ಕೊಳಚೆಮಯವಾದ ಕನಕ ಉದ್ಯಾನ
ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ದಾಸ ಸಾಹಿತ್ಯದಲ್ಲಿ ದಿಗ್ಗಜರೆನಿಸಿಕೊಂಡ ಭಕ್ತ ಕನಕದಾಸರ ಹೆಸರಿನಲ್ಲಿ ನಿರ್ಮಾಣಗೊಂಡ ಕನಕ ಉದ್ಯಾನ ಇದೀಗ ಕೊಳಚೆ ಪ್ರದೇಶವಾಗಿದೆ. ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆ, ಪುರಸಭೆ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಣದೆ ಹಂದಿಗಳ ವಾಸಸ್ಥಳವಾಗಿದ್ದು, ಅಳವಡಿಸಿದ್ದ ನಾಮಫಲಕವೂ ನಾಪತ್ತೆಯಾಗಿದೆ.
ಕಸದ ರಾಶಿ: ಸಾಮಾನ್ಯವಾಗಿ ನೋಡುಗರಿಗೆ ಉದ್ಯಾನದಂತೆ ಗೋಚರಿಸುತ್ತದೆ. ಆದರೆ, ಒಂದು ಉದ್ಯಾನಕ್ಕೆ ಇರಬೇಕಾದ ಯಾವ ಅರ್ಹತೆ ಇದಕ್ಕಿಲ್ಲ. ಕನಕ ಉದ್ಯಾನವನ ಎಂದು ಗುರುತಿಸಲು ಅಳವಡಿಸಿದ್ದ ನಾಮಫಲವೂ ಇದೀಗ ನಾಪತ್ತೆಯಾಗಿದೆ. ಉದ್ಯಾನವನದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ ರಾರಾಜಿಸುತ್ತಿದೆ.
ಕನಕದಾಸರ ಹೆಸರಿಗೆ ಕಳಂಕ: ಕನಕದಾಸರ ಹೆಸರಿನಲ್ಲಿ ಸ್ಥಾಪಿತಗೊಂಡು ಎರಡ್ಮೂರು ವರ್ಷಗಳು ಗತಿಸಿದರೂ, ನಿರ್ಲಕ್ಷ್ಯಕ್ಕೊಳಗಾಗಿರುವ ಉದ್ಯಾನ ಕನಕನ ಹೆಸರಿಗೆ ಕಳಂಕವಾಗಿದೆ. ಸುತ್ತಲೂ ಪ್ರಜ್ಞಾವಂತ ಕನಕದಾಸರ ಭಕ್ತರಿಂದ ಅವರಿಸಿಕೊಂಡ ಉದ್ಯಾನವನ ಅಭಿವೃದ್ಧಿಯತ್ತ ಗಮನಿಸದಿರುವುದು ಬೇಸರ ತಂದಿದೆ.
ಪುರಸಭೆ ನಿರ್ಲಕ್ಷ್ಯ: ಉದ್ಯಾನದ ಪಕ್ಕದಲ್ಲೇ ಸುಮಾರು ನೂರು ಎಕರೆ ಐತಿಹಾಸಿಕ ಮಲ್ಲಪ್ಪನ ಕೆರೆ ಹೊಂದಿದ ಉದ್ಯಾನ, ಬಿಡಾಡಿ ದನಗಳ ದೊಡ್ಡಿಯಾಗಿ ಮಾರ್ಪಟ್ಟಿದ್ದು, ಉದ್ಯಾನ ಅಭಿವೃದ್ಧಿಪಡಿಸಿ ದೋಣಿ ವಿಹಾರ ಸ್ಥಳವನ್ನಾಗಿಸುವ ಕನಕನ ಭಕ್ತರ ಕನಸು ಇಂದಿಗೂ ನನಸಾಗುತ್ತಿಲ್ಲ. ಉದ್ಯಾನವನಗಳ ಅಭಿವೃದ್ಧಿಗೆ ಪುರಸಭೆ ಮನಸ್ಸು ಮಾಡುತ್ತಿಲ್ಲ.
