ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಿಯಾಯ್ತಿ ದರದಲ್ಲಿ ಬೀಜ ವಿತರಿಸಿ

Rashmi Kasaragodu
Updated On : 23 May 2013, 12:05 pm

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ 22
ವಿವಿಧ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ಪೂರೈಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಲತಾಯಿ ಧೋರಣೆ: ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಮಲತಾಯಿ ಧೋರಣೆ ಮಾಡುತ್ತಿದೆ. ಕೇವಲ ಹಿಂದುಳಿದವರ ಸಾಲಮನ್ನಾ ಮಾಡುವ ಮೂಲಕ ಇಡೀ ರೈತ ಕುಲವನ್ನು ಕಡೆಗೆಣಿಸಿದೆ ಎಂದು ದೂರಿದರು.
ರೈತ ಕುಲಕ್ಕೆ ಅವಮಾನ: ಕಳೆದೆರಡು ವರ್ಷದಿಂದ ಬರಗಾಲದಿಂದ ಬೆಳೆ ಕಳೆದುಕೊಂಡು ಮಳೆಯೊಡನೆ ಜೂಜಾಟವಾಡುತ್ತ ಬೆಳೆ ನಷ್ಟ ಅನುಭವಿಸಿದ ರೈತರು ಇಡೀ ನಾಡಿಗೆ ಅನ್ನ ಹಾಕುವವರಾಗಿದ್ದರೂ ಸಹ ಅವರು ಮಾಡಿದ ಕೃಷಿ ಸಾಲವನ್ನು ಮನ್ನಾ ಮಾಡದಿರುವುದು ರೈತ ಕುಲಕ್ಕೆ ಮಾಡಿದ ಅವಮಾನವಾಗಿದೆ ಎಂದು ದೂರಿದರು.
ಉಗ್ರ ಪ್ರತಿಭಟನೆ ಎಚ್ಚರಿಕೆ: ಇಲ್ಲಿಯವರೆಗೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರೈತರನ್ನು ಕೆಡೆಗಣಿಸಿದಂತಾಗಿದೆ. ಅಲ್ಲದೆ ರೈತರನ್ನು ಅವಮಾನಿಸುವ ಮೂಲಕ ಇಬ್ಬಗೆಯ ನೀತಿ ಅನುಸರಿಸುತ್ತಿವೆ. ರೈತರ ವಿರೋಧಿ ಸರ್ಕಾರ ಇದಾಗಿದೆ ಎಂಬುದನ್ನು ಮೊದಲೆ ತೋರಿಸದಂತಾಗಿದೆ ಎಂದು ಕಿಡಿಕಾರಿದರು. ಏನೇ ಇರಲಿ ಸರ್ಕಾರ ತಕ್ಷಣ ಕಣ್ತೆರೆದು ರೈತರ ಕೃಷಿ ಸಾಲವನ್ನು ಸಂಪೂರ್ಣ ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ರೈತರ ಬೀದಿಗಿಳಿದು  ಪ್ರತಿಭಟನೆ ನೆಡಸಲಾಗುವುದು ಎಚ್ಚರಿಸಿದರು.
ಜಿಲ್ಲಾಡಳಿತ ವಿಫಲ: ರೈತರಿಗೆ ಬಿತ್ತನೆ ಮಾಡುವ ದಿನ ಬಂದಿದ್ದರೂ ಕೃಷಿ ಇಲಾಖೆ ರೈತರಿಗೆ ಬಿತ್ತನೆ ಬೀಜದ ಯಾವುದೇ ಸೂಕ್ತ ವಿವರಣೆ ನೀಡಿಲ್ಲ. ರೈತರು ಬಿತ್ತನೆ ಮಾಡುವ ಕನಕ ಬಿಟಿ ಹತ್ತಿ ತಳಿಯ ಬೀಜ ಕಾಳಸಂತೆಯಲ್ಲಿ ರು. 1200ದಿಂದ ರು. 1,300 ಗಳವರೆಗೆ ಬಹೀರಂಗವಾಗಿ ಮಾರಾಟವಾಗುತ್ತಿದ್ದರೂ ಸಹ ಕೃಷಿ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಮಾರಾಟಗಾರರೊಂದಿಗೆ ಶಾಮಿಲಾಗಿದ್ದಾರೆ ಎನ್ನುವುದನ್ನು ಸಾಬೀತುಪಡಿಸುತ್ತಿದೆ.
