ತೀರ್ಥವಾಗಲಿದೆಯೇ ಕುಡಿವ ನೀರು!
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 29
ಇಡೀ ಜಿಲ್ಲೆ ಬಹುಗ್ರಾಮ ಕುಡಿಯುವ ನೀರು ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದ್ದರೂ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಹಾಹಾಕಾರ ಇರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
ತುಂಗಭದ್ರಾ ಹಾಗೂ ವರದಾ ನದಿಯಿಂದ ಜಿಲ್ಲೆಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ತುಂಗಭದ್ರಾ ನದಿ ನೀರು 12 ತಿಂಗಳುಗಳ ಕಾಲ ಲಭ್ಯವಾಗುತ್ತಿದ್ದರೂ ವರದಾ ನದಿ ಮಾತ್ರ ಇದರಿಂದ ಹೊರತಾಗಿರುವುದು ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಕಂಡು ಬರುವಲ್ಲಿ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಕೊಳವೆ ಬಾವಿಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ಉಪಯೋಗಿಸುವ ನೀರಿನ ಕೊರತೆ ಅಷ್ಟೊಂದು ಕಂಡು ಬರುತ್ತಿಲ್ಲ. ಆದರೆ, ಕುಡಿಯುವ ನೀರು ಮಾತ್ರ ಈ ಜಿಲ್ಲೆಯ ಜನರಿಗೆ ತೀರ್ಥ ಸ್ವರೂಪವಾಗಿದೆ ಎಂದರೆ ತಪ್ಪಾಗಲಾರದು.
ಒಟ್ಟು 9 ಯೋಜನೆ: ತುಂಗಭದ್ರಾ ಹಾಗೂ ವರದಾ ನದಿಗಳಿಂದ ಬಹುಗ್ರಾಮ ಕುಡಿಯುವ ನೀರು ಪೂರೈಕೆಯ 9 ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ಪೈಕಿ ತುಂಗಭದ್ರಾ 4 ಯೋಜನೆಗಳನ್ನೊಳಗೊಂಡಿದ್ದರೆ, ವರದಾನದಿ 5 ಯೋಜನೆಗಳನ್ನೊಳಗೊಂಡಿದೆ. ವರದಾನದಿಯಲ್ಲಿ ಬೇಸಿಗೆ ದಿನದಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದ್ದರಿಂದ ಕೆಲವಷ್ಟು ಹಳ್ಳಿಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ತುಂಗಭದ್ರಾ ಬೈರನಪಾದ ಯೋಜನೆ ಅಡಿಯಲ್ಲಿ 46 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಹೊಂದಲಾಗಿದೆ. ಇದೇ ರೀತಿಯಾಗಿ ಕೆಲಂಗೇರಿ 22 ಹಳ್ಳಿ ಹಾಗೂ ಕುದರಿಹಾಳ ಯೋಜನೆಯಡಿಯಲ್ಲಿ 22 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿದೆ. ವರದಾನದಿಯಿಂದ ದೇವಿಹೊಸೂರ 6 ಹಳ್ಳಿಗಳನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಉಪ್ಪಹುಣಸಿ ಹಾಗೂ ಹಾನಗಲ್ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕುಸನೂರ, ಕೊಡ್ಲ ಸೇರಿದಂತೆ ಮತ್ತೊಂದು ಹಳ್ಳಿಯನ್ನು ಗುರುತಿಸಲಾಗಿದ್ದು ಈ ಕಾರ್ಯ ಪ್ರಗತಿ ಹಂತದಲ್ಲಿದೆ. ಹಿರೇಕೆರೂರ ತಾಲೂಕಿನಲ್ಲಿ ಬರುವ ರಟ್ಟಿಹಳ್ಳಿ ಗ್ರಾಮವೂ ಇದರ ಬಹುಗ್ರಾಮ ಕುಡಿಯುವ ನೀರು ಪೂರೈಕೆ ವ್ಯಾಪ್ತಿಯಲ್ಲಿ ಒಳಪಟ್ಟಿದ್ದು, ಈಗಾಗಲೇ ಕಾಮಗಾರಿ ಮುಗಿಯುವ ಹಂತದಲ್ಲಿದೆ.
ಶುದ್ಧೀಕರಣ ಘಟಕಗಳು: ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ವ್ಯಾಪ್ತಿಯಲ್ಲಿ ಸೇರ್ಪಡೆಗೊಂಡಿರುವ ಹಳ್ಳಿಗಳಿಗೆ ಶುದ್ಧ ಹಾಗೂ ಸ್ವಚ್ಛ ನೀರು ಪೂರೈಸಲು ಜಿಲ್ಲಾ ಪಂಚಾಯಿತಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ. ಆಯಾ ಹಳ್ಳಿ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲೇ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಇದು ಕುಡಿಯುವ ನೀರಿನ ಗುಣಮಟ್ಟ ಕಾಯ್ದುಕೊಂಡು ಬರಲು ಸಾಕಷ್ಟು ಸಹಕಾರಿಯಾಗಲಿದೆ ಎಂದು ಬೇರೆಯಾಗಿ ಹೇಳಬೇಕಿಲ್ಲ. ಮೊಟೆಬೆನ್ನೂರ ವ್ಯಾಪ್ತಿಯ ಕಲ್ಲೆದೇವರನಲ್ಲಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದರೆ, ಕನವಳ್ಳಿಯ ತಿಮ್ಮಾಪುರದಲ್ಲಿಯೂ ಘಟಕ ಹೊಂದಲಾಗಿದೆ. ನೆಗಳೂರ, ಮೇವುಂಡಿ, ಗಳಗನಾಥಗಳಲ್ಲಿಯೂ ಶುದ್ಧೀಕರಣ ಘಟಕಕ್ಕೆ ಚಾಲನೆ ನೀಡಲಾಗಿದ್ದು, ಆ ಪ್ರದೇಶದ ಜನತೆ ಈಗಾಗಲೇ ಶುದ್ಧ ಕುಡಿಯುವ ನೀರು ಪಡೆಯುವಂತಾಗಿದೆ.
ಕೆಲ ಗ್ರಾಮಗಳು ಹಿಂದಕ್ಕೆ: ವರದಾನದಿಯಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದ ಕೆಲವಷ್ಟು ಹಳ್ಳಿಗಳನ್ನು ಈ ಯೋಜನೆಯಿಂದ ಈಗಾಗಲೇ ಕೈಬಿಡಲಾಗಿದೆ. ಇದಕ್ಕೆ ಪ್ರಮುಖ ಕಾರಣ, ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದಾಗಿದೆ. ಪ್ರಸಕ್ತ ಮಳೆಗಾಲದಲ್ಲಿ ಉತ್ತಮ ರೀತಿಯ ಮಳೆಯಾದರೆ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಲ್ಲಿ ಹಳ್ಳಿಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯ ಎಂಬುದು ಜಿಪಂ ಅಧಿಕಾರಿಗಳ ಅಭಿಪ್ರಾಯ.
ಜಿಲ್ಲೆಯಾದ್ಯಂತ ಸಾಕಷ್ಟು ಕೊಳವೆ ಬಾವಿಗಳಿದ್ದರಿಂದ ಉಪಯೋಗಕ್ಕೆ ಸಾಕಷ್ಟು ನೀರು ಜನತೆಗೆ ಲಭ್ಯವಾಗುತ್ತಿದೆಯಾದರೂ ಕುಡಿಯುವ ನೀರಿನ ಹಾಹಾಕಾರ ಬಹಳಷ್ಟು ಹಳ್ಳಿಗಳಲ್ಲಿ ಇಂದಿಗೂ ಕಂಡು ಬರುತ್ತಿದೆ. ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಸಂಪೂಣವಾಗಿ ಅನುಷ್ಠಾನಕ್ಕೆ ಬಂದಲ್ಲಿ ಈ ಸಮಸ್ಯೆಗೆ ಸಾಕಷ್ಟು ಮಟ್ಟಿಗೆ ಪರಿಹಾರ ಸಿಗಲು ಸಾಧ್ಯ ಎಂದು ಬೇರೆಯಾಗಿ ಹೇಳಬೇಕಿಲ್ಲ. ಪ್ರಸಕ್ತ ಮಳೆಗಾಲದಲ್ಲಿ ಸರಿಯಾದ ರೀತಿಯಲ್ಲಿ ಮಳೆಯಾಗದಿದ್ದಲ್ಲಿ ಉಪಯೋಗಿಸುವ ನೀರಿಗೂ ಕುತ್ತು ಬರುವ ಭೀತಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಇದನ್ನು ಅರಿತಿರುವ ಜಿಪಂ, ಈಗಾಗಲೇ ಜಿಲ್ಲೆಯಲ್ಲಿರುವ ಎಲ್ಲ ಕೊಳವೆ ಬಾವಿಗಳ ಅಂಕಿ ಸಂಖ್ಯೆ ಕಲೆ ಹಾಕಿದೆ ಅಲ್ಲದೆ, ಯಾವ ಕೊಳವೆ ಬಾವಿಗಳು ಸರಿಯಾದ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ತಿಳಿದುಕೊಂಡಿದೆ. ದುರಸ್ತಿಗೊಳಗಾದ ಕೊಳವೆ ಬಾವಿಗಳ ದುರಸ್ತಿ, ಹೊಸ ಕೊಳವೆ ಬಾವಿಗಳಿಗಾಗಿ ರು. 814 ಲಕ್ಷಗಳ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಬಿ.ಕೆ. ಮಹೇಂದ್ರ