ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅನಧಿಕೃತ ಕ್ಲಿನಿಕ್‌ಗಳಿಗೆ ಬೀಗ

Vishwanath S
Updated On : 26 May 2013, 1:23 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 25
ನಕಲಿ ವೈದ್ಯರ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಶನಿವಾರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಕ್ಲಿನಿಕ್‌ಗಳ ಮೇಲೆ ತಾಲೂಕು ವೈದ್ಯಾಧಿಕಾರಿಗಳ ತಂಡವು ದಾಳಿ ನಡೆಸಿ ಕೆಲ ಅನಧಿಕೃತ ಕ್ಲಿನಿಕ್‌ಗಳನ್ನು ಸ್ಥಗಿತಗೊಳಿಸಿತು.
ಭಾರತೀಯ ವೈದ್ಯಕೀಯ ಪರಿಷತ್‌ನ ಹಾಗೂ ಜಿಲ್ಲಾ ಆಯುಷ್ ನೇತೃತ್ವದಲ್ಲಿ ವೈದ್ಯಾಧಿಕಾರಿಗಳ ತಂಡವು ಸುಮಾರು 36 ಖಾಸಗಿ ಕ್ಲಿನಿಕ್‌ಗಳನ್ನು ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಕೆಲ ಅಚ್ಚರಿ ಸಂಗತಿಗಳು ಬಹಿರಂಗಗೊಂಡಿದ್ದು ಸಾರ್ವಜನಿಕರನ್ನು ಭಯಭೀತಗೊಳ್ಳುವಂತೆ ಮಾಡಿವೆ.
ಆಂಧ್ರ ಮೂಲದ ನಕಲಿವೈದ್ಯ: ಪಟ್ಟಣದ ಸ್ಟೇಶನ್ ರಸ್ತೆಯಲ್ಲಿ ಇತ್ತೀಚೆಗೆ ತಲೆಯೆತ್ತಿರುವ ಮೂಲವ್ಯಾಧಿ ಕ್ಲಿನಿಕ್‌ನಲ್ಲಿ ಆಂಧ್ರ ಮೂಲದ ಅನಾಮಧೇಯ ವ್ಯಕ್ತಿಯೊಬ್ಬ ಇಲ್ಲಿ ವೈದ್ಯಕೀಯ ಸೇವೆ ನಡೆಸುತ್ತಿದ್ದಾನೆ. ತನಿಖೆ ಸಂದರ್ಭದಲ್ಲಿ ಕನ್ನಡ ಭಾಷೆಯನ್ನೇ ಮಾತನಾಡದ ಈತನ ಹೆಸರು ಶಫೀಕ್ ಎಂದು ಬಹಿರಂಗಗೊಂಡಿತಾದರೂ ನಾಮಫಲಕದಲ್ಲಿ ಡಾ. ಯು.ಎಂ. ಪಠಾಣ್(ಎಂಬಿಬಿಎಸ್) ಹಾಗೂ ಡಾ. ರಮೇಶ್ (ಬಿಎಎಂಎಸ್) ಎಂಬುದಾಗಿ ನಮೂದಿಸಿಲಾಗಿದೆ. ರೋಗಿಗಳಿಂದ ಪರೀಕ್ಷೆಗಾಗಿ ರು. 250ರಿಂದ ರು. 1 ಸಾವಿರವರೆಗೆ ಹಣ ಕೀಳತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಓದಿದ್ದು ಎಸ್ಸೆಸ್ಸೆಲ್ಸಿ ಆದರೂ ವೈದ್ಯಪಟ್ಟಣದ ಸುಭಾಸ್ ಸರ್ಕಲ್‌ನಲ್ಲಿರುವ ಸೌದಾಗರ್ ಕ್ಸಿನಿಕ್‌ನಲ್ಲಿ ಪರಿಣಿತ ವೈದ್ಯನೆಂದು ಹೇಳಿಕೊಳ್ಳುತ್ತಿರುವ ಡಾ. ಎಚ್.ಎಸ್. ಹತ್ತಿ ಓದಿದ್ದು ಮಾತ್ರ ಎಸ್ಸೆಸ್ಸೆಲ್ಸಿ. ಆದರೆ, ಈತ ಹೃದ್ರೋಗ, ರಕ್ತದೊತ್ತಡ ಹಾಗೂ ಮಧುಮೇಹ ರೋಗಗಳಿಗೆ ತಜ್ಞ ವೈದ್ಯನೆಂದು ಹೇಳಿಕೊಳ್ಳುತ್ತಿದ್ದು, ವಾರಕ್ಕೊಮ್ಮೆ ಕ್ಲಿನಿಕ್‌ಗೆ ಬಂದು ಹೋಗುವುದಾಗಿ ನಾಮಫಲಕದಲ್ಲಿ ನಮೂದಿಸಿದ್ದಾನೆ.
ಸೌದಾಗರ್ ಕ್ಲಿನಿಕ್‌ಗೆ ಭೇಟಿ ನೀಡಿದ ವೈದ್ಯರ ತಂಡವು ನಡೆಸಿದ ತನಿಖೆಯಿಂದ ಮಾಹಿತಿ ಲಭ್ಯವಾಗಿದ್ದು, ಈ ಸಂದರ್ಭ ಸೌದಾಗರ ಅವರನ್ನು ತನಿಖೆಗೊಳಪಡಿಸಿದ ತಂಡವು ವೈದ್ಯಕೀಯ ಪ್ರಮಾಣಪತ್ರ ಕೇಳಿದರೆ ಕೋರ್ಟ್ ಆದೇಶ ತೋರಿಸಿದ್ದು, ಇನ್ನಷ್ಟು ಕುತೂಹಲ ಹಾಗೂ ಆತಂಕ ಮೂಡಿಸಿದೆ.
ಏನ್ ಮಾಡಕೊಳ್ತೀರ ಸಾರ್: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಚೇತನಾ ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ ವೈದ್ಯರ ತಂಡಕ್ಕೆ ಕೊಂಚ ಮುಜುಗರವಾದ ಘಟನೆ ನಡೆಯಿತು. ಆಯುರ್ವೇದಿಕ್ ಓದಿ ಅಲೋಪತಿಕ್ ಔಷಧ ಕೊಡ್ತಾ ಇದ್ದೀರಲ್ರಿ ಎಂದು ಡಾ. ಶಿವಯೋಗಿ ಹೆಡಿಯಾಲ ಪ್ರಶ್ನಿಸಿದ ತಂಡಕ್ಕೆ ಹೌದು ಸಾರ್ ಶೇ. 90ರಷ್ಟು ಅಲೋಪತಿಕ್ ಕೊಡ್ತನ್ರೀ ಏನ್ ಮಾಡ್‌ಕೊಳ್ತೀರಾ ಎಂದು ಏರುಧ್ವನಿಯಲ್ಲಿ ಉತ್ತರಿಸಿದ. ಇದರಿಂದ ಕೆಲಕಾಲ ವಿಚಲಿತರಾದಂತೆ ಕಂಡು ಬಂದ ವೈದ್ಯರ ತಂಡವು ಸ್ಥಳದಲ್ಲೇ ನೋಟಿಸ್ ಜಾರಿಗೊಳಿಸಿದ್ದು, ಡಾ.ಹೆಡಿಯಾಲ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ತಂಡ ಚಿಂತನೆ ನಡೆಸಿದೆ.
