ಶಿಗ್ಗಾಂವಿ: ಚುರುಕುಗೊಂಡ ಕೃಷಿ ಕಾರ್ಯ
ಬಸವರಾಜ ಎಸ್. ಹಿರೇಮಠ
ಶಿಗ್ಗಾಂವಿ: ಕಳೆದೊಂದು ವಾರದಿಂದ ತಾಲೂಕಿನಲ್ಲಿ ಹೆಚ್ಚಿಗೆ ಮಳೆ ಸುರಿದಿದ್ದರಿಂದ ರೈತರು ಬಿತ್ತನೆ ಭೂಮಿ ಹದಗೊಳಿಸುವುದರಲ್ಲಿ ನಿರತರಾಗಿದ್ದು, ಭೂಮಿ ಹದಗೊಳಿಸುವುದರ ಜತೆಗೆ ಒಂದೊಂದು ಬತ್ತದ ಭೂಮಿಯನ್ನು ಬಿತ್ತಲು ಪ್ರಾರಂಭಿಸಿದ್ದಾರೆ. ಇದರೊಂದಿಗೆ ಕಳೆದೆರಡು ವರ್ಷ ಸರಿಯಾಗಿ ಬೆಳೆ ಕಾಣದೆ ಕಂಗಾಲಾಗಿದ್ದ ರೈತರ ಮುಖದಲ್ಲಿ ಕಳೆ ಬಂದಿದ್ದು, ಉತ್ಸಾಹದಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಚುರುಕುಗೊಂಡ ಮಳೆ: ತಾಲೂಕಿನಲ್ಲಿ ಅರ್ಧದಷ್ಟು ಭೂಮಿ ಮಲೆನಾಡು ಪ್ರದೇಶವಾದರೆ ಇನ್ನರ್ಧದಷ್ಟು ಬಯಲು ಸೀಮೆ ಕೃಷಿಭೂಮಿಯಾಗಿದ್ದು, ಕೆಲವೆಡೆ ಅಧಿಕ ಮಳೆ ಸುರಿದಿದ್ದರೆ ಇನ್ನು ಕೆಲವೆಡೆ ಸಾಧಾರಣ ಮಳೆಯಾಗಿದೆ.
ಅಂದಾಜು ಬಿತ್ತನೆ ಪ್ರಮಾಣ: 2013-14ನೇ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಶಿಗ್ಗಾಂವಿ ತಾಲೂಕಿನಲ್ಲಿ ಒಟ್ಟು 37,600 ಹೆಕ್ಟೇರ್ ಪ್ರದೇಶ ಬಿತ್ತನೆಯಾಗುವ ನಿರೀಕ್ಷೆಯಿದೆ. ಅದರಲ್ಲಿ ಗೋವಿನಜೋಳ- 12000 ಹೆಕ್ಟೇರ್, ಭತ್ತ- 6000 ಹೆಕ್ಟೇರ್, ಜೋಳ- 1500 ಹೆಕ್ಟೇರ್, ಸೋಯಾಬೀನ- 3000 ಹೆಕ್ಟೇರ್, ಶೇಂಗಾ- 5000 ಹೆಕ್ಟೇರ್, ಹತ್ತಿ- 10000 ಹೆಕ್ಟೇರ್ ಬಿತ್ತನೆಯಾಗಲಿದೆ. ತಾಲೂಕಿನಲ್ಲಿ ಒಟ್ಟು ಆರು(ಶಿಗ್ಗಾಂವ, ಹುಲಗೂರ, ಬಂಕಾಪುರ, ಕೋಣನಕೇರಿ, ಧುಂಡಶಿ ಮತ್ತು ತಡಸ) ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗುವುದು.
ಬೇಕಾಗುವ ಬೀಜ: ಬಿತ್ತನೆ ಕ್ಷೇತ್ರಕ್ಕೆ ಬೇಕಾಗುವ ಬಿತ್ತನೆ ಬೀಜಗಳ ಬೇಡಿಕೆ ಸಲ್ಲಿಸಲಾಗಿದ್ದು, ಗೋವಿನ ಜೋಳ- 2,100 ಕ್ವಿಂಟಲ್, ಭತ್ತ- 940 ಕ್ವಿಂಟಲ್, ಜೋಳ- 112 ಕ್ವಿಂಟಲ್, ಸೋಯಾಬೀನ- 2250 ಕ್ವಿಂಟಲ್, ಶೇಂಗಾ- 1,875 ಕ್ವಿಂಟಲ್, ಹತ್ತಿ- 30,000 ಪ್ಯಾಕೇಟುಗಳು ತಾಲೂಕಿಗೆ ಬೇಕಾಗಿವೆ. ಈಗಾಗಲೆ ಬೀಜ ಮಾರಾಟ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.
