ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 28
ಮಂಗಳವಾರ ಸಂಜೆ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಪಟ್ಟಣದ ವ್ಯಾಪ್ತಿಯಲ್ಲಿ ಸುರಿದ ರಭಸದ ಮಳೆಗೆ ಮುಖ್ಯರಸ್ತೆ, ಸುಭಾಸ್ ನಗರ, ಶಿವಪುರ ಬಡಾವಣೆ, ವಾಲ್ಮೀಕಿ ಸಂಘ ಸೇರಿದಂತೆ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಳಿಸಿತು.
ಕದರಮಂಡಲಗಿ ಹೋಗುವ ರಸ್ತೆಯ ಶಿವಪುರ ಬಡಾವಣೆ ಬಳಿ ಮತ್ತು ಸುಭಾಸ್ ನಗರದಲ್ಲಿ ಮಳೆ ನೀರಿನಿಂದ ಚರಂಡಿಗಳು ತುಂಬಿದ ಹಿನ್ನೆಲೆಯಲ್ಲಿ ಮಳೆ ನೀರು ರಸ್ತೆ ಮೇಲೆಲ್ಲಾ ಹರಿಯಿತು ಇದರಿಂದ ಕೆಲಕಾಲ ಸಂಚಾರಕ್ಕೆ ವ್ಯತ್ಯಯವಾಯಿತು.
ಇದೇ ರಸ್ತೆಯ ಅಕ್ಕಪಕ್ಕದಲ್ಲಿರುವ ಕೆಲ ಮನೆಗೆ ನುಗ್ಗಿದ್ದು ಪಾತ್ರೆ ಪಗಡೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಾಪಾಡಿಕೊಳ್ಳಲು ಹರಸಾಹಸ ಪಡಬೇಕಾಯಿತು.
ಮುಖ್ಯರಸ್ತೆಯಲ್ಲೂ ನೀರು: ಮುಖ್ಯರಸ್ತೆಯ ಎರಡೂ ಪಕ್ಕದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ, ತಗ್ಗು ಪ್ರದೇಶದಲ್ಲಿರುವ ಕೆಲ ಅಂಗಡಿಗಳಿಗೆ ನುಗ್ಗಿದ ಪರಿಣಾಮ ಕೆಲಕಾಲ ವ್ಯವಹಾರ ಸ್ಥಗಿತಗೊಂಡಿತಲ್ಲದೇ ಅಂಗಡಿಗಳ ಮಾಲೀಕರು ನೀರು ತುಂಬಿ ಚೆಲ್ಲುತ್ತಿರುವ ದೃಶ್ಯಗಳು ಕಂಡು ಬಂದವು. ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆಗಳ ನಡುವಿನ ಹಗ್ಗಜಗ್ಗಾಟದಿಂದಾಗಿ ಮುಖ್ಯರಸ್ತೆಯಲ್ಲಿ ಕಾಲುವೆಗಳು ನಿರ್ಮಾಣವಾಗಿಲ್ಲ.
ಸಂಜೆ ಸುರಿದ ಭಾರಿ ಮಳೆಗೆ ಅಂಗಡಿಯಲ್ಲಿ ದಾಸ್ತಾನು ಮಾಡಿದ್ದ ಸಾಮಾನು ಸರಂಜಾಮುಗಳನ್ನು ಕಾಪಾಡಿಕೊಳ್ಳಲು ಹರಸಾಹ ಸಪಟ್ಟರು.
ಮುಖ್ಯರಸ್ತೆಯಲ್ಲಿ ಚರಂಡಿ ನಿರ್ಮಾಣಕ್ಕೆ ಸ್ಥಳೀಯ ಪುರಸಭೆಯು ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಕಡೆಗೆ ಕೈತೋರುತ್ತಿರುವುದು ವಿಪರ್ಯಾಸ.
ಕಾಲುವೆಗಳಿಲ್ಲ; ಕದರಮಂಡಲಗಿ ರಸ್ತೆಯ ಎರಡೂ ಬದಿಗಳಲ್ಲಿ ಕಾಲುವೆಯಿಲ್ಲದೇ ಪ್ರತಿವರ್ಷ ಮಳೆಗಾಲದಲ್ಲಿ ಇಲ್ಲಿನ ಮನೆಗಳಿಗೆ ನೀರು ನುಗ್ಗುತ್ತದೆ.
ಕಾಲುವೆ ನಿರ್ಮಿಸುವಂತೆ ಹಲವಾರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ನೀರು ನುಗ್ಗಿದ ಸಂದರ್ಭದಲ್ಲಿ ಜೀವ ಭಯದಿಂದ ಜನ ಬದುಕಬೇಕಾಗಿದೆ.
ಸದರಿ ರಸ್ತೆಯು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದು ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಕಾಲುವೆಗಳನ್ನು ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಶಂಭು ಮಠದ ಆಗ್ರಹಿಸುತ್ತಾರೆ.