ಯುವಕರ ಶ್ರಮ: ಸಂಗೋಳ್ಳಿ ರಾಯಣ್ಣ ಯುವಕ ಮಂಡಳದ ಪದಾಧಿಕಾರಿಗಳ ಶ್ರಮದಿಂದ ನಿರ್ಮಾಣಗೊಂಡು, ನಾಮಫಲಕ ಕಟ್ಟಿಕೊಂಡ ಉದ್ಯಾನ ಪುರಸಭೆ ದಾಖಲೆಗೆ ಸೇರಿದೆ. ಐತಿಹಾಸಿಕ ಪಟ್ಟಣವೆನಿಸಿಕೊಂಡರೂ ಬಂಕಾಪುರದಲ್ಲಿ ನಾಗರಿಕರ ಸಂಸಾರ ಜೀವನದ ಜಂಜಾಟ ಕಳೆದುಕೊಳ್ಳಲು ಸುಸಿಜ್ಜಿತ ಉದ್ಯಾನ ಇಲ್ಲದಂತಾಗಿದೆ.
ಗುತ್ತಿಗೆದಾರರ ನಿರ್ಲಕ್ಷ್ಯ: ದಶಕಗಳ ಹಿಂದೆ ಬಸ್ ನಿಲ್ದಾಣ ಪಕ್ಕದಲ್ಲಿ ತಲೆ ಎತ್ತಿದ್ದ ನೆಹರೂ ಉದ್ಯಾನವಿದ್ದರೂ ವಿವಾದದಲ್ಲಿದೆ. ಉದ್ಯಾನ ಸ್ಥಳದ ವಿವಾದ ಎರಡು ಕೋಮುಗಳ ಮಧ್ಯೆ ಸೃಷ್ಟಿಯಾಗಿ ಇತ್ಯರ್ಥಗೊಳ್ಳದೇ ನ್ಯಾಯದಲ್ಲಿ ವಿಚಾರಣೆ ನಡೆಯತ್ತಿದೆ. ರಸ್ತೆ, ಚರಂಡಿಗಳ ಜತೆಗೆ ಉದ್ಯಾನವನಗಳ ಅಭಿವೃದ್ಧಿ ಪುರಸಭೆ ಕರ್ತವ್ಯ ಹೌದು. ಇದನ್ನು ಅರ್ಥೈಸಿಕೊಂಡು ಪುರಸಭೆ ಅಧಿಕಾರಿಗಳು ಮತ್ತು ಆಡಳಿ ಮಂಡಳಿ ಉದ್ಯಾನವನಗಳ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಂಡು ನಾಗರಿಕರ ಆಸೆ ಈಡೇರಿಸಬೇಕು. ಇನ್ನೊಂದೆಡೆ ಅಭಿವೃದ್ಧಿಗೆ ಪುರಸಭೆ ಹಣ ಬಿಡುಗಡೆ ಮಾಡಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಆರಂಭಗೊಂಡಿಲ್ಲ.
ಉದ್ಯಾನಕ್ಕೆ ಸಹಕಾರ: ಬಂಕಾಪುರ ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ರಾಣೋಜಿ ಮಾತನಾಡಿ, ನೋಡ್ರಿ, ಈಗಾಗಲೇ ಕನಕ ಉದ್ಯಾನ ಅಭಿವೃದ್ಧಿಗೆ ಈ ಹಿಂದೆ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ. ನಿರ್ಣಯದಂತೆ ಉದ್ಯಾನ ಸುತ್ತು ಕಾಪೌಂಡ್ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸಲಹೆ ನೀಡಿ ಅಭಿವೃದ್ಧಿಗೆ ಒತ್ತಾಯಿಸಲಾಗುವುದು. ಜತೆಗೆ ಸುಂದರ ಉದ್ಯಾನವನ ನಿರ್ಮಿಸಲು ಸಹಕಾರ ನೀಡುತ್ತೇವೆ.
- ಬಸವರಾಜ ಎಸ್. ಹಿರೇಮಠ