ಆತ್ಮ ವಂಚನೆಗಿಂತ ಆತ್ಮಾವಲೋಕನ ಒಳ್ಳೆಯದು
ಹಿರೇಕೆರೂರ: ನಾವು ಆತ್ಮವಂಚನೆ ಮಾಡಿಕೊಳ್ಳದೇ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳುವುದು ರಾಜಕೀಯ ಭವಿಷ್ಯಕ್ಕೆ ಒಳ್ಳೆಯದು. ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಕೆಲ ಮುಖಂಡರು ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ಮುಟ್ಟಿಸುವಲ್ಲಿ ವಿಫಲರಾದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಮಂತ್ರಿಯನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದರು. ಅದರಿಂದ ವಂಚಿತನಾಗಬೇಕಾಯಿತು ಎಂದು ಮಾಜಿ ಶಾಸಕ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ತಮ್ಮ ನಿವಾಸದ ಆವರಣದಲ್ಲಿ ಸೋಮವಾರ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಆತ್ಮಾವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ಕಾಂಗ್ರೆಸ್ ಕೆಲ ಮುಖಂಡರು ಹಾಗೂ ಕಾರ್ಯಕರ್ತರು ಮೈಮರೆತಿದ್ದರಿಂದ ಮತ್ತು ವಿರೋಧಿಗಳ ತಂತ್ರಗಾರಿಕೆಯಿಂದಾಗಿ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ನನ್ನಿಂದ ಉಪಯೋಗ ಪಡೆದ ಕೆಲವರು ದೂರವಾದರೂ ನಾನು ಕಳೆದ ಸಾರಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದೇನೆ. ತಮ್ಮನ್ನು ಬೆಂಬಲಿಸಿದವರನ್ನು ಯಾವುದೇ ಸಂದರ್ಭದಲ್ಲಿ ಕೈಬಿಡುವುದಿಲ್ಲ. ನಾನು ಜನತೆ ತೀರ್ಪಿಗೆ ಬದ್ಧನಾಗಿದ್ದು, ಯಾರೊಂದಿಗೂ ದ್ವೇಷ ಸಾಧಿಸುವುದಿಲ್ಲ ಎಂದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಶಿವನಗೌಡ್ರ, ಎಸ್.ಕೆ. ಕರಿಯಣ್ಣನವರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಮಂಜುಳಾ ಬಾಳಿಕಾಯಿ, ತಾಪಂ ಸದಸ್ಯ ಆರ್.ಎನ್. ಗಂಗೋಳ, ಪಪಂ ಸದಸ್ಯರಾದ ಮಹ್ಮದ್ಹುಸೇನ್ ವಡ್ಡಿನಕಟ್ಟಿ, ಕುಸುಮಾ ಬಣಕಾರ, ಮುಖಂಡರಾದ ಡಿ.ಸಿ. ಪಾಟೀಲ, ರಮೇಶ ಮಡಿವಾಳರ, ಬಿ.ಎನ್. ಬಣಕಾರ, ಎಸ್.ಬಿ. ತಿಪ್ಪಣ್ಣನವರ, ಬಿದ್ದಾಡೇಪ್ಪ ಉಕ್ಕುಂದ, ಪೊಮ್ಯಾ ನಾಯ್ಕ ಲಮಾಣಿ, ಶ್ರೀನಿವಾಸ ಮಿಟ್ಟಿ, ರಾಮಣ್ಣ ವಾಲ್ಮೀಕಿ, ಶೇಖರಪ್ಪ ಶಿರಗಂಬಿ, ಅಬ್ದುಲ್ಖಾದರ ಲೋಹಾರ, ನನ್ನುಸಾಬ್ ಕಚವಿ, ಬಿ.ಎಸ್. ಬಂಗೇರ, ಪುಟ್ಟೇಶ ಗೊರವರ, ರುದ್ರಗೌಡ ಹಳ್ಳಪ್ಪಗೌಡ್ರ ಇದ್ದರು.