ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜಿಲ್ಲೆಯಲ್ಲಿ ಸಮರ್ಪಕ ಬೀಜ, ಗೊಬ್ಬರ

Vishwanath S
Updated On : 26 May 2013, 1:20 am

ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 25
ಜಿಲ್ಲಾದ್ಯಂತ ಪ್ರಸಕ್ತ ವರ್ಷದ ಮುಂಗಾರು ಹಂಗಾಮು ಬಿತ್ತನೆಗೆ ಬೇಕಾಗುವ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ರೈತರು ಒಂದೇ ತಳಿಯ ಬೀಜ, ಗೊಬ್ಬರಕ್ಕೆ ಮುಗಿಬೀಳದೇ, ಕೃಷಿಭೂಮಿ ಫಲವತ್ತತೆಗನುಗುಣವಾಗಿ ಉತ್ತಮ ತಳಿಯ ಬೀಜ ಮತ್ತು ಗೊಬ್ಬರವನ್ನು ಅಗತ್ಯಕ್ಕನುಗುಣವಾಗಿ ಬಳಕೆ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಂಕ್ರಣ್ಣ ಮಾತನವರ ರೈತರಲ್ಲಿ ಮನವಿ ಮಾಡಿದರು.
ಶನಿವಾರ ಜಿಲ್ಲಾ ಪಂಚಾಯಿತಿಯ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿ 35ಕ್ಕೂ ಅಧಿಕ ತಳಿಯ ಉತ್ತಮ ಬಿತ್ತನೆ ಬೀಜಗಳು ಲಭ್ಯ ಇವೆ. ಅಲ್ಲದೇ ರೈತರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಹೆಚ್ಚುವರಿಯಾಗಿ 28 ರೈತ ಸಂಪರ್ಕ ಕೇಂದ್ರಗಳನ್ನು ಸಮೀಪದ ಹೋಬಳಿ ಕೇಂದ್ರಗಳಲ್ಲಿ ತೆರೆಯಲಾಗಿದೆ. ಜಿಲ್ಲಾದ್ಯಂತ ಒಟ್ಟು 47 ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿಯೂ ಬೀಜ ಹಾಗೂ ಗೊಬ್ಬರ ಸರಬರಾಜು ನಡೆಯಲಿದ್ದು, ರೈತರು ಈ ಕೇಂದ್ರಗಳಿಗೆ ತೆರಳಿ ಬೀಜ-ಗೊಬ್ಬರ ಪಡೆಯಬಹುದೆಂದು ತಿಳಿಸಿದರು.
ಬಿತ್ತನೆ ಬೀಜದ ವ್ಯವಸ್ಥೆ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಣೇಶ ನಾಯ್ಕ ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ರಿಯಾಯಿತಿ ದರದಲ್ಲಿ ಅಂದಾಜು 36 ಸಾವಿರ ಕ್ವಿಂಟಲ್‌ಗಳಷ್ಟು ವಿವಿಧ ಬಿತ್ತನೆ ಬೀಜಗಳ ವಿತರಣೆ ಕಾರ್ಯ ಯೋಜಿಸಿದ್ದು, ಪ್ರಮುಖವಾಗಿ ಸೋಯಾಬಿನ್ 6 ಸಾವಿರ ಕ್ವಿಂಟಲ್, ಹೈಬ್ರಿಡ್ ಮುಸುಕಿನ ಜೋಳ 22.5 ಸಾವಿರ ಕ್ವಿಂಟಲ್, ಶೇಂಗಾ 2 ಸಾವಿರ ಕ್ವಿಂಟಲ್, ಬತ್ತ 5.5 ಸಾವಿರ ಕ್ವಿಂಟಲ್ ದಾಸ್ತಾನು ಮಾಡಿ, ಹಂತ ಹಂತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೇ ತಿಂಗಳ ಅಂತ್ಯದಲ್ಲಿ ಸೋಯಾಬಿನ್ ಬಿತ್ತನೆ ಕಾರ್ಯ ಆರಂಭವಾಗಲಿದ್ದು, 4,227 ಕ್ವಿಂಟಲ್, ಸೋಯಾಬಿನ್ ಸೇರಿದಂತೆ ಒಟ್ಟು 5,886 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜಗಳ ವಿತರಣೆ ವ್ಯವಸ್ಥೆಯನ್ನು ಆಯಾ ರೈತ ಕೇಂದ್ರಗಳ ಮೂಲಕ ಮಾಡಲಾಗುವುದು ಎಂದು ತಿಳಿಸಿದರು.
ಹತ್ತಿ ಬೀಜ: ಜಿಲ್ಲೆಯಲ್ಲಿ ಅಂದಾಜು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಬಹುದಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 4,056 ಲಕ್ಷ ಬಿಟಿ ಹತ್ತಿ ಪ್ಯಾಕೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, 1.02 ಲಕ್ಷ ಪ್ಯಾಕೆಟ್‌ಗಳು ವಿತರಣೆಯಾಗಿವೆ ಎಂದು ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಸಗೊಬ್ಬರ: ಜಿಲ್ಲೆಯಲ್ಲಿ ಸುಮಾರು 40,148 ಟನ್‌ಗಳಷ್ಟು ರಸಗೊಬ್ಬರ ಮಾರಾಟ ಒಕ್ಕೂಟದಲ್ಲಿ (ಮಾರ್ಕೇಟಿಂಗ್ ಫೆಡರೇಷನ್), 19,400 ಟನ್ ಖಾಸಗಿ ಮಾರಾಟಗಾರರಲ್ಲಿ ಹೀಗೆ ಒಟ್ಟು 59,548 ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಇದರಲ್ಲಿ 9,246 ಟನ್ ವಿತರಣೆಯಾಗಿದೆ. ರೈತರು ಹೆಚ್ಚಾಗಿ ಯೂರಿಯಾ ಗೊಬ್ಬರವನ್ನಷ್ಟೇ ಅವಲಂಬಿಸದೇ, ಸಾವಯವ ಗೊಬ್ಬರ ಬಳಕೆ ಮಾಡುವುದು ಅವಶ್ಯಕವಾಗಿದೆ. ಇದರೊಂದಿಗೆ ಲಘು ಪೋಷಕಾಂಶಗಳುಳ್ಳ (ಸತುವಿನ ಸಲ್ಫೇಟ್, ಬೋರಾನ್, ಜಿಪ್ಸಂ ಇತರೆ) ಬಳಕೆಗೆ ಒತ್ತು ನೀಡುವಂತೆ ರೈತರಲ್ಲಿ ಮನವಿ ಮಾಡಿದರು.
ಭೂ ಚೇತನ: ಪ್ರಸಕ್ತ ವರ್ಷದಲ್ಲಿಯೂ ಭೂ ಚೇತನ ಕಾರ್ಯಕ್ರಮ ಮುಂದುವರಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 2.61 ಲಕ್ಷ ಹೆಕ್ಟೇರ್ ಪ್ರವೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಪ್ರಮುಖವಾಗಿ ಗೋವಿನಜೋಳ, ಹತ್ತಿ, ಶೇಂಗಾ, ಸೋಯಾ ಅವರೆ ದ್ವಿದಳ ಧಾನ್ಯ ಬೆಳೆಗಳು ಇದರಲ್ಲಿ ಒಳಗೊಂಡಿರುತ್ತವೆ.
ಭೂ ಚೇತನ ಯೋಜನೆಯಡಿ ರೈತ ಸಂಪರ್ಕ ಕೇಂದ್ರಗಳಲ್ಲಿ ಜಿಪ್ಸಂ, ಸತುವಿನ ಸಲ್ಫೇಟ್ ಹಾಗೂ ಬೋರಾನ್, ಜೈವಿಕ ಗೊಬ್ಬರ ಬೀಜೋಪಚಾರ ಔಷಧಿಗಳನ್ನು ಶೇ. 50ರ ಸಹಾಯಧನದಲ್ಲಿ ರೈತರಿಗೆ ವಿತರಿಸಲಾಗುವುದು. ಭೂ ಚೇತನದಿಂದ ಶೇ. 22ರಷ್ಟು ಉತ್ಪಾದನೆ ಹೆಚ್ಚಾಗಲಿದೆ ಎಂದು ತಿಳಿಸಿದರು. ಶೇಂಗಾ ಬೆಳೆಯಲ್ಲಿ ಜಿಪ್ಸಂ ನೀಡಿಕೆ ಕಾರ್ಯ ಜರುಗಿದ್ದು, ಇದರಿಂದ ಉತ್ತಮ ಬೆಳೆ ನಿರೀಕ್ಷೆ ಸಾಧ್ಯ ಎಂದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮುಂದುವರಿಸಲಾಗಿದ್ದು, ಈ ಯೋಜನೆಯಡಿ ಬೆಳೆ ಸಾಲ ಪಡೆದ ರೈತರು, ಬಿತ್ತನೆ ಮಾಡಿದ 30 ದಿನದೊಳಗೆ ಅಥವಾ 31 ಆಗಸ್ಟ್, 2013ರೊಳಗಾಗಿ ಯಾವುದು ಮುಂಚೆಯೋ ಆ ಅವಧಿಯೊಳಗೆ ಬ್ಯಾಂಕಿಗೆ ಘೋಷಣೆ ಸಲ್ಲಿಸಬೇಕೆಂದು ರೈತರಿಗೆ ಸಲಹೆ ನೀಡಿದರು.
ಇದೇ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಂಕ್ರಣ್ಣ ಮಾತನವರ ಅವರು ಕೃಷಿ ಇಲಾಖೆ ಹೊರತಂದ ರಿಯಾಯಿತಿ ಬಿತ್ತನೆ ಬೀಜದ ಕರಪತ್ರವನ್ನು ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಜಿಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ಮುದ್ದಪ್ಪಳವರ, ಜಿಪಂ ಸದಸ್ಯರಾದ ಶಶಿಧರ ಹೊಣ್ಣನವರ, ಸರೋಜಾ ಆಡಿನ ಹಾಗೂ ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಶಿವಲಿಂಗಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement