ಏತ ನೀರಾವರಿಗೆ ನೂರೆಂಟು ವಿಘ್ನ
- ಶಿವಾನಂದ ಮಲ್ಲನಗೌಡರ
ಕನ್ನಡಪ್ರಭ ವಾರ್ತೆ, ಬ್ಯಾಡಗಿ ಮೇ 29
ಆರಂಭದಿಂದಲೇ ನೂರಾರು ವಿಘ್ನಗಳೊಂದಿಗೆ ಕುಂಟುತ್ತಾ ಸಾಗಿರುವ ರೈತರ ಮಹತ್ವಾಕಾಂಕ್ಷಿ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ರಾಜಕೀಯ ಇಚ್ಛಾಶಕ್ತಿ ಕೊರತೆ ಎದುರಿಸುತ್ತಿದೆ.
ಯೋಜನೆ ಕಾಮಗಾರಿ ಆರಂಭದ ಬಳಿಕ 5 ಮುಖ್ಯಮಂತ್ರಿಗಳಾಗಿ ಹೋದರೂ ಕೃಷಿಭೂಮಿಗೆ ನೀರು ಕೊಡಲು ಸಾಧ್ಯವಾಗಿಲ್ಲ. ಇದೀಗ 6ನೇ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ್ದು ಇನ್ನಾದರೂ ಈ ಭಾಗದ ರೈತರ ಬಹುದಿನದ ಆಸೇ ಈಡೇರಬಹುದೇ.. ಎಂಬ ನಿರೀಕ್ಷೆಯಲ್ಲಿದ್ದಾರೆ.
ನದಿ ನೀರು ಲಭ್ಯವಿಲ್ಲದ ಪ್ರದೇಶಗಳಲ್ಲಿನ ಕೃಷಿಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ರು. ಕೊಟ್ಯಂತರ ಹಣವ್ಯಯಿಸಿ ಏತ ನೀರಾವರಿ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಆದರೆ ಮಂಜೂರಾದ ಇಂಥ ಬಹಳಷ್ಟು ಯೋಜನೆಗಳು ಕೃಷಿಭೂಮಿಗಳಿಗೆ ಸಮರ್ಪಕವಾಗಿ ನೀರೊದಗಿಸುವಲ್ಲಿ ವಿಫಲವಾಗಿದ್ದು ಗುಡ್ಡದಮಲ್ಲಾಪುರ ಯೋಜನೆ ಇದಕ್ಕೆ ಸಹ ಹೊರತಾಗಿಲ್ಲ.
ಇಚ್ಛಾಶಕ್ತಿ ಕೊರತೆ: ಯೋಜನೆಗಳು ಸಾಕಾರಗೊಳ್ಳಬೇಕಾದರೆ ರಾಜಕೀಯ ಇಚ್ಛಾಶಕ್ತಿಯೂ ಅನಿವಾರ್ಯ. ಇತ್ತೀಚೆಗೆ 2008ರಲ್ಲಿ ಆರಂಭವಾದ ಶಿಗ್ಗಾಂವಿ ಏತ ನೀರಾವರಿ ಕೃಷಿಭೂಮಿಗೆ ನೀರುಣಿಸುವಲ್ಲಿ ಯಶಸ್ವಿಯಾದರೆ ಕಳೆದ 2005ರಲ್ಲಿಯೇ ಆರಂಭವಾದ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯು ಈವರೆಗೂ ನೀರೊದಗಿಸಿಲ್ಲ. ಜಿಲ್ಲೆಯಲ್ಲೇ ನೀರಾವರಿ ಸಚಿವರಿದ್ದರೂ ಯೋಜನೆಯನ್ನು ಪೂರ್ಣಗೊಳಿಸಲಿಲ್ಲ. ಹಾಗಿದ್ದರೆ ಇಲ್ಲಿನ ರೈತರು ಮಾಡಿರುವ ತಪ್ಪಾದರೂ ಏನು?
22 ಗ್ರಾಮದ ರೈತರಿಗೆ ನೀರು ಯೋಜನೆಯಡಿ ವರದಾ ನದಿಯಿಂದ 1 ಟಿಎಂಸಿ ನೀರು ಉಪಯೋಗಿಸಿ ತಾಲೂಕಿನ 22 ಗ್ರಾಮಗಳ ಸುಮಾರು 13 ಸಾವಿರ ಎಕರೆ ಕೃಷಿಭೂಮಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿತ್ತು. ಯೋಜನೆ ಪೂರ್ಣಗೊಂಡು ನಮ್ಮ ಕೃಷಿಭೂಮಿಗೆ ನೀರು ಸಿಗಬಹುದು ಎಂದು ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತರ ಮುಂದೆ ಇದೀಗ ನೂರೆಂಟು ಸಮಸ್ಯೆಗಳು.