ಪ್ರಮುಖ ಬೆಳೆ: ತಾಲೂಕಿನಲ್ಲಿ ಭೂಚೇತನ ಯೋಜನೆ ಮುಂದುವರೆದಿದ್ದು, 2013ರ ಮುಂಗಾರು ಹಂಗಾಮಿಗೆ ಒಟ್ಟು 36,500 ಹೆಕ್ಟೇರ್ ಬಿತ್ತನೆ ಪ್ರದೇದ ಗುರಿ ಇದ್ದು, ಇದರಲ್ಲಿ, ಪ್ರಮುಖ ಬೆಳೆಗಳಾದ ಗೋವಿನಜೋಳ, ಬತ್ತ, ಹತ್ತಿ, ಜೋಳ, ಸೋಯಾಬೀನ ಹಾಗೂ ಶೇಂಗಾ ಬೆಳೆಗಳನ್ನು ಒಳಗೊಂಡಿರುತ್ತವೆ.
ಗೊಬ್ಬರ ಲಭ್ಯತೆ: ಪ್ರಸಕ್ತ ಸಾಲಿನಲ್ಲಿ ಡಿಎಪಿ-6,700 ಟನ್, ಯೂರಿಯಾ-5,000 ಟನ್ ಹಾಗೂ ಎಂಓಪಿ-2,500 ಟನ್ ರಸಗೊಬ್ಬರ ಬೇಡಿಕೆಯಿದ್ದು, ಈಗಾಗಲೇ ಡಿಎಪಿ ರಸಗೊಬ್ಬರವನ್ನು ಖಾಸಗಿ ಮಾರಾಟ ಕೇಂದ್ರಗಳಲ್ಲಿ ಸುಮಾರು 1,000 ಟನ್ ಹಾಗೂ ಸಹಕಾರಿ ಸಂಘಗಳಲ್ಲಿ 250 ಟನ್ ದಾಸ್ತಾನು ಮಾಡಲಾಗಿದೆ. ಅಲ್ಲದೆ ಯೂರಿಯಾ ಗೊಬ್ಬರವನ್ನು 200 ಟನ್ ಹಾಗೂ ಎಂಓಪಿ- 125 ಟನ್ಗಳು ಖಾಸಗಿ ಮಾರಾಟ ಕೇಂದ್ರಗಳಲ್ಲಿ ಲಭ್ಯವಿರುತ್ತದೆ.
ಕೊಟ್ಟಿಗೆ ಗೊಬ್ಬರ ಬಳಸಿ: ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಇಂಡೆಂಟ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ರೈತರು ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಎರೆಹುಳು ಗೊಬ್ಬರ, ಸಿಟಿ ಕಾಂಪೋಸ್ಟ್ ಹಾಗೂ ಕೊಟ್ಟಿಗೆ ಗೊಬ್ಬರಗಳನ್ನು ಬಳಸುವಂತೆ ಸಹಾಯಕ ಕೃಷಿ ನಿರ್ದೇಶಕ ಶಿವುಕುಮಾರ ಮಲ್ಲಾಡದ ಸೂಚಿಸಿದರು.
ಭೂಚೇತನ ಯೋಜನೆಯಡಿ ರೈತರಿಗೆ ಲಘು ಪೋಶಕಾಂಶಗಳಾದ ಜಿಂಕ್ ಸಲ್ಫೇಟ್, ಜಿಪ್ಸಂ, ಬೋರಾನ್ ಹಾಗೂ ಜೈವಿಕ ಗೊಬ್ಬರಗಳನ್ನು ಶೇ. 50ರ ರಿಯಾಯಿತಿಯಲ್ಲಿ ಎಲ್ಲಾ ಬೀಜ ಮಾರಾಟ ಕೇಂದ್ರಗಳಲ್ಲಿ ವಿತರಿಸಲಾಗುವುದು. ಲಘು ಪೋಷಕಾಂಶಗಳ ಬಳಕೆಯಿಂದ ಬೆಳೆಯ ಬೆಳವಣಿಗೆ ಉತ್ತಮವಾಗುವುದರ ಜೊತೆಗೆ ಇಳುವರಿ ಹೆಚ್ಚುವುದು ಹಾಗೂ ರೈತರು ಬೀಜಗಳನ್ನು ನೇರವಾಗಿ ಬಿತ್ತನೆ ಮಾಡದೆ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೆಳೆಗಳಿಗೆ ಆಗುವ ಹಾನಿ ತಪ್ಪಿಸಬಹುದಾಗಿದೆ.
ಶಿವುಕುಮಾರ ಮಲ್ಲಾಡದ
ಸಹಾಯಕ ಕೃಷಿ ನಿರ್ದೇಶಕ, ಶಿಗ್ಗಾಂವಿ