ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ
ಶಿಗ್ಗಾಂವಿ: ಜನರ ಹಕ್ಕುಗಳನ್ನು ಹೋರಾಟದ ಮೂಲಕ ಸರ್ಕಾರದಿಂದ ಪಡೆದುಕೊಳ್ಳುತ್ತೇನೆ. ಎಷ್ಟೇ ಸಮಸ್ಯೆಗಳು ಎದುರಾದರೂ ಕೈಕಟ್ಟಿ ಕುಳಿತುಕೊಳ್ಳಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದು ಜನರು ನೀಡಿದ ಶಕ್ತಿ ಅಭಿವೃದ್ಧಿಗೆ ಬಳಸುತ್ತೇನೆ. ಎಂಎಲ್ಸಿ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಕೈಹಿಡಿದ ನಾರಾಯಣಪುರ ಗ್ರಾಮ ಮರೆಯೊಲ್ಲ ಎಂದು 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಗ್ರಾಮಸ್ಥರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಚುನಾವಣೆಯಲ್ಲಿ ಸತ್ಯವನ್ನು ಅಸತ್ಯ, ಅಸತ್ಯವನ್ನು ಸತ್ಯ ಎಂದು ಬಿಂಬಿಸುವ ಮೂಲಕ ಅಪಪ್ರಚಾರ ಮಾಡಿದ ವಿರೋಧಿಗಳು ಅಕಾರದಲ್ಲಿದ್ದ ಸಂದರ್ಭ ಅಭಿವೃದ್ಧಿ ಮಾಡಿದ್ದೇನು ಎಂದು ಪ್ರಶ್ನಿಸಿದರು.
ಮತದಾರರ ಶಕ್ತಿ ಇದೆ: ಒಂದು ಬಾರಿ ಶಾಸಕನಾದ ಸಂದರ್ಭ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತ ಅಭಿವೃದ್ಧಿ ಮಾಡದೇ ಚುನಾವಣೆಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದನ್ನು ಜನತೆ ಮರೆಯಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸೈಯ್ಯದ ಅಜ್ಜಂಫೀರ್ ಖಾದ್ರಿ ವಿರುದ್ಧ ವಾಗ್ದಾಳಿ ಮಾಡಿದ ಬೊಮ್ಮಾಯಿ, ಮತದಾರರ ಶಕ್ತಿ ನನಗಿದೆ ಎಂದರು.
ವಿರೋಧಿಗಳಿಂದ ಕುತಂತ್ರ: ನನ್ನ ಸೋಲಿಸಲು ಹೊರ ಮತ್ತು ಒಳಗಿನವರು ನಡೆಸಿದ ರಾಜಕೀಯ ಕುತಂತ್ರವು ಮತದಾರರ ಮುಂದೆ ಫಲಿಸಲಿಲ್ಲ ಎಂದು ವಿಶ್ಲೇಷಿಸಿದ ಬೊಮ್ಮಾಯಿ, ಅಭಿವೃದ್ಧಿ ಮುಂದೆ ಯಾವುದೇ ರಾಜಕೀಯ ಕುಂತಂತ್ರ ನಡೆಯೋಲ್ಲ ಎನ್ನುವುದಕ್ಕೆ 2008 ಮತ್ತು 2013ರ ಸಾರ್ವತ್ರಿಕ ಚುನಾವಣೆ ಸಾಕ್ಷಿಯಾಗಿದೆ ಎಂದರು.
ಸಮಸ್ಯೆಗಳಿಗೆ ಸೂಕ್ತ ಪರಿಹಾರ: ರಾಜ್ಯದಲ್ಲಿ ರಾಜಕೀಯ ಗಾಳಿ ಕಾಂಗ್ರೆಸ್ ಪಕ್ಷದತ್ತ ಬೀರಿದರೂ, ನನ್ನನು ಕೈಬಿಡದೇ ಕೈಹಿಡಿದು ರಾಜಕೀಯವಾಗಿ ಮೇಲೆತ್ತಿದ ಮತದಾರರ ನ್ಯಾಯಯುತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆ.
ವಿರೋಧ ಪಕ್ಷದಲ್ಲಿದ್ದರೂ ಬಗ್ಗದೇ ಬೇಡಿ ಪಡೆಯವುದಕ್ಕಿಂತ ಹೋರಾಡಿ ಕ್ಷೇತ್ರದ ಅಭಿವೃದ್ಧಿಪಡಿಸುತ್ತೇನೆ ಕೊಂಚವೂ ಹಿನ್ನಡೆಯಾಗದಂತೆ ನಿಗಾ ವಹಿಸುತ್ತೇನೆ ಎಂದರು.
ಬರೆ ಎಳೆದ ಕೇಂದ್ರ: ಕೇಂದ್ರದ ಯುಪಿಎ ಸರ್ಕಾರ ಜನಸಾಮಾನ್ಯರ ವಿರುದ್ಧ ಆಡಳಿತ ಕೈಗೊಂಡಿದೆ. ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಮಾಡಿ ಜನರ ಹೊಟ್ಟೆ ಮೇಲೆ ಬರೆ ಎಳೆದಿದೆ ಎಂದು ಬೊಮ್ಮಾಯಿ ಅಕ್ರೋಶ ವ್ಯಕ್ತಪಡಿಸಿರು.
ಎನ್ಡಿಎ ಅಧಿಕಾರಕ್ಕೆ: ಲೋಕಸಭೆಗೆ ಇಂದೇ ಚುನಾವಣೆ ನಡೆದರೆ ಕೇಂದ್ರದಲ್ಲಿ ಎನ್ಡಿಎ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಈಗಾಗಲೇ ಸಮೀಕ್ಷೆಗಳು ಸ್ಪಷ್ಟ ಚಿತ್ರಣ ನೀಡಿವೆ ಎಂದು ಹೇಳಿದ ಬೊಮ್ಮಾಯಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿರುವ ಪ್ರಹ್ಲಾದ ಜೋಶಿ ಅವರನ್ನು ಬೆಂಬಲಿಸಿ ಗೆಲ್ಲಿಸಿ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಐವತ್ತು ವರ್ಷ ಅಭಿವೃದ್ಧಿ ಕಾಣದೇ ಬಿಕೋ ಎನ್ನುತ್ತಿದ್ದ ಶಿಗ್ಗಾಂವಿ ಕ್ಷೇತ್ರದಲ್ಲಿ ಆಡಳಿತ ಮಾಡುತ್ತಿದ್ದವರು ಅಭಿವೃದ್ಧಿ ನೆಪದಲ್ಲಿ ಕೆರೆ, ರಸ್ತೆಗಳನ್ನು ನುಂಗಿ ಹಾಕಿದ್ದರು. ಬೊಮ್ಮಾಯಿ ಶಾಸಕರಾದ ಮೇಲೆ ಎಲ್ಲವೂ ಅಭಿವೃದ್ಧಿ ಹೊಂದಿ ರಾಜ್ಯದಲ್ಲಿ ಗಮನ ಸೆಳೆದಿದೆ ಎಂದರು.
ಪಕ್ಕದಲ್ಲಿ ವರದಾ ನದಿ ಹರಿದರೂ ಕ್ಷೇತ್ರದ ಜನರಿಗೆ ಕುಡಿವ ನೀರು ಕೊಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜೋಶಿ, ಬಿಜೆಪಿ ಸರ್ಕಾರ ಅದೇ ನದಿ ನೀರು ಬಳಿಕೆ ಮಾಡಿಕೊಂಡು ಕ್ಷೇತ್ರದ ರೈತರಿಗೆ ನೀರಾವರಿ ವ್ಯವಸ್ಥೆ ಮತ್ತು ಸಮರ್ಪಕ ಕುಡಿಯವ ನೀರು ಪೂರೈಸಿ, ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.
ವಿಪ ಸದಸ್ಯ ಸೋಮಣ್ಣ ಬೇವಿನಮರದ, ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ತಾಪಂ ಅಧ್ಯಕ್ಷ ಉಷಾ ಬಿಳಿಕುದರಿ, ಜಿಪಂ ಸದಸ್ಯ ಶಶಿಧರ ಹೊನ್ನಣ್ಣನವರ, ವಿ.ಡಿ. ರಾಯಣ್ಣನವರ, ಬಸವರಾಜ ಕುರಗೋಡಿ, ಬಂಕಾಪುರ ಪುರಸಭೆ ಸದಸ್ಯ ಹೊನ್ನಪ್ಪ ಹೂಗಾರ, ಮಾಜಿ ಸದಸ್ಯರಾದ ಗುಡ್ಡಪ್ಪ ಮತ್ತೂರ, ಸೋಮಶೇಖರ ಗೌರಿಮಠ ಮತ್ತಿತರರು ಇದ್ದರು. ದುಂಡಪ್ಪ ಮಾಸನಕಟ್ಟಿ ಸ್ವಾಗತಿಸಿ, ನಿರೂಪಿಸಿದರು. ಇದೇ ಸಂದರ್ಭ ಗ್ರಾಮಸ್ಥರು ಶಾಸಕ ಬೊಮ್ಮಾಯಿ ಅವರನ್ನು ಹಸಿರು ಶಾಲು ಹೊದಿಸಿ ಸನ್ಮಾನಿಸಿದರು. ಅಂದಲಗಿ, ಸದಾಶಿವಪೇಟೆ, ಮುನವಳ್ಳಿ ಗ್ರಾಮದಲ್ಲಿ ನಡೆದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.