31ರಂದು ಶಾಲಾ ಪ್ರಾರಂಭೋತ್ಸವ
ಹಾವೇರಿ: ಪ್ರಸಕ್ತ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮೇ 31ರಂದು ಜರುಗಲಿದ್ದು, ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಎಲ್ಲ ಶಿಕ್ಷಕರು ಮೇ 30ರಂದು ಶಾಲೆಗೆ ಹಾಜರಾಗಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ.
ಶಾಲೆ ಆವರಣ, ಶಾಲಾ ಕೊಠಡಿಗಳ ಸ್ವಚ್ಛತೆ, ಕುಡಿಯುವ ನೀರು ಮತ್ತು ಶೌಚಾಲಯಗಳು ಸುಸ್ಥಿತಿಯಲ್ಲಿ ಇರುವಂತೆ ವ್ಯವಸ್ಥೆಗೊಳಿಸಬೇಕು ಹಾಗೂ ಪ್ರಾರಂಭೋತ್ಸವದ ಬಗ್ಗೆ ಪ್ರತಿ ಗ್ರಾಮದಲ್ಲಿ ಡಂಗುರ ಸಾರಬೇಕು. ಶಾಲಾ ಪ್ರಾರಂಭೋತ್ಸವದಂದು ತಳಿರು ತೋರಣಗಳಿಂದ ಶಾಲೆಯನ್ನು ಅಲಂಕರಿಸಬೇಕು ಹಾಗೂ ಜನಪ್ರತಿನಿಧಿಗಳನ್ನು, ಎಸ್‌ಡಿಎಂಸಿ ಸದಸ್ಯರು ಮತ್ತು ಪೋಷಕರನ್ನು ಕಡ್ಡಾಯವಾಗಿ ಅಹ್ವಾನಿಸಬೇಕು ಎಂದರು.
ಮಧ್ಯಾಹ್ನದ ಬಿಸಿ ಊಟದೊಂದಿಗೆ ಕೇಸರಿ ಬಾತ್ ಉಣ ಬಡಿಸಬೇಕು. ಎಲ್ಲ ಶಿಕ್ಷಕರ ಹಾಜರಾತಿಯೊಂದಿಗೆ, ಎಲ್ಲ ಮಕ್ಕಳು ಹಾಜರಾಗುವಂತೆ ಕ್ರಮವಹಿಸುವುದು. ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಪೂರೈಸಿದ ಸಮವಸ್ತ್ರಗಳನ್ನು ಧರಿಸಿಕೊಂಡು ಮಕ್ಕಳ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.