ಧರೆಗಿಳಿದ ಮಳೆ: ರೈತರ ಚಿತ್ತ ಹೊಲದತ್ತ
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 27
ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದರಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಬಿತ್ತನೆಯನ್ನು ರೈತರು ಪ್ರಾರಂಭಿಸಿದ್ದು, ಮಳೆರಾಯ ಕೃಷಿ ಸಮುದಾಯಕ್ಕೆ ಚೈತನ್ಯ ನೀಡಿದ್ದಾನೆ.
ತಾಲೂಕಿನಲ್ಲಿ ಒಟ್ಟು 54,760 ಹೆಕ್ಟೇರ್ ಪ್ರದೇಶ ಬಿತ್ತನೆಯಾಗುವ ನಿರೀಕ್ಷೆಯಿದೆ. ಅದರಲ್ಲಿ ಏಕದಳ ಧಾನ್ಯ 31,600 ಹೆಕ್ಟೇರ್, ದ್ವಿದಳ ಧಾನ್ಯ 1,615 ಹೆಕ್ಟೇರ್. ಎಣ್ಣೆಕಾಳು ಬೆಳೆಗಳು 4,145 ಹೆಕ್ಟೇರ್, ಹತ್ತಿ 15,500 ಹೆಕ್ಟೇರ್, ಕಬ್ಬು 1,900 ಹೆಕ್ಟೇರ್ ಇದ್ದು, ತಾಲೂಕಿನ ಹಾವೇರಿ, ದೇವಿಹೊಸೂರು, ಕುರುಬಗೊಂಡ, ಕರ್ಜಗಿ, ಅಗಡಿ, ಕನವಳ್ಳಿ, ಗುತ್ತಲ, ಹೊಸರಿತ್ತಿ ಮತ್ತು ಬಸಾಪುರದಲ್ಲಿ ಒಟ್ಟು 9 ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.
ಸದರಿ ಬಿತ್ತನೆ ಕ್ಷೇತ್ರಕ್ಕೆ ಬೇಕಾಗುವ ಬಿತ್ತನೆ ಬೀಜಗಳಿಗಾಗಿ ಒಟ್ಟು 7004 ಕ್ವಿಂಟಲ್ ಬೇಡಿಕೆ ಸಲ್ಲಿಸಲಾಗಿದ್ದು, ಲಭ್ಯತೆಯ ಬೀಜಗಳ ವಿವರ ಇಂತಿದೆ.
ಬೀಜ ದಾಸ್ತಾನು: ಗೋವಿನ ಜೋಳ 3,850 ಕ್ವಿಂಟಲ್, ಸೂರ್ಯಕಾಂತಿ 10 ಕ್ವಿಂಟಲ್, ಬತ್ತ 213 ಕ್ವಿಂಟಲ್, ಸೋಯಾ ಅವರೆ 1,575 ಕ್ವಿಂಟಲ್, ಶೇಂಗಾ 800 ಕ್ವಿಂಟಲ್. ತೊಗರಿ 179 ಕ್ವಿಂಟಲ್. ಹೆಸರು 189 ಕ್ವಿಂಟಲ್ ಈಗಾಗಲೇ ಬೀಜ ಮಾರಾಟ ಕೇಂದ್ರಗಳಲ್ಲಿ ಸೋಯಾ ಅವರೆ 1301.61 ಕ್ವಿಂಟಲ್ ದಾಸ್ತಾನು ಮಾಡಲಾಗಿದ್ದು, ಉಳಿದ ಬೆಳೆಗಳ ಬಿತ್ತನೆ ಬೀಜ ದಾಸ್ತಾನು ಮಾಡಲಾಗುತ್ತಿದೆ.
ರಸಗೊಬ್ಬರ ದಾಸ್ತಾನು: ಪ್ರಸಕ್ತ ಮುಂಗಾರು ಹಂಗಾಮಿಗೆ 16,960 ಮೆಗಾ ಟನ್ ಗೊಬ್ಬರ ಬೇಡಿಕೆ ಇದ್ದು, ಇದರಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ರಸಗೊಬ್ಬರ ಬೇಡಿಕೆಯು 3,931 ಮೆಗಾ ಟನ್ ಇದೆ. ಈಗಾಗಲೇ 3,396 ಮೆಗಾ ಟನ್‌ನಷ್ಟು ರಸಗೊಬ್ಬರವನ್ನು ಎಲ್ಲಾ ಪಿಕೆಪಿಎಸ್ ಮತ್ತು ಖಾಸಗಿ ಮಾರಾಟಗಾರರಿಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ 470 ಮೆಗಾ ಟನ್ ಮಾರಾಟವಾಗಿ 2,899 ಮೆಗಾ ಟನ್ ರಸಗೊಬ್ಬರ ತಾಲೂಕಿನಲ್ಲಿ ಭೂ-ಚೇತನ ಯೋಜನೆ ಮುಂದುವರೆದಿದ್ದು, 2013ರ ಮುಂಗಾರು ಹಂಗಾಮಿಗೆ ಒಟ್ಟು 46,035 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿ ಹೊಂದಲಾಗಿದೆ.
ಶೇ. 50ರ ರಿಯಾಯಿತಿ: ಸಂಗ್ರಹವಾದ ಗೊಬ್ಬರದಲ್ಲಿ ಪ್ರಮುಖ ಬೆಳೆಗಳಾದ ಗೋವಿನ ಜೋಳ, ಸೋಯಾ ಅವರೆ, ಸಂಕರಣ ಹತ್ತಿ, ಶೇಂಗಾ ಬೆಳೆಗಳನ್ನು ಒಳಗೊಂಡಿರುತ್ತದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ ಲಘು ಪೋಷಕಾಂಶಗಳಾದ ಜಿಂಕ್ ಸಲ್ಪೇಟ್, ಜಿಪ್ಸಂ, ಬೋರಾನ್ ಹಾಗೂ ಜೈವಿಕ ಗೊಬ್ಬರಗಳನ್ನು ಶೇ. 50ರ ರಿಯಾಯತಿ ಎಲ್ಲಾ ಬೀಜ ಮಾರಾಟ ಕೇಂದ್ರಗಳಲ್ಲಿ ವಿತರಿಸಲಾಗುವುದು. ಇದರ ಉಪಯೋಗವನ್ನು ರೈತರು ಪಡೆದುಕೊಳ್ಳಲು ವಿನಂತಿಸಲಾಗಿದೆ. ಲಘು ಪೋಷಕಾಂಶಗಳ ಬಳಕೆಯಿಂದ ಬೆಳೆಯ ಬೆಳವಣಿಗೆಯು ಉತ್ತಮವಾಗುವುದರ ಜತೆಗೆ ಇಳುವರಿ ಹೆಚ್ಚುವುದು. ಅಲ್ಲದೇ ರೈತರು ಬೀಜಗಳನ್ನು ನೇರವಾಗಿ ಬಿತ್ತನೆ ಮಾಡದೆ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಮುಂದೆ ಬೆಳೆಗಳಿಗೆ ಆಗುವ ಹಾನಿಯನ್ನು ತಪ್ಪಿಸಬಹುದೆಂದು ಹಾವೇರಿಯ ಜಂಟಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.