ಕಾಳ ಸಂತೆ ಮಾರಾಟಕ್ಕೆ ಕ್ರಮ ಕೈಗೊಳ್ಳದೆ ಜಿಲ್ಲಾಡಳಿತ ಜಾಣ ಮೌನವಹಿಸಿದೆ. ಅಲ್ಲದೆ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವವ ವ್ಯಾಪಾರಸ್ಥರ ಮೇಲೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ತಕ್ಷಣ ಎಚ್ಚೆತ್ತು ಹತ್ತಿ ಬೀಜದ ಮಾರಾಟಗಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಕೋರಿದರು.
ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಅವರ ಲೈಸನ್ಸ್ ರದ್ದುಗೊಳಿಸಬೇಕು, ಬರಗಾಲದಿಂದ ತತ್ತರಿಸಿದ ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಸಣ್ಣ ಹಾಗೂ ದೊಡ್ಡ ರೈತರು ಎಂದು ಬೇರ್ಪಡಿಸದೆ ಎಲ್ಲ ರೈತರಿಗೂ ಶೇ. 75ರ ರಿಯಾಯತಿ ದರದಲ್ಲಿ ವಿತರಿಸಬೇಕು ಎಂದು ಆಗ್ರಹಿಸಿದರು.
ಪಹಣಿ ವಿತರಣೆ: ತಾಲೂಕು ಕೇಂದ್ರವಾದ ಹಿರೇಕೆರೂರು ಹಾಗೂ ಹೋಬಳಿ ಕೇಂದ್ರಗಳಲ್ಲಿ ರೈತರ ಪಹಣಿ ವಿತರಣೆ ಮಾಡುತ್ತಿದ್ದು, ಹಿರೇಕೆರೂರಲ್ಲಿ ಪಹಣಿ ಪಡೆಯಲು ರೈತರು ಬಿರು ಬಿಸಿಲಿನಲ್ಲಿ ನಿರಂತರ ನಿಂತು ಪಹಣಿ ಪಡೆಯಬೇಕಾಗಿದೆ. ತಾಲೂಕು ಆಡಳಿತ ತಹಸೀಲ್ದಾರ್ ಕಚೇರಿ ಪಕ್ಕದಲ್ಲಿರುವ ಸರ್ವಜ್ಞ ಕಲಾ ಭವನವಿದ್ದು, ಅದರಲ್ಲಿ ಪಹಣಿ ವಿತರಣೆಯನ್ನು ನಾಳೆಯಿಂದಲೇ ಮಾಡಬೇಕು ಎಂದರು.
ರೈತರ ಹಣದಲ್ಲಿ ಉತ್ತಮ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಅಧಿಕಾರಿಗಳು ತಾವು ಮಾತ್ರ ಎಸಿ ಕೋಣೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಆದರೆ, ರೈತರು ತಮ್ಮ ಪಹಣಿ ಪಡೆಯಬೇಕಾದರೆ ಬಿರು ಬಿಸಲಿನಲ್ಲಿ ನಿಂತು ಪಹಣಿ ಪಡೆಯಬೇಕೆ ಎಂದು ಪ್ರಶ್ನಿಸಿದರು. ತಕ್ಷಣವೇ ರೈತರಿಗೆ ಅನುಕೂಲವಾಗುವಂತೆ ಕಲಾ ಭವನದಲ್ಲಿ ಪಹಣಿ ಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ರೈತರ ಎಲ್ಲ ಬೇಡಿಕೆಗಳು ಇಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಕುರಿತ ಮನವಿಯನ್ನು ತಹಸೀಲ್ದಾರ್ ಹನುಮಂತಪ್ಪ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಬಸನಗೌಡ ಗಂಗಪ್ಪನವರ, ಶಂಕ್ರಗೌಡ ಮರ್ಕಳ್ಳಿ, ಹೂವನಗೌಡ ಮಳವಳ್ಳಿ, ಮಲ್ಲೇಶಪ್ಪ ಕಡೂರ, ಶಂಕ್ರಪ್ಪ ಇಂಗಳಗೊಂದಿ, ರುದ್ರಪ್ಪ ಆಣೂರ, ವಿರನಗೌಡ ಅಲದಕಟ್ಟಿ ಮಲ್ಲಪ್ಪ ಮುದಿಗೌಡ್ರ, ಶಿವನಗೌಡ ಶಿರಗೆಂಬಿ, ಉಜ್ಜಪ್ಪ ಡಮ್ಮಳ್ಳಿ, ಸಿದ್ದನಗೌಡ ಮುದಿಗೌಡ್ರ, ವೀರನಗೌಡ ಪಾಟೀಲ, ಕರೇಗೌಡ ಯಡಚಿ, ವಿವಿಧ ಗ್ರಾಮಗಳ ರೈತ ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement