ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬೀಜ, ಗೊಬ್ಬರ ಪೂರೈಸಲು ಕೃಷಿ ಇಲಾಖೆ ನಿರಾಸಕ್ತಿ

Rashmi Kasaragodu
Updated On : 23 May 2013, 12:04 pm

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮೇ 22
ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಬಿದ್ದಿದ್ದು, ರೈತರು ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಬಿತ್ತನೆ ಬೀಜ, ಗೊಬ್ಬರಗಳನ್ನೂ ಸಂಗ್ರಹಿಸಿಕೊಳ್ಳುವ ಆತುರದಲ್ಲಿದ್ದಾರೆ. ಆದರೆ, ಕೃಷಿ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಅನಿತಾ ಶಿವೂರ್ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ತಾಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವ ಆಡೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಇದ್ದ ರೈತ ಸಂಪರ್ಕ ಕೇಂದ್ರವನ್ನು ಈ ವರ್ಷ ಸಿಬ್ಬಂದಿ ಕೊರತೆ ನೆಪವೊಡ್ಡಿ ಕೃಷಿ ಇಲಾಖೆ ರದ್ದುಪಡಿಸಿದೆ.
ಆಡೂರು ಗ್ರಾಮೀಣ ಭಾಗದ ರೈತರು ಆಡೂರಿನಿಂದ 12 ಕಿ.ಮೀ. ದೂರದಲ್ಲಿರುವ ಅಕ್ಕಿಆಲೂರು ರೈತ ಸಂಪರ್ಕ ಕೇಂದ್ರದಿಂದ ಬೀಜ-ಗೊಬ್ಬರ ಕೊಂಡೊಯ್ಯಬೇಕಿದೆ. 10 ಗ್ರಾಮಗಳ ರೈತರಿಗೆ ಇದರಿಂದ ತೊಂದರೆ ಆಗುತ್ತಿದೆ.
ಆಡೂರು, ಶೀಗಿಹಳ್ಳಿ, ಶಿಂಗಾಪುರ, ಕೋಡಿಯಲ್ಲಾಪುರ, ಶಂಕ್ರಿಕೊಪ್ಪ ಗ್ರಾಮಗಳ ರೈತರು ತಮ್ಮ ಎಲ್ಲ ಕೃಷಿ ಕಾರ್ಯ ಬಿಟ್ಟು ಬೀಜ-ಗೊಬ್ಬರಗಳ ಖರೀದಿಗಾಗಿ ಆಲೂರು ರೈತ ಸಂಪರ್ಕ ಕೇಂದ್ರದ ಎದುರು ಸರತಿಯಲ್ಲಿ ನಿಲ್ಲಬೇಕಾಗಿದೆ ಎಂದು ದೂರಿದರು.
ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ವಿವರಿಸಿದರೂ ಅಧಿಕಾರಿಗಳು ಸಿಬ್ಬಂದಿ ಕೊರತೆ ಕಾರಣವೊಡ್ಡಿ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳ ದೂರಿಗೂ ಕಿವಿಗೊಡುತ್ತಿಲ್ಲ. ಇದು ರೈತ ವಿರೋಧಿ ಧೋರಣೆ. ನಾಲ್ಕೈದು ವರ್ಷಗಳಿಂದ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕೈಗಾರಿಕೆ ಇಲಾಖೆಗಳ ಸಿಬ್ಬಂದಿಯನ್ನು ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಕೆಲಸಗಳಿಗಾಗಿ ಬಳಸಿಕೊಳ್ಳಲಾಗುತ್ತಿತ್ತು. ಈ ಬಾರಿಯೂ ತಾಲೂಕು ಆಡಳಿತ ಇಂಥ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ರೈತ ಸಮುದಾಯ ಬೀದಿಗಿಳಿದು ಪ್ರತಿಭಟಿಸಲಿದೆ. ಸಮಯಕ್ಕೆ ಸರಿಯಾಗಿ ಬೀಜ-ಗೊಬ್ಬರ ವಿತರಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದರು.
ರೈತರು ಬಿತ್ತನೆ ಪೂರ್ವ ಕೃಷಿ ಕೆಲಸಗಳಲ್ಲಿ ತೊಡಗುವುದಕ್ಕೂ ಕಾರ್ಮಿಕರ ಕೊರತೆ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬೀಜ-ಗೊಬ್ಬರ ಖರೀದಿಗೆ ಅಲೆದಾಡುವುದು ಕಷ್ಟ. ಇದು ಅನಗತ್ಯ ವೆಚ್ಚಕ್ಕೂ ಕಾರಣವಾಗುತ್ತದೆ ಎಂದು ಅನಿತಾ ತಿಳಿಸಿದರು.
ತಾಲೂಕು ಆಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಅನಿತಾ ಶಿವೂರ ಎಚ್ಚರಿಸಿದರು.


ಆಡೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಇದ್ದ ರೈತ ಸಂಪರ್ಕ ಕೇಂದ್ರವನ್ನು ಈ ವರ್ಷ ಸಿಬ್ಬಂದಿ ಕೊರತೆ ನೆಪವೊಡ್ಡಿ ಕೃಷಿ ಇಲಾಖೆ ರದ್ದುಪಡಿಸಿದೆ. ಹೀಗಾಗಿ, ಈ ಭಾಗದ ರೈತರು ಆಡೂರಿನಿಂದ 12 ಕಿ.ಮೀ. ದೂರದಲ್ಲಿರುವ ಅಕ್ಕಿಆಲೂರು ರೈತ ಸಂಪರ್ಕ ಕೇಂದ್ರದಿಂದ ಬೀಜ-ಗೊಬ್ಬರ ಕೊಂಡೊಯ್ಯಬೇಕಿದೆ. 10 ಗ್ರಾಮಗಳ ರೈತರಿಗೆ ಇದರಿಂದ ತೊಂದರೆ ಆಗುತ್ತಿದೆ.
ಅನಿತಾ ಶಿವೂರ್,
ಹಾನಗಲ್ ತಾಪಂ ಉಪಾಧ್ಯಕ್ಷೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement