ಕಾಳಸಂತೆ ಮಾರಾಟಗಾರರ ವಿರುದ್ಧ ಕ್ರಮ: ಕೋಳಿವಾಡ
ರಾಣಿಬೆನ್ನೂರು: ಮಾರುಕಟ್ಟೆಯಲ್ಲಿ ಗೊಬ್ಬರದ ಅಭಾವವಿದೆ ಎಂದು ಕಾಳಸಂತೆಯಲ್ಲಿ ಹೆಚ್ಚಿಗೆ ಬೆಲೆಯಲ್ಲಿ ಮಾರಾಟ ಮಾಡುವ ವರ್ತಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಶಾಸಕ ಕೆ.ಬಿ. ಕೋಳಿವಾಡ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ತಾಲೂಕಿನ ರಸಗೊಬ್ಬರ ಮತ್ತು ಬೀಜ ಮಾರಾಟಗಾರರ ಸಂಘ, ವ್ಯವಸಾಯ ಸೇವಾ ಸಹಕಾರಿ ಸಂಘಗಳ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಸಗೊಬ್ಬರ ಮಾರಾಟಗಾರರು ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗನಗೌಡ ಮಾತನಾಡಿ, ತಾಲೂಕಿನ ರೈತರು ಪ್ರಸಕ್ತ ವರ್ಷದ ಬೆಳೆ ವಿಮೆ ಕಂತು ಪಾವತಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಬೆಳೆ ವಿಮೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ಹೇಳಿದರು. ಕಳೆದ ಸಾಲಿನಲ್ಲಿ ಬೆಳೆ ವಿಮೆ ತುಂಬಿದ ರು. 121 ಲಕ್ಷ ಬೆಳೆ ವಿಮೆ ಪರಿಹಾರ ಬಂದಿದೆ ಎಂದರು.
ತಹಸೀಲ್ದಾರ್ ಕೆ.ಎಚ್. ಶಿವಕುಮಾರ, ಜಿಲ್ಲಾ ಪಂಚಾಯ್ತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ಮುದ್ದಪ್ಪಳವರ, ತಾಲೂಕು ರಸಗೊಬ್ಬರ ಹಾಗೂ ಬೀಜ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ, ಕೃಷಿ ಅಧಿಕಾರಿ ಜಿ.ಎಂ. ಬತ್ತಿಕೊಪ್ಪ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ, ಇತರರು ಉಪಸ್ಥಿತರಿದ್ದರು.
--