂದಲೆಳೆ ಅಂತರದಲ್ಲಿ ಚಾಲಕ ಪಿಂಟೋ ಬದುಕುಳಿದಿದ್ದಾನೆ.
ಗ್ಲಾಸ್ ಒಡೆದು ಹಾರಿದರು: ಸುಮಾರು 42 ಜನರು ಪ್ರಯಾಣಿಸುತ್ತಿದ್ದ ಬಸ್ಸಿನ ಮುಂಭಾಗದಲ್ಲಿ ಇನ್ನುಳಿದ ಸಹ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಲೆ ಹಾಗೂ ಸೋಂಟದ ಭಾಗದಲ್ಲಿ ಹೆಚ್ಚು ಜನರಿಗೆ ಪೆಟ್ಟು ಬಿದ್ದಿದೆ. ವೋಲ್ವೋ ಬಸ್ಗೆ ಹೈಡ್ರೋಲಿಕ್ ತಂತ್ರಜ್ಞಾನ ಅಳವಡಿಸಿದ ಹಿನ್ನೆಲೆಯಲ್ಲಿ ಮುಚ್ಚಿದ್ದ ಬಾಗಿಲುಗಳನ್ನು ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಮೇಲ್ಭಾಗದ ಸ್ಲೀಪರ್ ಕೋಚ್ನಲ್ಲಿ ಮಲಗಿದ್ದವರು ಹೊರ ಬರಲಾಗದ ಸ್ಥಿತಿವುಂಟಾದಾಗ ಗ್ಲಾಸ್ಗಳನ್ನು ಒಡೆದು ಕೆಳಗೆ ಹಾರಿದರು.
ಮಲಗಿದ್ದವರು ಏಳಲಿಲ್ಲ: ಘಟನೆ ನಡೆದಾಗ ಬೆಳಗಿನ 5 ಗಂಟೆ ಹೀಗಾಗಿ ಬಹುತೇಕ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಆದರೆ, ಮೃತಪಟ್ಟ ಮೂವರು ಬಸ್ ಮುಂಭಾಗದಲ್ಲಿ ಸೀಟುಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದರಿಂದ ಸೊಂಟದ ಭಾಗಕ್ಕೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಮಲಗಿದ್ದವರು ಮೇಲೇಳಲಿಲ್ಲ. ಘಟನೆ ಸಂಭವಿಸಿದಾಗ ಮೈಮೇಲೆ ಹೊದ್ದುಕೊಂಡಿದ್ದು ಶಾಲೂ ಕೂಡ ಕದಲಿರಲಿಲ್ಲ. ಆದರೆ, ಕೆಳಭಾಗದಲ್ಲಿ ಮಾತ್ರ ತೀವ್ರ ರಕ್ತಸ್ರಾವದ ದೃಶ್ಯಗಳು ಕಂಡು ಬಂದವು.
ಜೀವ ಉಳಿಸಿಕೊಂಡ 2ನೇ ಚಾಲಕ: ದೂರ ಪ್ರಯಾಣಿಸುವ ಬಸ್ಗಳಲ್ಲಿರುವ 2ನೇ ಚಾಲಕರು ಸಾಮಾನ್ಯವಾಗಿ ಡ್ರೈವರ್ನ ಹಿಂಬದಿ ಸೀಟ್ನಲ್ಲಿಯೇ ಮಲಗಿರುತ್ತಾರೆ. ಆದರೆ ದುರ್ಘಟನೆಗೀಡಾದ ಬಸ್ನ 2ನೇ ಚಾಲಕ ಲಗೇಜ್ಗಳನ್ನು ಶೇಖರಿಸಿಡುವ ಕಂಪಾರ್ಟ್ಮೆಂಟ್ನಲ್ಲಿ ಮಲಗಿದ್ದರಿಂದ ಅಪಘಾತದಲ್ಲಿ ಯಾವುದೇ ತರಹದ ಪೆಟ್ಟು ಬೀಳಲಿಲ್ಲ. ಅಷ್ಟೇ ಏಕೆ ಸಾವಿನಿಂದ ಆತ ತಪ್ಪಿಸಿಕೊಂಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement