ಸಮರ್ಪಕ ಬೀಜ, ಗೊಬ್ಬರ ವಿತರಿಸಿ: ಡಿಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 24
ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ಕೊರತೆ ಉಂಟಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಗುರುವಾರ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಕೃಷಿ ಚಟುವಟಿಕೆ ಕೈಕೊಳ್ಳಲು ಯಾವುದೇ ತೊಂದರೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ತಿಳಿಸಿದರು.
133.43 ಮಿ.ಮೀ ಮಳೆ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಣೇಶ ನಾಯ್ಕ ಮಾತನಾಡಿ, ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆಯು 777.34 ಮಿ.ಮೀ. ಇದ್ದು, 2013ನೇ ಮೇ ತಿಂಗಳಲ್ಲಿ 84.3 ಮಿ.ಮೀ. ವಾಡಿಕೆ ಮಳೆಗೆ ಮೇ 21ರ ವರೆಗೆ 29.8 ಮಿ.ಮೀ.ಮಳೆಯಾಗಿರುತ್ತದೆ. ಒಟ್ಟಾರೆ 2013ರ ಜನವರಿಯಿಂದ ಮೇ 21ರ ವರೆಗೆ 133.43 ಮಿ.ಮೀಟರ್ ವಾಡಿಕೆ ಮಳೆಗೆ 128.9 ಮಿ.ಮೀಟರ್ ಮಳೆಯಾಗಿದೆ.
4,056 ಲಕ್ಷ ಪ್ಯಾಕೆಟ್ ಬಿಟಿ ಬೀಜ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ 47,776 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಈಗಾಗಲೇ 4,775 ಕ್ವಿಂಟಲ್ ದಾಸ್ತಾನು ಮಾಡಲಾಗಿದೆ. ಬಿ.ಟಿ. ಹತ್ತಿ 50.8 ಲಕ್ಷ ಪ್ಯಾಕೆಟ್ ಬಿತ್ತನೆ ಬೀಜದ ಬೇಡಿಕೆಗೆ, 4,056 ಲಕ್ಷ ಪ್ಯಾಕೆಟ್ ಸರಬರಾಜಾಗಿದೆ.
ಗೊಬ್ಬರ ದಾಸ್ತಾನು: 1,23,035 ಟನ್ ರಸಗೊಬ್ಬರ ಬೇಡಿಕೆಗೆ ಇದುವರೆಗೂ 54,445 ಟನ್ ಪೂರೈಕೆಯಾಗಿದ್ದು, ಇದರಲ್ಲಿ 8,844 ಟನ್ ವಿತರಣೆಯಾಗಿದೆ. 45,601 ಟನ್ ದಾಸ್ತಾನು ಇರುತ್ತದೆ. 2012ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮೆಗೆ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ರು. 384 ಲಕ್ಷ ಮತ್ತು ರು. 455.43 ಲಕ್ಷ ಬೆಳೆ ವಿಮಾ ಯೋಜನೆಗಳಿಗೆ ಹಣ ಮಂಜೂರಾಗಿದೆ.
ಹಾನಿ ಪರಿಹಾರಕ್ಕೆ ರು. 1262.04 ಲಕ್ಷ ಅನುದಾನ: 2012-13ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿಯಾದ ಬಗ್ಗೆ ಸರ್ಕಾರದಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರು. 1262.04 ಲಕ್ಷ ಅನುದಾನ ಜಿಲ್ಲಾಧಿಕಾರಿಗಳಿಗೆ ಬಿಡುಗಡೆಯಾಗಿದ್ದು, ಕಂದಾಯ ಮತ್ತು ಕೃಷಿ ಇಲಾಖೆಯಿಂದ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಸಮರ್ಪಕ ವಿದ್ಯುತ್ ಕೊಡಿ: ಜಿಲ್ಲಾಧಿಕಾರಿಗಳು ವಿದ್ಯುತ್ ಸರಬರಾಜು ಕಂಪನಿಗಳನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಅಗತ್ಯವಿದ್ದು, ವಿದ್ಯುತ್ ವಿತರಣೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕೆಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಮೇ ತಿಂಗಳಲ್ಲಿ ಸುಮಾರು 10 ಕುಡಿವ ನೀರಿನ ಯೋಜನೆಗಳ ಕಾಮಗಾರಿ ಹಾಗೂ 70 ಗಂಗಾ ಕಲ್ಯಾಣ ಯೋಜನೆಯ ಕಾಮಗಾರಿಗಳ ಕೆಲಸ ಪೂರ್ಣಗೊಂಡಿದ್ದು, ಇವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಹಾವೇರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಓ.ಎಸ್. ಶಶಿಧರ ಸಭೆಗೆ ತಿಳಿಸಿದರು.
ಮುಂಜಾಗ್ರತೆ ವಹಿಸಿ: ಜಿಲ್ಲಾದ್ಯಂತ ಕುಡಿಯುವ ನೀರಿನ ವ್ಯವಸ್ಥೆಗಾಗಿ ಅಗತ್ಯವಿದ್ದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ನೀರು ಪೂರೈಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಪ್ರತಿ ಹಳ್ಳಿಯಲ್ಲಿಯೂ ಕುಡಿಯುವ ನೀರಿನ ತೊಂದರೆ ಆಗದಂತೆ ಜಾಗೃತಿ ವಹಿಸಬೇಕೆಂದು ಜಿಪಂ ಅಧಿಕಾರಿಗಳು ಸೂಚಿಸಿದರು. ಈಗಿರುವ ಬರ ಪರಸ್ಥಿತಿ ಮುಂದುವರಿದಲ್ಲಿ ಬರುವ ದಿನಗಳಲ್ಲಿ ಜಿಲ್ಲೆಯ 2,221 ಗ್ರಾಮಗಳಲ್ಲಿ ಅಲ್ಪ ಪ್ರಮಾಣದ ಕುಡಿಯುವ ನೀರಿನ ತೊಂದರೆ ಉಂಟಾಗಬಹುದೆಂದು ನಿರೀಕ್ಷಿಸಲಾಗಿದೆ. ಈ ಕುರಿತು ಮುಂಜಾಗ್ರತಾ ಕ್ರಮಕೊಳ್ಳಲು ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು.
ಮೇವು: ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರೈತರಿಗೆ ಮೇವು ಬೆಳೆಯಲು ಪ್ರೋತ್ಸಾಹಕವಾಗಿ ಉಚಿತ ಮೇವಿನ ಬೀಜದ 36,123 ಕಿರು ಪೊಟ್ಟಣಗಳನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರು. 49.45 ಲಕ್ಷ ಅನುದಾನದಡಿ ವಿತರಿಸಲಾಗಿದೆ. ಇದರಿಂದ ಅಂದಾಜು 150ರಿಂದ 170 ಮೆಟ್ರಿಕ್ ಟನ್ ಹಸಿರು ಮೇವು ಉತ್ಪಾದನೆಯಾಗಿದ್ದು, ಬರ ಪರಿಸ್ಥಿತಿಯಲ್ಲಿ ಮೇವಿನ ಕೊರತೆಯಾಗದು ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ಒದಗಿಸಿದರು.
ಶೀಘ್ರ ಶಾಲೆ ಪ್ರಾರಂಭ: ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಸಿ. ತಿರ್ಲಾಪುರ, ಕಳೆದ ಸಾಲಿನ ಅಂತ್ಯಕ್ಕೆ ಬ್ಯಾಡಗಿ, ರಾಣಿಬೆನ್ನೂರು ಹಾಗೂ ಹಾನಗಲ್ಲ ತಾಲೂಕುಗಳಿಗೆ ಹೊಸದಾಗಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗಳು ಮಂಜೂರಾದರೆ, ಶಿಗ್ಗಾಂವಿ ತಾಲೂಕಿಗೆ ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಮಂಜೂರಾಗಿದೆ. ಈ ವಸತಿ ಶಾಲೆಗಳನ್ನು ಪ್ರಸಕ್ತ ಸಾಲಿನಿಂದ ಪ್ರಾರಂಭಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಭಾಗ್ಯಲಕ್ಷ್ಮೀ ಬಾಂಡ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಚನ್ನಮ್ಮ ಹೊಳಿಹೊಸೂರು ಮಾತನಾಡಿ, ಭಾಗ್ಯಲಕ್ಷ್ಮೀ ಯೋಜನೆಯಡಿ ಈವರೆಗೆ 61,636 ಫಲಾನುಭವಿಗಳಿಗೆ ಮಂಜೂರಾತಿ ದೊರೆತಿದ್ದು, ಈ ಪೈಕಿ 57,406 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ವಿತರಣೆ ಮಾಡಲಾಗಿದೆ. ಸ್ತ್ರೀ-ಶಕ್ತಿ ಯೋಜನೆಯಡಿ ಮಹಿಳಾ ಸಬಲೀಕರಣ ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ 4,659 ಗುಂಪುಗಳು ರಚನೆಯಾಗಿದ್ದು, 2012-13ನೇ ಸಾಲಿನಲ್ಲಿ ರು. 26.64 ಲಕ್ಷ ಅನುದಾನವನ್ನು ಗುಂಪುಗಳಿಗೆ ವ್ಯಯಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ರಚನೆಯಾದ 399 ಸ್ತ್ರೀ ಗುಂಪುಗಳಿಗೆ ತಲಾ ರು. 5 ಸಾವಿರದಂತೆ ರು. 19.95 ಲಕ್ಷ ಸುತ್ತು ನಿಧಿ ನೀಡಲಾಗಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 205 ಗುಂಪುಗಳಿಗೆ ಬ್ಯಾಂಕಿನ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ. ಜಗದೀಶ, ಜಿಪಂ ಸಿಇಓ ಅಧಿಕಾರಿ ಉಮೇಶ ಕುಸುಗಲ್ಲ, ಉಪ ವಿಭಾಗಾಧಿಕಾರಿ ಕೆ. ಚನ್ನಬಸಪ್ಪ ಹಾಗೂ ಶರಣಬಸಪ್ಪ ಕೋಟೆಪ್ಪಗೌಡ, ಎಲ್ಲ ತಾಲೂಕು ತಹಸೀಲ್ದಾರರು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.