ಜಿಲ್ಲೆಯಲ್ಲಿ 63 ಡೆಂಘೀ ಪ್ರಕರಣ ಪತ್ತೆ
ಹಾವೇರಿ: ಈ ವರ್ಷ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಪತ್ತೆಯಾದ 63 ಸಂಶಯಾಸ್ಪದ ಡೆಂಘೀ ಪ್ರಕರಣಗಳ ಪೈಕಿ ಒಬ್ಬ ವ್ಯಕ್ತಿ ಡೆಂಘೀ ರೋಗದಿಂದ ಮೃತಪಟ್ಟಿದ್ದಾನೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಘವೇಂದ್ರ ರಾವ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗ ಪತ್ತೆಯಾಗಿರುವ ಒಟ್ಟು 63 ಪ್ರಕರಣಗಳಲ್ಲಿ 43 ಡೆಂಘೀ ಎಂದು ಖಚಿತಪಟ್ಟಿವೆ. ಹಾವೇರಿಯಲ್ಲಿ 3, ರಾಣಿಬೆನ್ನೂರು-19, ಬ್ಯಾಡಗಿ-7, ಹಾನಗಲ್-2, ಸವಣೂರು-3, ಹಿರೇಕೆರೂರು-9 ಪ್ರಕರಣಗಳು ಪತ್ತೆಯಾಗಿವೆ. ಶಿಗ್ಗಾಂವಿಯಲ್ಲಿ ಇಲ್ಲಿತನಕ ಪ್ರಕರಣ ಪತ್ತೆಯಾಗಿಲ್ಲ. ಸಂಶಯಾಸ್ಪದ ಡೆಂಘೀ ಜ್ವರದಿಂದ ಮೂವರು ಮೃತಪಟ್ಟಿದ್ದರೂ ಪ್ರಯೋಗಾಲಯದ ವರದಿ ಸಕಾರಾತ್ಮಕವಾಗಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಎಲ್ಲ ಆರೋಗ್ಯ ಸಂಸ್ಥೆಗಳ ಮೂಲಕ ಆವಶ್ಯಕ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ರೋಗ ಲಕ್ಷಣಗಳು: ಈಡೀಸ್ ಇಜಿಪ್ಟೈ ಎಂಬ ಡೆಂಘೀ ಸೋಂಕುವುಳ್ಳ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವಿಕೆಯಿಂದ ಈ ರೋಗ ತಗುಲುತ್ತದೆ. ಅದರಲ್ಲಿಯೂ ಚಿಕ್ಕಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಈ ರೋಗ ತಗುಲುತ್ತಿದೆ. ಪ್ರಾರಂಭಿಕ ಹಂತದಲ್ಲಿ ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಳ್ಳುವುದು, ತೀವ್ರತರವಾದ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮೈ-ಕೈ, ಕೀಲು ನೋವು, ವಾಕರಿಕೆ, ವಾಂತಿಯಂತಹ ಲಕ್ಷಣಗಳನ್ನು ಹೊಂದಿರುತ್ತದೆ. 5ರಿಂದ 7 ದಿನಗಳೊಳಗೆ ರೋಗದ ಈ ಗುಣಲಕ್ಷಣಗಳು ಕಂಡು ಬರುತ್ತಿದೆ. ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಿ, ರಕ್ತ ಪರೀಕ್ಷೆ ಎನ್‌ಎಸ್1 (ಡೆಂಘೀ ಅಂಟಿಜನ್ ಪರೀಕ್ಷೆ) ಕಿಟ್ ಮೂಲಕ ಪರೀಕ್ಷೆಗೆ ಒಳಪಡಿಸಿ ಖಚಿತಪಡಿಸಲಾಗುತ್ತಿದೆ. ಖಚಿತಪಟ್ಟರೆ 1 ಗ್ರಾಂ ಆಂಟಿಬಾಡಿ ಹೊಂದಿದ ಡೆಂಘೀ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಇಂಥ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗೆ ಲಭ್ಯವಿರುವ ರೋಗ ನಿರೋಧಕ ಚುಚ್ಚುಮದ್ದುಗಳನ್ನು ನೀಡಿ ಗುಣಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ರೋಗ ಪತ್ತೆ ಹಚ್ಚುವ ಪ್ರಯೋಗಾಲಯಗಳಿಲ್ಲ. ಹುಬ್ಬಳ್ಳಿ, ಶಿವಮೊಗ್ಗ, ಮಣಿಪಾಲ, ದಾವಣಗೆರೆ ಆಸ್ಪತ್ರೆಗಳಲ್ಲಿ ಪರೀಕ್ಷಾ ಪ್ರಯೋಗಾಲಯಗಳಿರುತ್ತವೆ ಎಂದರು.
