ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಡಿವಾಳ ಸಮಾಜದವರು ಬೆಳೆಯಲಿ

Lingaraj Badiger
Updated On : 30 May 2013, 11:27 am

ಹಾನಗಲ್ಲ: ಶೋಷಿತ ಮಡಿವಾಳ ಸಮಾಜದವರು ಜಾಗೃತರಾಗಿ ಶೈಕ್ಷಣಿಕ, ಆರ್ಥಿಕವಾಗಿ ಬೆಳೆಯಬೇಕು ಎಂದು ಚಿತ್ರದುರ್ಗದ ಮಡಿವಾಳ ಗುರುಪೀಠದ ಜಗದ್ಗುರು ಮಡಿವಾಳ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ನುಡಿದರು.
ಬುಧವಾರ ತಾಲೂಕಿನ ಹನುಮನಕೊಪ್ಪ ಗ್ರಾಮದಲ್ಲಿ ನಡೆದ ಶ್ರೀಗಳ ಪುರಪ್ರವೇಶ ಹಾಗೂ ಗ್ರಾಮದ ಮಡಿವಾಳ ಸಮಾಜದಿಂದ ಶ್ರೀಗಳಿಗೆ ಸನ್ಮಾನ ಸಮಾರಂಭ, ಪಾದಪೂಜೆ ಕಾರ್ಯಕ್ರಮ ಮತ್ತು ಸಮಾಜ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಸಂಘಟಿತರಾಗಿ ಯಶಸ್ಸು ಸಾಧಿಸಿದ ಉಳಿದ ಸಮಾಜಗಳಂತೆ ಮಡಿವಾಳ ಸಮಾಜವೂ ಸಂಸ್ಕಾರಗಳನ್ನು ಅಳವಡಿಸಿಕೊಂಡು ಬೆಳೆಯಬೇಕು. ಒಗ್ಗಟ್ಟು, ಸಾಮೂಹಿಕ ಪ್ರಯತ್ನದಿಂದ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಮೇಲೆತ್ತುವ ಸಂಘಟಿತ ಹೋರಾಟ ನಡೆಯಬೇಕು ಎಂದರು.
ಮಾರ್ಗದರ್ಶನ ಆವಶ್ಯ: ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪಿ.ವೈ. ಗುಡಗುಡಿ, ವಿಜ್ಞಾನದ ಸಾಧನೆಯಿಂದಾಗಿ ಪ್ರಸ್ತುತದ ಬದುಕು ಯಾಂತ್ರೀಕೃತವಾಗುತ್ತಿದೆ. ಸಾಂಸ್ಕೃತಿಕ, ಸಾಮಾಜಿಕ ಮೌಲ್ಯಗಳು ದೂರವಾಗುತ್ತಿವೆ. ದುಡ್ಡೇ ದೊಡ್ಡಪ್ಪ ಎಂಬ ಭಾವದಿಂದ ಸಮಾಜದಲ್ಲಿ ಅಶಾಂತಿ, ನೀತಿ ಪಾಠಗಳಿಲ್ಲದ ಇಂದಿನ ಟಿ.ವಿ ಧಾರಾವಾಹಿಗಳು ಜನರನ್ನು ದಾರಿ ತಪ್ಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸತ್ಸಮಾಜದ ನಿರ್ಮಾಣಕ್ಕಾಗಿ ಗುರುಪೀಠಗಳ ಶ್ರೀಗಳ ಮಾರ್ಗದರ್ಶನ ಅವಶ್ಯ ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತೆಪ್ಪ ಮಡಿವಾಳರ, ಹನುಮನಕೊಪ್ಪ ಗ್ರಾಮ ಘಟಕದ ಅಧ್ಯಕ್ಷ ಪರಸಪ್ಪ ಮಡಿವಾಳರ, ಮುಖಂಡರಾದ ಜಿ.ಕೆ. ಮಡಿವಾಳರ, ಸುರೇಶ ಮಡಿವಾಳರ ಮಾತನಾಡಿದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಸತೀಶ ಸಾಗರೊಳ್ಳಿ, ಮಹೇಶ ವಾಸನದ, ಬಸವರಾಜ ತರವಂದಿ, ಮಾಲತೇಶ ಹೆರೂರ, ಪರಸಪ್ಪ ಮಡಿವಾಳರ ಇದ್ದರು.
ಮಾಲತೇಶ ಕಾಳಂಗಿ ಸ್ವಾಗತಿಸಿದರು. ಸುನೀಲ ಸಾಗರೊಳ್ಳಿ ನಿರೂಪಿಸಿದರು. ಇದಕ್ಕೂ ಮುನ್ನ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳನ್ನು ಮಹಿಳೆಯರು ಪೂರ್ಣ ಕುಂಭದೊಂದಿಗೆ ಗ್ರಾಮಕ್ಕೆ ಸ್ವಾಗತಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯವೈಭವಗಳ ಸಮೇತ ಶ್ರೀಗಳ ಮೆವರಣಿಗೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement