ತಿಂಗಳಿಗೆ 30 ಕೆಜಿ ಅಕ್ಕಿ: ರಂಭಾಪುರಿ ಶ್ರೀ ಹೇಳಿಕೆಗೆ ಖಂಡನೆ
ಗಜೇಂದ್ರಗಡ: ಸರ್ಕಾರ ಬಡ ಕುಟುಂಬಗಳಿಗೆ ಪಡಿತರ ಮೂಲಕ ತಿಂಗಳಿಗೆ 30 ಕೆಜಿ ಅಗ್ಗದ ಅಕ್ಕಿಯನ್ನು ವಿತರಿಸುವುದರಿಂದ ಬಡವರಲ್ಲಿ ಆಲಸ್ಯ ಹೆಚ್ಚುತ್ತದೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್ವಾದಿ) ಸಿಪಿಐ(ಎಂ) ತೀವ್ರವಾಗಿ ಖಂಡಿಸುತ್ತದೆ ಎಂದು ಪುರಸಭೆ ಸದಸ್ಯ ಎಂ.ಎಸ್. ಹಡಪದ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶ್ರೀಗಳ ಇಂತಹ ಹೇಳಿಕೆ ಅವೈಚಾರಿಕವು ಮತ್ತು ದುಡಿಯುವ ಬಡಜನರ ವಿರೋಧಿ ಹೇಳಿಕೆ ಜತೆಗೆ ಅಸಂಬದ್ಧತೆಯಿಂದ ಕೂಡಿದೆ. ಇದನ್ನು ಸಿಪಿಐ(ಎಂ) ಖಂಡಿಸುತ್ತದೆ. ಭಾರತದ ಬಡತನದ ಕನಿಷ್ಠ ಅರಿವು ಮತ್ತು ಬಡವರ ಬಗ್ಗೆ ಕನಿಷ್ಠ ಅನುಕಂಪ ಇಲ್ಲದವರ ತರ್ಕವಿದು. ತಮಿಳುನಾಡಿನಲ್ಲಿ ಕಳೆದ 1-2 ವರ್ಷಗಳಿಂದ ಬಡವರಿಗೆ ಉಚಿತವಾಗಿಯೇ ಅಕ್ಕಿಯನ್ನು ಕೊಡುತ್ತಾರೆ. ಅದರ ಪರಿಣಾಮವಾಗಿ ತಮಿಳುನಾಡಿನ ಬಡ ಕೂಲಿಕಾರರೆಲ್ಲರೂ ಕೆಲಸ ಮಾಡುವುದನ್ನು ಬಿಟ್ಟು ದರಿದ್ರರಾಗಿ ಮನೆಗಳಲ್ಲಿಯೇ ಕುಳಿತುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಇಂದು ಕೂಲಿಕಾರ ಬಡವರ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಳ ಆಗಿರುವುದನ್ನೂ ಒಪ್ಪಿದರೂ ಅಗತ್ಯ ವಸ್ತುಗಳ ಬೆಲೆಗಳು ಯಾವ ಪ್ರಮಾಣದಲ್ಲಿ ಏರುತ್ತಿವೆ ಆ ಪ್ರಮಾಣದಲ್ಲಿ ಅವರ ಆದಾಯವಂತೂ ಏರುವುದಿಲ್ಲ.
ಅನ್ಯ ಮಾರ್ಗವಿಲ್ಲ: ಹೊಟ್ಟೆಗೆ ಬೇಕಾಗುವ ಅನ್ನವನ್ನು ಸರ್ಕಾರ ರೇಷನ್ ಮೂಲಕ ಒದಗಿಸಿದರೂ, ದುಬಾರಿಯಾಗಿರುವ ವಸತಿ, ಆರೋಗ್ಯ, ಶಿಕ್ಷಣ, ಪ್ರಯಾಣ ಮೊದಲಾದ ಮೂಲಗಳಿಗೆ ಹಣ ಜೋಡಿಸಲು ಬಡವರು ಕಷ್ಟಪಟ್ಟು ದುಡಿಯದೆ ಅನ್ಯ ಮಾರ್ಗವಿಲ್ಲ. ತಿಂಗಳಿಗೆ ಬೇಕಾಗುವ ಅಕ್ಕಿ ಸಿಕ್ಕಿದೆ ಎಂದಾಕ್ಷಣ ಅವರು ಸೋಮಾರಿಗಳಾಗಲು ಸಾಧ್ಯವಿಲ್ಲ. ಮೇಲಾಗಿ ಬಡವರು ನೀಡಿದ ತೆರಿಗೆ ಹಣವನ್ನು ತಮ್ಮ ಸುಕಲೋಲಪ್ತ ಜೀವನಕ್ಕಾಗಿ ಬಜೆಟ್ನಲ್ಲಿ ನೀಡಬೇಕು ಎಂದು ಕೇಳುತ್ತಿರುವುದು ಯಾವ ನ್ಯಾಯ. ದೇಶವನ್ನು ಆರ್ಥಿಕವಾಗಿ ಮುನ್ನಡೆಸುತ್ತಿರುವ ದುಡಿಯುವ ವರ್ಗಕ್ಕೆ ಆಹಾರದ ಭದ್ರತೆ ಇಂದು ಹೆಚ್ಚಾಗಿ ಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ. ಇದರ ಜತೆಗೆ ಸರ್ಕಾರ ರಾಜ್ಯದ ಎಲ್ಲ ಬಡವರಿಗೂ ಬಿಪಿಎಲ್ ಕಾರ್ಡನ್ನು ವಿತರಿಸಬೇಕು. ಪ್ರದೇಶವಾರು ಗುರಿಯಾಧಾರಿತ ಪಡಿತರ ಚೀಟಿ ವಿತರಿಸುವುದನ್ನು ಕೈಬಿಡಲು (ಮಾರ್ಕ್ಸ್ವಾದಿ) ಸಿಪಿಐ(ಎಂ) ಪಕ್ಷ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.