ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಾಸಕರ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಿ

Lingaraj Badiger
Updated On : 28 May 2013, 11:31 am

ಹಿರೇಕೆರೂರು: ಇಂದಿನ ಕಲುಷಿತ ರಾಜಕೀಯ ವಾತಾವರಣದಲ್ಲಿ ಸರಳ, ಸಜ್ಜನ ವ್ಯಕ್ತಿ ಯು.ಬಿ. ಬಣಕಾರ ಅವರು ವಿಧಾನಸಭೆಗೆ ಆಯ್ಕೆಯಾಗಿರುವುದು ನಮ್ಮೆಲ್ಲರ ಸುದೈವವಾಗಿದೆ. ಗ್ರಾಮದಲ್ಲಿ ಚುನಾವಣೆ ಸಂದರ್ಭ ಮಾತ್ರ ರಾಜಕೀಯ ಮಾಡಿ, ಎಲ್ಲರೂ ಒಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು ಎಂದು ಜಂಗಮ ಕ್ಷೇತ್ರ ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿಗಳ ಮಠದ ಬಾವಿ ಪೀಠಾಧಿಪತಿ ಮಹಾಂತ ಶ್ರೀಗಳು ಹೇಳಿದರು. ತಾಲೂಕಿನ ಮಾಸೂರು ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ವತಿಯಿಂದ ನೂತನ ಶಾಸಕ ಯು.ಬಿ. ಬಣಕಾರ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜನಪ್ರತಿನಿಧಿಗಳು ಸ್ವಾರ್ಥ, ವೈಯಕ್ತಿಕ ಹಿತಸಾಧನೆ ಬದಿಗಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತುಳಿತಕ್ಕೊಳಗಾದವರನ್ನು ಮೇಲೆತ್ತಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಧ್ವನಿ ಕೊಡುವ ಕೆಲಸ ಮಾಡಬೇಕು.ನೂತನ ಶಾಸಕರು ತಾಲೂಕು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ಮಾಡಿದರು. ಶಾಸಕ ಯು.ಬಿ. ಬಣಕಾರ ಮಾತನಾಡಿ, ತಾಲೂಕಿನ ಜನತೆಯ ಪ್ರೀತಿ, ಅಭಿಮಾನಕ್ಕೆ ಋಣಿಯಾಗಿ ಕಾರ್ಯನಿರ್ವಹಿಸುತ್ತೇನೆ. ಕರವೇಯಿಂದ ನನಗೆ ಸನ್ಮಾನ ಮಾಡುವ ಮೂಲಕ ಮತ್ತಷ್ಟು ಋಣಭಾರ ಹೆಚ್ಚಿಸಲಾಗಿದೆ. ಸರ್ಕಾರದ ಯೋಜನೆಗಳು ಮಧ್ಯವರ್ತಿಗಳ ಪಾಲಾಗದಂತೆ ನೇರವಾಗಿ ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು. ತಾಲೂಕಿನ ಎಲ್ಲ ಗ್ರಾಮದ ಜನತೆ ಯಾವುದೇ ಮುಖಂಡರನ್ನು ಕರೆತರದೇ ನೇರ ನನ್ನ ಬಳಿಗೆ ಬಂದು ತಮ್ಮ ಸಮಸ್ಯೆ ತಿಳಿಸಿದಾಗ ಪಕ್ಷ ಪಂಗಡ ಮರೆತು ಸಮಸ್ಯೆ ನಿವಾರಿಸಲು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಹೇಳಿದ ಶಾಸಕ ಬಣಕಾರ, ರೈತರಿಗೆ ಸಕಾಲಕ್ಕೆ ಪಹಣಿ ಪತ್ರ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಗ್ರಾಪಂ ಅಧ್ಯಕ್ಷ ಚನ್ನಬಸಪ್ಪ ರಾಮಜ್ಜನವರ, ಕೆಜೆಪಿ ತಾಲೂಕಾಧ್ಯಕ್ಷ ಮಹೇಶ ಗುಬ್ಬಿ, ಪಟ್ಟಣ ಪಂಚಾಯ್ತಿ ಸದಸ್ಯ ಮಹೇಂದ್ರ ಬಡಳ್ಳಿ, ಮಲ್ಲನಗೌಡ ಪುಟ್ಟಪ್ಪಗೌಡ್ರ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಸಿದ್ದಪ್ಪ ಗುಡದಪ್ಪನವರ, ರಮೇಶ ನ್ಯಾಮತಿ, ಮುಖ್ಬುಲ್‌ಸಾಬ್ ಬಾಳಿಕಾಯಿ, ವೆಂಕಟೇಶ ನಾಡರ, ವೆಂಕಟೇಶ ರೇವಣ್ಣಕರ ಕರವೇ ಗ್ರಾಮ ಘಟಕದ ಅಧ್ಯಕ್ಷ ಮುರಗಯ್ಯ ಹಿರೇಮಠ, ಉಪಾಧ್ಯಕ್ಷ ಮಾಲತೇಶ ಪೂಜಾರ, ಕಾರ್ಯದರ್ಶಿ ರವಿ ಕನ್ನಕ್ಕನವರ, ಸಾಜೀದ್ ಅಂಗಡಿ, ಹನುಮಂತಪ್ಪ ಶಿಂಧೋಳ, ಅಬ್ದುಲ್‌ವಾಹಿದ್ ಹುಬ್ಬಳ್ಳಿ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement