ಜನತೆ ವಿಶ್ವಾಸಕ್ಕೆ ದ್ರೋಹ ಬಗೆಯಲಾರೆ
ಹಿರೇಕೆರೂರು: ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ನನ್ನ ಗೆಲ್ಲಿಸಿದ್ದು, ಅವರ ವಿಶ್ವಾಸಕ್ಕೆ ಎಂದು ದ್ರೋಹ ಬಗೆಯಲಾರೆ ಎಂದು ಶಾಸಕ ಯು.ಬಿ. ಬಣಕಾರ ನುಡಿದರು.
ಅವರು ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಜಿಪಂ ಹಾವೇರಿ, ತಾಪಂ ಹಿರೇಕೆರೂರು, ಗ್ರಾಪಂ ಕುಡುಪಲಿ ಆಶ್ರಯದಲ್ಲಿ ಜರುಗಿದ 2010-11ನೇ ಸಾಲಿನ ಎಂಎನ್ಆರ್, ಇಜಿಎ ಅಡಿಯಲ್ಲಿ ನೂತನವಾಗಿ ನಿರ್ಮಿಸಿದ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆ ಗ್ರಾಮಾಭಿವೃದ್ಧಿಗೆ ಉತ್ತಮ ಯೋಜನೆಯಾಗಿದೆ. ಇದರ ಸದುಪಯೋಗಪಡಿಸಿಕೊಂಡು ಉತ್ತಮವಾದ ಕಾರ್ಯಗಳನ್ನು ಮಾಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು. ತಾವು ಸಹ ತಾಲೂಕಿನ ವಿವಿಧ ಯೋಜನೆಗಳಿಗೆ ಸಾಧ್ಯವಿದ್ದಷ್ಟು ಶ್ರಮವಹಿಸಿ ಮಂಜೂರ ಮಾಡಿಸುವುದಾಗಿ ತಿಳಿಸಿದರು. ಗ್ರಾಮದ ಬೇಡಿಕೆಗಳನ್ನು ಹಂತಹಂತವಾಗಿ ಹಾಗೂ ಶಾಸಕರ ನಿಧಿಯಿಂದ ಹಣ ಬಿಡುಗಡೆ ಮಾಡುವ ಮೂಲಕ ಗ್ರಾಮಾಭಿವೃದ್ಧಿಗೆ ಕೊಡುಗೆ ನೀಡುತ್ತೇನೆ ಎಂದರು.
ಸದುಪಯೋಗ ಪಡೆಯಿರಿ: ರಾಣಿಬೆನ್ನೂರ ಶಾಸಕ ಕೆ.ಬಿ. ಕೋಳಿವಾಡ ಮುಖ್ಯ ಅತಿಥಿಗಳಾಗಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾಲೂಕಿನ ಸರಳ ಸಜ್ಜನ ರಾಜಕಾರಣಿ ಎನಿಸಿಕೊಂಡ ಯು.ಬಿ. ಬಣಕಾರ ಶಾಸಕರಾಗಿದ್ದಾರೆ. ಇದೀಗ ಉದ್ಘಾಟನೆಗೊಂಡ ರಾಜೀವ ಗಾಂಧಿ ಸೇವಾ ಕೇಂದ್ರ ಯುವಕರಿಗಾಗಿ ಇದ್ದು, ಯುವಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕು. ನನಗೆ ಸನ್ಮಾನ ಮಾಡಿದ ತಮಗೆಲ್ಲರಿಗೂ ನಾನು ಸದಾ ಚಿರಋಣಿ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ನೆಶ್ವಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಶಾಂತಮ್ಮ ಹಾದಿಮನಿ, ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ, ಉಪಾಧ್ಯಕ್ಷೆ ರೂಪಾ ಆಡೂರ, ಎಪಿಎಂಸಿ ಉಪಾಧ್ಯಕ್ಷ ನಾಗರಾಜ ಬೆನಕ್ಕಣ್ಣನವರ, ತಾಪಂ ಸದಸ್ಯ ಚಂದ್ರು ಅಣ್ಣಪ್ಪನವರ, ಎಚ್.ಡಿ. ಮುದಿರೆಡ್ಡೇರ, ಮರುಡೆಪ್ಪ ಚೌಡಕ್ಕನವರ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ದತ್ತಾತ್ರೇಯ ರಾಯ್ಕರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.