ಮುಂಜಾಗ್ರತೆ ಕ್ರಮ: ಡೆಂಘೀ ತಡೆಗೆ ಇಲಾಖೆಯಿಂದ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಜನರು ಇದರಿಂದ ಸುರಕ್ಷಿತವಾಗಿರಲು ಸೊಳ್ಳೆಗಳ ನಿಯಂತ್ರಣಕ್ಕೆ ಸೊಳ್ಳೆ ಪರದೆ ಬಳಕೆ, ಬಯಲು- ಮನೆ ಸುತ್ತ ಬಿಸಾಡಿದ ಪ್ಲಾಸ್ಟಿಕ್ ವಸ್ತುಗಳು, ಪಿಂಗಾಣಿ, ಮಡಕೆ, ಗಾಜಿನ ವಸ್ತುಗಳು, ಹಳೆ ಟೈರ್, ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಂಡರೆ ಆರೋಗ್ಯವಂತರಾಗಿ ಬದುಕಬಹುದು ಎಂದರು. ಡಾ. ಚಿಕ್ಕಣ್ಣ ಇದ್ದರು.
ಬುಡಪನಹಳ್ಳಿ 3 ಮಕ್ಕಳು ಆಸ್ಪತ್ರೆಗೆ
ಬ್ಯಾಡಗಿ: ತಾಲೂಕಿನಾದ್ಯಂತ ಡೆಂಘೀ ಪ್ರಕರಣಗಳು ಮುಂದುವರಿದಿದ್ದು, ಜ್ವರದಿಂದ ಬಳಲುತ್ತಿರುವ ತಾಲೂಕಿನ ಬುಡಪನಹಳ್ಳಿ ಗ್ರಾಮದ ಮೂರು ಮಕ್ಕಳನ್ನು ಚಿಕಿತ್ಸೆಗಾಗಿ ಶುಕ್ರವಾರ ದಾವಣಗೆರೆ ಎಸ್.ಎಸ್. ಹೈಟೆಕ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ವರಕ್ಕೆ ತುತ್ತಾದ ಬಾಲಕರನ್ನು ಆದಿತ್ಯ ಫಕ್ಕೀರೇಶ್ ಮರಬಸಣ್ಣನವರ, ವಿನಾಯಕ ಹನುಮಂತಪ್ಪ ಸುಂಕಾಪುರ ಹಾಗೂ ಆಕಾಶ ಮುರುಗೇಶ್ ಕರ್ಜಗಿ ಎಂಬುದಾಗಿ ತಿಳಿದು ಬಂದಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಲಮಾಣಿ ಮಾರ್ಗದರ್ಶನದಲ್ಲಿ ವೈದ್ಯಾಧಿಕಾರಿಗಳ ತಂಡವು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ಸುಮಾರು ಏಳೆಂಟು ಮನೆಗಳಲ್ಲಿ ಲಾರ್ವಾ ಸಂಗ್ರಹವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ತಾಲೂಕು ವೈದ್ಯಾಧಿಕಾರಿ ಹಾಗೂ ಆರೋಗ್ಯ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಾಯಿಸಿದ ನೀರು ಕುಡಿಯಬೇಕು, ಮನೆ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ, ಜ್ವರ ಕಾಣಿಸಿಕೊಂಡಲ್ಲಿ ನಿರ್ಲಕ್ಷ್ಯ ತೋರದೇ ಸಮೀಪದ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಂಡವು ಸಲಹೆ ನೀಡಿತು.
