ತುಂಗಾ ತೀರ ಜನತೆಗೆ ನೀಗದ ದಾಹ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ, 26
ತಾಲೂಕಾದ್ಯಂತ ಕುಡಿಯುವ ನೀರಿನ ಬವಣೆ ಎದ್ದು ಕಾಣುತ್ತಿದ್ದರೂ ಸಹ ಕುಡಿಯುವ ನೀರು ಸರಬರಾಜಿಗೆ ವಿದ್ಯುತ್ ಕೊರತೆ ಎದುರಾದಾಗ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೊದಲೆ ಬರಗಾಲದಿಂದ ತತ್ತರಿಸಿದ ಜನ, ಜಾನುವಾರುಗಳಿಗೆ ವಿದ್ಯುತ್ ಇದ್ದಾಗ ಮಾತ್ರ ನೀರು ಎಂಬಂತಾಗಿದೆ.
ಮಲೆನಾಡು ಸೆರಗಿನಲ್ಲಿರುವ ಹಿರೇಕೆರೂರು ತಾಲೂಕು ಉತ್ತಮ ಮಳೆ ಆದರೆ ಬರವಿದ್ದರೂ ಕುಡಿಯುವ ನೀರಿಗೆ ತೊಂದರೆ ಇರಲಿಲ್ಲ. ಏಕೆಂದರೆ ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರವಾಗಿರುತ್ತಿದ್ದವು. ಆದರೆ, ಕಳೆದ ಮೂರು ವರ್ಷಗಳಲ್ಲಿ ತಾಲೂಕಿನ ಯಾವುದೇ ಕೆರೆಗಳು ಭರ್ತಿಯಾಗದಿರುವುದರಿಂದ ಪ್ರಸಕ್ತ ಕುಡಿಯುವ ನೀರಿಗೆ ತೀವ್ರ ಅಡಚಣೆಯಾಗಿದೆ.
ಗ್ರಾಮಗಳು ತತ್ವಾರ: ತಾಲೂಕಿನಲ್ಲಿ 126 ಗ್ರಾಮಗಳಿದ್ದು, ಅವುಗಳಲ್ಲಿ ಕನಿಷ್ಠ 25 ಗ್ರಾಮಗಳು ಅತಿ ದೊಡ್ಡ ಗ್ರಾಮಗಳಾಗಿವೆ. ಆ ಗ್ರಾಮಗಳಲ್ಲಿ ಬೇಸಿಗೆ ಬಂತು ಎಂದರೆ ಕುಡಿಯುವ ನೀರಿನ ತತ್ವಾರ ಎದ್ದು ಕಾಣುತ್ತದೆ. ತಾಲೂಕಿನಲ್ಲಿ ಒಟ್ಟು 2,11,819 ಜನರಿದ್ದು, ಅವರಲ್ಲಿ 1,08,435 ಪುರುಷರು, 1,03379 ಜನ ಮಹಿಳೆಯರಿದ್ದಾರೆ. ಇವರೆಲ್ಲರಿಗೂ ದಿನವೊಂದಕ್ಕೆ ತಲಾ 55 ಲೀಟರ್ ನೀರಿನ ಆವಶ್ಯಕತೆ ಇದೆ. ತಾಲೂಕಿನಲ್ಲಿ ಜನತೆಗೆ ಕುಡಿಯುವ ನೀರಿನ ಮೂಲ ಎಂದರೆ ಕೊಳವೆ ಬಾವಿಗಳ ಮೂಲಕ ಮೇಲ್ಮಟ್ಟದ ಜಲಗಾರ ನಿರ್ಮಿಸಿ ನಳಗಳ ಮೂಲಕ ಹಾಗೂ ಮಿನಿ ಟ್ಯಾಂಕುಗಳ ಮೂಲಕ ನೀರು ಸರಬರಾಜು ಮಾಡುವುದಾಗಿದೆ. ಮತ್ತೊಂದೆಡೆ ಬಹುಗ್ರಾಮ ನದಿ ನೀರು ಸರಬರಾಜು ಯೋಜನೆಯಡಿ ನೀರು ಸರಬರಾಜು ಮಾಡಲಾಗುತ್ತದೆ. ನೀರು ಸರಬರಾಜು ಕುರಿತಂತೆ 2012-13ನೇ ಸಾಲಿನಲ್ಲಿ ಕೊರೆದ ಕೊಳವೆ ಬಾವಿಗಳು 203 ಇದ್ದು ಅವುಗಳಲ್ಲಿ 99 ಸಫಲವಾಗಿವೆ. 104 ವಿಫಲವಾಗಿವೆ. ವಿಫಲಗೊಂಡ ಕೊಳವೆ ಬಾವಿಗಳಿರುವ ಗ್ರಾಮಗಳು ನೀರಿನ ಮೂಲ ಹುಡುಕಿ ಪುನಃ ಕೊಳವೆ ಬಾವಿ ಕೊರೆಸುತ್ತಿದ್ದೇವೆ. ನೀರಿಲ್ಲದ ಗ್ರಾಮಕ್ಕೆ ಸಮೀಪದ ಗ್ರಾಮದಲ್ಲಿರುವ ಕೊಳವೆ ಬಾಯಿಯಿಂದ ನೀರು ಸರಬರಾಜು ಮಾಡುತ್ತಿದ್ದೇವೆ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕಾಧಿಕಾರಿ ಎಂ.ಎನ್. ಮಾಳಿಗೇರ ತಿಳಿಸಿದರು.
27 ಗ್ರಾಮಗಳಿಗೆ ಸೂಕ್ತ ನೀರು: ತಾಲೂಕಿನ ಗಡಿ ಭಾಗದಲ್ಲಿರುವ ತುಂಗಭದ್ರಾ ನದಿಯ ಬಳಿ ಬೈರನಪಾದ ಗ್ರಾಮದಿಂದ ಎರಡು ಹಂತದಲ್ಲಿ ನೀರು ಸರಬರಾಜು ಮಾಡುತ್ತಿದ್ದು, ಮೊದಲನೇ ಹಂತದಲ್ಲಿ ಕುಡುಪಲಿ ಗ್ರಾಮ ಸೇರಿದಂತೆ ರಾಣಿಬೆನ್ನೂರು ತಾಲೂಕಿನ 15 ಗ್ರಾಮಗಳು ಈ ಯೋಜನೆಯ ಮೂಲಕ ನೀರು ಪಡೆಯುತ್ತಿವೆ. ಎರಡನೇ ಹಂತ ಪ್ರಸಕ್ತ ವರ್ಷದ ಜನವರಿ ತಿಂಗಳಿನಿಂದ ಪ್ರಾರಂಭಗೊಂಡಿದ್ದು, ಇಡೀ ತಾಲೂಕಿನ ಅತಿ ದೊಡ್ಡ ಗ್ರಾಮಗಳಾದ ಕಡೂರು ಹಾಗೂ ರಟ್ಟಿಹಳ್ಳಿ ಸೇರಿದಂತೆ 12 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ತಾಲೂಕು ಕೇಂದ್ರ ಹಿರೇಕೆರೂರು ಪಟ್ಟಣದಲ್ಲಿ ಒಟ್ಟು 19,186 ಜನಸಂಖ್ಯೆಯಿದ್ದು, ಅದರಲ್ಲಿ 9,740 ಪುರುಷರು ಹಾಗೂ 9,446 ಮಹಿಳೆಯರು ಇದ್ದಾರೆ.
ಇವರೆಲ್ಲರಿಗೂ ತುಂಗಾಭದ್ರಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರತಿ 2 ಅಥವಾ 3ದಿನಕ್ಕೆ ನೀರು ಪೂರೈಸುವ ಮೂಲಕ ಪಟ್ಟಣದಲ್ಲಿ ನೀರಿನ ಬವಣೆ ಇಲ್ಲದಂತಾಗಿದೆ. ಜತೆಗೆ ಕೆಲವು ಪಂಪ್ಹೌಸ್ಗಳು ಮತ್ತು ಮಿನಿ ಟ್ಯಾಂಕುಗಳ ಮೂಲಕ ನೀರು ಕೊಡಲಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಾಜಕುಮಾರ ತಿಳಿಸಿದರು.
ಕೆರೆಗೆ ನೀರು ತುಂಬಿಸುವುದು ಅಗತ್ಯ: ಬರಗಾಲ ಹಿನ್ನೆಲೆಯಲ್ಲಿ ತಾಲೂಕಿನ ಕೆರೆಗಳಿಗೆ ನದಿ ನೀರು ತುಂಬಿಸಿದರೆ ಕುಡಿಯುವ ನೀರಿನ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದಾಗಿದೆ. ತಾಲೂಕಿನ ಯಾವೊಬ್ಬ ಜನಪ್ರತಿನಿಧಿ ಇತ್ತ ಗಮನಹರಿಸದಿರುವುದು ಜನತೆ ಸಂಕಷ್ಟಕ್ಕೆ ಸಿಲುಕಲು ಕಾರಣವಾಗಿದೆ. ಕೆರೆಗಳಿಗೆ ನದಿಯಿಂದ ನೀರು ತುಂಬಿಸಿದರೆ ಬರ ಎನ್ನುವುದೆ ಇಲ್ಲವಾಗುತ್ತದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಆರ್.ವಿ. ಕೇಂಚಳ್ಳೇರ ತಿಳಿಸಿದರು.
ಒಟ್ಟಿನಲ್ಲಿ ತಾಲೂಕು ನೀರಿನ ಬವಣೆ ನೀಗಬೇಕಾದರೆ ನದಿಯಿಂದ ಮಳೆಗಾಲದಲ್ಲಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಭರ್ತಿ ಮಾಡಿದರೆ ಗ್ರಾಮಾಂತರ ಪ್ರದೇಶದಲ್ಲಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ನೀರಿನ ಬವಣೆಗೆ ಶಾಶ್ವತ ಪರಿಹಾರ ಕಂಡುಕೊಂಡಂತಾಗುತ್ತದೆ. ಇನ್ನಾದರೂ ಜನಪ್ರತಿನಿಧಿಗಳು ಗಮನ ಹರಿಸುತ್ತಾರಾ ಕಾದು ನೋಡಬೇಕಿದೆ.