ಸುದ್ದಿ ಸಂಕ್ಷೇಪ
ಪ್ರಶಸ್ತಿಗೆ ಅರ್ಜಿ ಆಹ್ವಾನ
ಹಾವೇರಿ: ರಾಜ್ಯ ಸರ್ಕಾರವು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವಂತಹ ಇಬ್ಬರು ವ್ಯಕ್ತಿಗಳಿಗೆ ತಲಾ ರು. 25 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ 2 ಸಂಸ್ಥೆಗಳಿಗೆ ತಲಾ ರು. 1 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಮಕ್ಕಳ ದಿನಾಚರಣೆಯೆಂದು ಪ್ರದಾನ ಮಾಡಿ ಗೌರವಿಸಲಿದೆ. 2013ನೇ ಸಾಲಿನ ಪ್ರಶಸ್ತಿಗಾಗಿ ನಿಗದಿಪಡಿಸಿರುವ ಅರ್ಜಿ ನಮೂನೆಗಳನ್ನು ಜಿಲ್ಲೆಯ ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಜಿಲ್ಲೆಯ ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದಿನಾಂಕ 15 ಜೂನ್, 2013ರೊಳಗೆ ಸಲ್ಲಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಚನ್ನಮ್ಮ ಹೊಳಿಹೊಸೂರು ತಿಳಿಸಿದ್ದಾರೆ.
ವಿದ್ಯಾರ್ಥಿನಿ ನಾಪತ್ತೆ
ಹಾವೇರಿ: ಯುವತಿ ಜಯಶ್ರೀ ಸಂಗಪ್ಪ ಮುದೇನೂರ (17) ಮೇ 18, 2013ರಂದು ಶಿಗ್ಗಾಂವಿ ಮಾಮ್ಲೆದೇಸಾಯಿ ಕಾಲೇಜಿಗೆ ಪರೀಕ್ಷೆ ಬರೆಯಲು ಹೋದವಳನ್ನು ಶಿಗ್ಗಾಂವಿಯ ಹೊಸ ಬಸ್ ನಿಲ್ದಾಣದಲ್ಲಿ ಯಾರೋ ಅಪಹರಿಸಿರುವುದಾಗಿ ಶಿಗ್ಗಾಂವಿ ತಾಲೂಕಿನ ಗಂಗೇಬಾವಿ ಕೆಎಸ್ಆರ್ಪಿ ಕ್ವಾರ್ಟರ್ಸ್ ನಿವಾಸಿ ಮಹಾಂತೇಶ ಅಂದಾನೆಪ್ಪ ರಾಮತಾಳ ಅವರು ಮೇ 22, 2013ರಂದು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಯಶ್ರೀಯು ಮಹಾಂತೇಶ ರಾಮತಾಳ ಅವರ ಅಕ್ಕನ ಮಗಳಾಗಿದ್ದು, ಗಂಗಿಭಾವಿಯ ಅವರ ನಿವಾಸದಲ್ಲಿದ್ದಳೆಂದು ಅವರು ತಿಳಿಸಿದ್ದಾರೆ.
ಚಹರೆ: ನಾಪತ್ತೆಯಾದ ಯುವತಿ ದುಂಡು ಮುಖ, ಸಣ್ಣ ಮೂಗು, ಗೋದಿಗೆಂಪು ಮೈ ಬಣ್ಣ ಹೊಂದಿದ್ದು, ಮನೆಯಿಂದ ಹೊರಡುವ ಸಮಯದಲ್ಲಿ ಹೂವಿನ ಡಿಸೈನಿನ ಸೆಲ್ವರ ಪ್ರಾಕ್ ಧರಿಸಿದ್ದಳು. ಕನ್ನಡ ಭಾಷೆ ಮಾತನಾಡುತ್ತಾಳೆ. ಹುಡುಗಿಯ ಬಗ್ಗೆ ಮಾಹಿತಿ ದೊರೆತಲ್ಲಿ ಶಿಗ್ಗಾಂವಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08378-255233, 9480804558 ಹಾಗೂ ಹಾವೇರಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08375-237368-232143 ಮೊಬೈಲ್-9480804500ಗೆ ಮಾಹಿತಿ ನೀಡಬೇಕೆಂದು ಶಿಗ್ಗಾಂವಿ ಪೊಲೀಸ್ ಠಾಣೆ ಸಬ್ ಇನ್ಸ್ಸ್ಪೆಕ್ಟರ್ ಬಿ. ಕಲ್ಮೇಶ ತಿಳಿಸಿದ್ದಾರೆ.
ನೀಲಪ್ಪ ಕನ್ನಮ್ಮನವರ ನಿಧನ
ಶಿಗ್ಗಾಂವಿ: ತಾಲೂಕಿನ ಅತ್ತಿಗೇರಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಹಾಗೂ ರೈತ ಸೇವಾ ಸಂಘದ ಅಧ್ಯಕ್ಷರಾಗಿದ್ದ ನೀಲಪ್ಪ ಮಾರ್ತಂಡಪ್ಪ ಕನ್ನಮ್ಮನವರ (56) ಮೇ 21ರಂದು ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಅತ್ತಿಗೇರಿಯ ವಿಎಸ್ಎಸ್ ಬ್ಯಾಂಕ್, ರೈತ ಸೇವಾ ಸಂಘದಲ್ಲಿ ಹಾವೇರಿ ಜಿಲ್ಲಾ ಕುರುಬ ಸಮಾಜದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.