ಆರೋಪ: ಘಟನೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಎಪಿಎಂಸಿ ಮಾಜಿ ನಿರ್ದೇಶಕ ತಿರಕಪ್ಪ ಮರಬಸಣ್ಣನವರ, ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಗ್ರಾಮದ ತಗ್ಗುಪ್ರದೇಶಗಳಲ್ಲಿ ನೀರು ನಿಲ್ಲುತ್ತಿರುವ ಪರಿಣಾಮ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗುತ್ತಿದೆ. ಸ್ವಚ್ಛತೆ ಕಾರ್ಯಗಳನ್ನು ಕೈಗೊಳ್ಳದೇ ಗ್ರಾ.ಪಂ. ನಿರ್ಲಕ್ಷ್ಯ ವಹಿಸಿದ್ದು ಇದರಿಂದ ಸಾರ್ವಜನಿಕರು ನೋವು ಅನುಭವಿಸುವಂತಾಗಿದೆ. ಕಾರ್ಯಾಲಯಕ್ಕೆ ಒದಗಿಸಿರುವ ಫಾಗಿಂಗ್ ಮಷಿನ್ ದುರಸ್ತಿಯಿದ್ದು, ಹೀಗಾಗಿ ಹಲವಾರು ದಿನಗಳಿಂದ ಗ್ರಾಮದಲ್ಲಿ ಫಾಗಿಂಗ್ ಕಾರ್ಯ ಸ್ಥಗಿತಗೊಂಡಿದೆ ಎಂದು ಅರೋಪಿಸಿದರು.
ಗ್ರಾಮಸ್ಥ ಕರಿಯಪ್ಪ ಕ್ವಾಗಳಿ ಮಾತನಾಡಿ, ಡೆಂಘೀ ಜ್ವರ ಪತ್ತೆ ಹಚ್ಚುವುದು, ಚಿಕಿತ್ಸೆಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳಿಲ್ಲ, ಡೆಂಘೀ ಗುರುತಿಸಲು ಆರೋಗ್ಯ ಇಲಾಖೆ ಅಶಕ್ತ. ರೋಗಕ್ಕೆ ತುತ್ತಾದವರು ಹಣ ತೆತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಿದೆ. ಇದು ಬಡವರಿಂದ ಸಾಧ್ಯವಾಗದ ಮಾತು, ಕೂಡಲೇ ಆರೋಗ್ಯ ಇಲಾಖೆ ಸರ್ಕಾರದ ಎಲ್ಲ ಪ್ರಾಥಮಿಕ ಕೇಂದ್ರಗಳಲ್ಲಿ ಡೆಂಘೀ ಚಿಕಿತ್ಸೆಗಾಗಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದರು.
ರಕ್ತ ಪರೀಕ್ಷಿಸಿಕೊಳ್ಳಿ: ತಾಲೂಕು ವೈದ್ಯಾಧಿಕಾರಿ ಬಿ.ಆರ್. ಲಮಾಣಿ ಜ್ವರ ಬಂದಾಕ್ಷಣ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು 2 ದಿನಕ್ಕೊಮ್ಮೆ ಖಾಲಿ ಮಾಡಿ. ಹಗಲು ಸೊಳ್ಳೆ ಪರದೆಯಿಲ್ಲದೆ ಮಲಗಬಾರದು, ಒಡೆದ ಬಾಟಲಿ, ಬಲ್ಬು, ಚಿಪ್ಪು, ಟೈರ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಿ. ನೀರು ತುಂಬಿರುವ ಪಾತ್ರೆಗಳನ್ನು ಕಡ್ಡಾಯವಾಗಿ ಮುಚ್ಚಿಡುವಂತೆ ಗ್ರಾಮಸ್ಥರಿಗೆ ಸೂಚಿಸಿದರು.