ಕೋಳಿವಾಡಗೆ ಸಚಿವ ಸ್ಥಾನ ನೀಡಿ
ರಾಣಿಬೆನ್ನೂರು: ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡಗೆ ಸಚಿವ ಸ್ಥಾನ ನೀಡಬೇಕು ಎಂದು ತಾಲೂಕಿನ ಅರೆಮಲ್ಲಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಕುರಿತು ಶುಕ್ರವಾರ ತಾಲೂಕಿನ ಅರೆಮಲ್ಲಾಪುರ ಗ್ರಾಮದ ಯುವ ಕಾಂಗ್ರೆಸ್ ಮುಖಂಡ ರವಿಂದ್ರ ಜಾಧವ ಮಾತನಾಡಿ, 40 ವರ್ಷಗಳಿಂದ ಕೆ.ಬಿ. ಕೋಳಿವಾಡರು ತಾಲೂಕಿನ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದಾರೆ. ನಾಲ್ಕು ಬಾರಿ ಕಾಂಗ್ರೆಸ್ನಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ. ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಸಿಎಂ ಸಿದ್ದರಾಮಯ್ಯ ರಾಣಿಬೆನ್ನೂರು ನಗರಕ್ಕೆ ಬಂದಿದ್ದಾಗ, ಕೆ.ಬಿ. ಕೋಳಿವಾಡರಿಗೆ ಮತ ನೀಡಿ ಆಯ್ಕೆ ಮಾಡಿರಿ ಅವರನ್ನು ಮಂತ್ರಿಯನ್ನಾಗಿ ಮಾಡುತ್ತೆವೆಂದು ಭರವಸೆ ನೀಡಿದ್ದರು. ಆ ಪ್ರಕಾರ ಮತದಾರರು ಕೆ.ಬಿ. ಕೋಳಿವಾಡರನ್ನು ಆಯ್ಕೆ ಮಾಡಿದ್ದು, ಸಿದ್ದರಾಮಯ್ಯನವರು ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದರೆ ಕೋಳಿವಾಡರಿಗೆ ಸಚಿವ ಸ್ಥಾನ ನೀಡಬೇಕು.
ಕೆ.ಬಿ. ಕೋಳಿವಾಡರಿಗೆ ಸಚಿವ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ವಹಿಸಿ ಜಿಲ್ಲಾದ್ಯಂತ ಕಾಂಗ್ರೆಸ್ ಬಲಪಡಿಸಲು ಹಾಗೂ ರಾಜ್ಯಾಭಿವೃದ್ಧಿಗೆ ಸಿದ್ದರಾಮಯ್ಯನವರು ಸಹಕರಿಸಬೇಕೆಂದು ರವೀಂದ್ರ ಜಾಧವ ವಿನಂತಿಸಿಕೊಂಡಿದ್ದಾರೆ. ರಮೇಶ ಸುರ್ವೆ, ಹಾಲೇಶ ನಾಗರಜ್ಜಿ, ಚಂದ್ರಪ್ಪ ಹಿರೇಬಿದರಿ, ನಿಂಗರಾಜ ಮಾಕನೂರು, ವೀರೇಶ ಬೆನ್ನೂರು, ಬಸವರಾಜ ನಾಗರಜ್ಜಿ, ಪರಶುರಾಮ ಹರಿಜನ ಸೇರಿದಂತೆ ಸುಮಾರು 70 ಜನರು ಸಹಿ ಮಾಡಿರುವ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಳುಹಿಸಿರುವುದಾಗಿ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.