ಹೊಸ ಶೈಕ್ಷಣಿಕ ವರ್ಷಕ್ಕೆ ಸಕಲ ಸಿದ್ಧತೆ
ಹಾನಗಲ್ಲ: ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸುಮಾರು 40 ಸಾವಿರ ಹೊಸ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಈ ಬಾರಿ ಪ್ರವೇಶ ಪಡೆಯಲಿದ್ದು, 257 ಪ್ರಾಥಮಿಕ ಹಾಗೂ 56 ಪ್ರೌಢಶಾಲೆಗಳು ನೂತನ ಶೈಕ್ಷಣಿಕ ವರ್ಷಕ್ಕಾಗಿ ಸಜ್ಜಾಗುತ್ತಿವೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಾನಗಲ್ಲ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ಹೊಸ ಶೈಕ್ಷಣಿಕ ವರ್ಷಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿವೆ. ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಕರೆದು ಇಲಾಖೆಯ ನಿಯಮದಡಿ ನಿರ್ವಹಿಸಬೇಕಾದ ಕಾರ್ಯಕ್ರಮಗಳ ಮಾಹಿತಿ ನೀಡಲಾಗಿದೆ.
ಹೊಸ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೇ. 90ರಷ್ಟು ಪಠ್ಯಪುಸ್ತಕಗಳನ್ನೂ ಈಗಾಗಲೆ ಆಯಾ ಶಾಲೆಗಳಿಗೆ ತಲುಪಿಸಲಾಗಿದೆ. ಉಳಿದಂತೆ ಎಲ್ಲವೂ ಸರಿಯಾಗಿದೆ ಆದರೆ ತಾಲೂಕಿನಲ್ಲಿ ಶಿಕ್ಷಕರ ಕೊರತೆ ನೀಗಬೇಕಾಗಿದೆ, ವರ್ಗಾವಣೆ ಸಂದರ್ಭದಲ್ಲಿ ಶಿಕ್ಷಕರ ಸಮಸ್ಯೆಗೆ ಪರಿಹಾರ ಸಿಗಲೂಬಹುದು ಎಂದು ತಿಳಿಸಿದರು.
ಹೊಸ ಸಮವಸ್ತ್ರ ಬರಬೇಕಿದೆ: ಹಾನಗಲ್ಲ ತಾಲೂಕಿನಲ್ಲಿ 223 ಸರ್ಕಾರಿ ಪ್ರಾಥಮಿಕ ಶಾಲೆಗಳು, 8 ಅನುದಾನಿತ, 26 ಅನುದಾನ ರಹಿತ ಸೇರಿದಂತೆ ಒಟ್ಟು 257 ಪ್ರಾಥಮಿಕ ಶಾಲೆಗಳಿವೆ. ತಾಲೂಕಿನಲ್ಲಿ 1106 ಶಿಕ್ಷಕರ ಹುದ್ದೆ ಮಂಜೂರಾಗಿವೆ. ಆದರೆ ಕೇವಲ 927 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, 179 ಶಿಕ್ಷಕರ ಕೊರತೆ ಪ್ರಾಥಮಿಕ ಶಾಲೆಗಳದ್ದಾಗಿದೆ. 29 ಸರ್ಕಾರಿ ಪ್ರೌಢಶಾಲೆಗಳು, 19 ಅನುದಾನಿತ ಶಾಲೆಗಳು, 4 ಅನುದಾನ ರಹಿತ ಪ್ರೌಢಶಾಲೆಗಳು, 4 ಸಮಾಜ ಕಲ್ಯಾಣ ಇಲಾಖೆಯ ಪ್ರೌಢಶಾಲೆಗಳು ಸೇರಿದಂತೆ ಇಲ್ಲಿ ಒಟ್ಟು 56 ಪ್ರೌಢಶಾಲೆಗಳಿವೆ.
ಸರ್ಕಾರಿ ಪ್ರೌಢಶಾಲೆಗಳಲ್ಲಿ 233 ಮಂಜೂರಿ ಹುದ್ದೆಗಳಿವೆ, ಆದರೆ 195 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 38 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳಲ್ಲಿ ಕೆಲವೆಡೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಶಿಕ್ಷಕರನ್ನು ಒದಗಿಸುತ್ತಿದ್ದು, ಈ ಬಾರಿ ಹೆಚ್ಚು ಹಾಗೂ ತೀರ ಅಗತ್ಯವಿರುವಲ್ಲಿ ಶಿಕ್ಷಕರನ್ನು ಒದಗಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಜನಜಾಗೃತಿ: ಹೊಸ ವರ್ಷದ ಶಾಲಾ ಆರಂಭಕ್ಕೆ ಎಲ್ಲ ಸಿದ್ಧತೆ ಮಾಡಲಾಗಿದೆ. ಗ್ರಾಮಗಳಲ್ಲಿ ಜನಜಾಗೃತಿಗಾಗಿ ಡಂಗುರ ಸಾರಿಸಿ, ದಾಖಲಾತಿಗೆ ಬೇಕಾಗುವ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಮೇ 30ರಿಂದ ಮಾರ್ಚ್ 30ರ ವರೆಗೆ ಮಾಡಬೇಕಾದ ಎಲ್ಲ ಶಾಲಾ ಕಾರ್ಯಕ್ರಮಗಳ ಮಾಹಿತಿಯನ್ನು ಶಿಕ್ಷಕರಿಗೆ ನೀಡಲಾಗಿದೆ. 'ತಿಂಗಳ ತಿರುಳು' ಕಾರ್ಯಕ್ರಮದಂತೆ ಎಲ್ಲವನ್ನೂ ನಿರ್ವಹಿಸಲು ಸೂಚಿಸಲಾಗಿದೆ. ಮೇ 30ರಿಂದ ಜೂನ್ 8ರ ವರೆಗೆ ಮಿಂಚಿನ ಸಂಚಾರವೂ ನಡೆಯಲಿದೆ.
ಶಿಕ್ಷಕರು ಸಕಾಲಕ್ಕೆ ಶಾಲೆಗೆ ಬಂದು ತಮ್ಮ ಕಾರ್ಯ ನಿರ್ವಹಿಸಬೇಕು ಎಂಬ ಕಟ್ಟಪ್ಪಣೆಯನ್ನೂ ಮಾಡಲಾಗಿದೆ. 276 ಶಾಲೆಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮವಿದ್ದು, 32 ಸಾವಿರ ಫಲಾನುಭವಿ ಮಕ್ಕಳಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು. ಸಮನ್ವಯಾಧಿಕಾರಿ ಸಿ.ಪಿ. ಮೂಲಿಮನಿ, ಎ.ವಿ. ಹನುಮಾಪುರ ಇದ್ದರು.