2003ಕ್ಕೆ ಮಂಜೂರ ಅಂದಾಜು ರು. 60 ಕೋಟಿ ವೆಚ್ಚದಲ್ಲಿ ಆರಂಭವಾದ ಈ ಯೋಜನೆಗೆ 2003 ಅ. 23ರಂದು ಆಡಳಿತಾತ್ಮಕ ಮಂಜೂರಾತಿ ನೀಡಿದ ಸರ್ಕಾರದಿಂದ ತಾಂತ್ರಿಕ ಅನುಮೋದನೆ ದೊರೆಯಲು 2 ವರ್ಷ ಕಾಯಬೇಕಾಯಿತು. 2005 ಮೇ 11ಕ್ಕೆ ರು. 56 ಕೋಟಿಗಳಿಗೆ ತಾಂತ್ರಿಕ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭವಾಗಿದ್ದು ಮಾತ್ರ 2005 ಸೆ. 30ರಂದು.
ಕಾಮಗಾರಿ ಸ್ಥಗಿತ: 20 ತಿಂಗಳಲ್ಲಿ ಪೂರೈಸುವ ಕರಾರಿಗೊಳಪಟ್ಟು ರು. 46 ಕೋಟಿಗೆ ಗುತ್ತಿಗೆ ಪಡೆದ ಹೈದರಾಬಾದ್ ಮೂಲದ ಕೋರ್ಮಂಡಲ್ ಪ್ರೆಸ್ಕ್ರೀಟ್ ಸಂಸ್ಥೆ ಕಾಮಗಾರಿ ಆರಂಭಿಸಿತು. ಆದರೆ ಗಟ್ಟಿಶಿಲೆ ದೊರೆಯುತ್ತಿಲ್ಲ. ಬಳಕೆ ಮಾಡುವ ವಸ್ತುಗಳ ಬೆಲೆ ಹೆಚ್ಚಾಗಿವೆ ಎನ್ನುವ ಕಾರಣ ನೀಡಿ ಗುತ್ತಿಗೆ ಹಣ ಪರಿಷ್ಕರಿಸುವಂತೆ ಮನವಿಪತ್ರ ನೀಡಿ ಕಾಮಗಾರಿ ಸ್ಥಗಿತಗೊಳಿಸಿತು. ಇದರಿಂದ 2006ಕ್ಕೆ ಪೂರ್ಣಗೊಳ್ಳಬೇಕಾಗಿದ್ದ ನೀರಾವರಿ ಯೋಜನೆ ಅರ್ಧಕ್ಕೆ ಸ್ಥಗಿತಗೊಂಡಿತು.
ಅರ್ಧಕ್ಕೆ ನಿಂತ ಕಾಮಗಾರಿಗೆ ರು. 115 ಕೋಟಿ ಹೆಚ್ಚುವರಿ ಅನುದಾನ ಒದಗಿಸಿದ ಅಂದಿನ ಸರ್ಕಾರ 2010ರಲ್ಲಿ ರು. 36 ಕೋಟಿ ವೆಚ್ಚದ ಪ್ರಥಮ ಹಂತದ ಕಾಮಗಾರಿಗೆ ಮರುಚಾಲನೆ ನೀಡಿತು. ಯೋಜನೆಗೆ 8 ವರ್ಷಗಳು ಗತಿಸಿವೆ. ಆದರೆ ರೈತರ ಕೃಷಿಭೂಮಿಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಭಾರತದಲ್ಲಿ ರೈತರು ಪ್ರತಿಯೊಂದನ್ನೂ ಹೋರಾಟ ಮಾಡಿಯೇ ಪಡೆಯಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುವುದು ದುರಂತ. ಇನ್ನಾದರೂ ನೂತನ ಮುಖ್ಯಮಂತ್ರಿ ಹಾಗೂ ಶಾಸಕರು ಅಗತ್ಯಕ್ರಮ ಜರುಗಿಸಿ ರೈತರ ಹಿತಾಸಕ್ತಿ ಕಾಪಾಡುವರೇ ಎಂಬುದನ್ನು ಕಾದು ನೋಡಬೇಕಾಗಿದೆ.