ಆಯುರ್ವೇದಿಕ್‌ನವರು ಸಲೈನ್ ಏರಿಸ್ತಾರೆ: ಹಲವು ವರ್ಷಗಳಿಂದ ಪಟ್ಟಣದ ಚಾವಡಿ ರಸ್ತೆಯಲ್ಲಿರುವ ಡಾ. ಕಮ್ಮಾರ ಎಂಬ ಹೆಸರಿನ ವೈದ್ಯರೊಬ್ಬರು ನಡೆಸುತ್ತಿರುವ ಮಾರುತಿ ಕ್ಲಿನಿಕ್‌ಗೆ ದಾಳಿ ನಡೆಸಿದ ವ್ಯೆದ್ಯರ ತಂಡಕ್ಕೆ ಮತ್ತೊಂದು ಅಚ್ಚರಿ ಕಾದಿತ್ತು. ದಾಳಿ ಸಂದರ್ಭದಲ್ಲಿ ಆಯುರ್ವೇದಿಕ್ ವೈದ್ಯರಾಗಿದ್ದರೂ ರೋಗಿಯೊಬ್ಬರಿಗೆ ಸಲಾಯಿನ್ ಏರಿಸುವ ಮೂಲಕ ಅಲೋಪತಿಕ್ ಔಷಧಿ ನೀಡುತ್ತಿರುವ ಬಗ್ಗೆ ಸಾಕ್ಷಿ ದೊರೆಯಿತು.
ರಕ್ತ ಪರೀಕ್ಷಾ ಕೇಂದ್ರಗಳ ಮೇಲೂ ದಾಳಿ: ವೈದ್ಯಾಧಿಕಾರಿಗಳ ತಂಡವು ಪಟ್ಟಣದಲ್ಲಿರುವ ರಕ್ತ ಪರೀಕ್ಷಾ ಕೇಂದ್ರಗಳ ಮೇಲೂ ದಾಳಿ ನಡೆಸಿತು. ಅನುಮತಿ ಇಲ್ಲದೇ ಕೆಲ ಕೇಂದ್ರಗಳು ರಕ್ತ ಪರೀಕ್ಷೆ ನಡೆಸುತ್ತಿರುವುದು ಹಾಗೂ ಕೇಂದ್ರದಿಂದ ಹೊರಬರುವ ತ್ಯಾಜ್ಯವಸ್ತುಗಳ ಸಮರ್ಪಕ ವಿಲೇವಾರಿ ನಡೆಯದಿರುವ ಕುರಿತು ತನಿಖಾ ತಂಡವು ಬಹಿರಂಗಪಡಿಸಿದ್ದು, ಅವುಗಳಿಗೂ ಕೂಡ ನೋಟಿಸ್ ಜಾರಿ ಮಾಡಿತು.
ಕ್ರಿಮಿನಲ್ ಪ್ರಕರಣ ದಾಖಲು:ತನಿಖೆ ಸಂದರ್ಭ ವಾಯುಮಾಲಿನ್ಯ, ವೈದ್ಯಕೀಯ ಹಾಗೂ ನೋಂದಣಿ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವ ಆಯುರ್ವೇದಿಕ್ ಹೋಮಿಯೋಪತಿ, ಇನ್ನಿತರ ವಿದ್ಯಾರ್ಹತೆಗೆ ವಿರೋಧವಾಗಿ ಅಲೋಪತಿಕ್ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ 30 ದಿನಗಳ ಗಡುವು ವಿಧಿಸಿ ನೋಟಿಸ್ ಜಾರಿ ಮಾಡಲಾಗಿದ್ದು, ನಿಗದಿತ ಸಮಯದಲ್ಲಿ ಉತ್ತರ ನೀಡದಿದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಹಾಗೂ ವಂಚನೆ ಪ್ರಕರಣ ದಾಖಲಿಸುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ. ಬಿ.ಆರ್. ಲಮಾಣಿ ಎಚ್ಚರಿಸಿದರು.
ಭಾರತೀಯ ವೈದ್ಯಕೀಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಡಾ. ಪ್ರಕಾಶ ಭಸ್ಮೆ, ಆಯುಷ್ ವೈದ್ಯ ಡಾ. ಶಿವಕುಮಾರ ಸುಣಗಾರ, ಹಿರಿಯ ಆರೋಗ್ಯ ಸಹಾಯಕ ವೈ.ಎಂ. ಹಿರಿಯಕ್ಕನವರ ಹಾಗೂ ಇನ್ನಿತರರು ದಾಳಿ ತಂಡದ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement